ಜಾಗತೀಕರಣದಿಂದ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ: ಗುಲ್ಜರ್ಬಾನು
ಕ.ಪ್ರ.ವಾರ್ತೆ ತುಮಕೂರು ಮಾ 31
ಜಾಗತೀಕರಣದಿಂದ ಮಹಿಳೆಯರ ಮೇಲೆ ದೌರ್ಜನ್ಯಗಳ ಹೆಚ್ಚಳವಾಗಿದೆ ಎಂದು ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಹ ಸಂಚಾಲಕಿ (ಸಿಐಟಿಯು) ಗುಲ್ಜರ್ಬಾನು ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಸಿಐಟಿಯು ವತಿಯಿಂದ ಶಿರಾಗೇಟ್ನಲ್ಲಿ ಏರ್ಪಾಟಾಗಿದ್ದ ದುಡಿಯುವ ಮಹಿಳೆಯರ ದಿನಾಚರಣೆಯಲ್ಲಿ ಅತಿಥಿಗಳಾಗಿ ಮಾತನಾಡಿದರು. ಜಾಗತೀಕರಣ ಮಹಿಳೆಯರನ್ನು ಸರಕಾಗಿಸಿದೆ. ಮಾಧ್ಯಮ, ಜಾಹಿರಾತು, ಸಿನಿಮಾ, ಧಾರಾವಾಹಿಗಳು ಸೇರಿ ಸೃಷ್ಟಿಸಿರುವ ವಾತಾವರಣವೇ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಹಾಗೂ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು. ಸಮನ್ವಯ ಸಮಿತಿಯ ಶೋಭಾ ಮಾತನಾಡಿ, ಮಹಿಳಾ ಸಂಘಟಕರು ಸಂಘಟಿತರಾದರೆ, ಮಾಲೀಕರು ವಿಪರೀತ ಕಿರುಕುಳ ನೀಡುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗಳು ಬೆಟ್ಟದಷ್ಟಿವೆ. ಸರ್ಕಾರ ಮಹಿಳೆಯರ ಸಮಸ್ಯೆ, ವಿಶೇಷವಾಗಿ ದುಡಿಯುವ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕಿದೆ ಎಂದರು.
ಸರಿಪಡಿಸಬೇಕು: ಸುಗುಣ ಪೌಲ್ಟ್ರಿ ಪಾರಂ ಕಾರ್ಮಿಕ ಸಂಘದ ಮುಖಂಡೆ ಗಂಗತಾಯಮ್ಮ ಮಾತನಾಡಿ, ಗುತ್ತಿಗೆ ಕಾರ್ಮಿಕ ಪದ್ಧತಿಯಡಿ ಮಹಿಳೆಯರನ್ನು ವಿಪರೀತವಾಗಿ ಶೋಷಿಸಲಾಗುತ್ತಿದೆ. ಕೆಲಸದ ಭದ್ರತೆಯಿಲ್ಲದೆ ಅಭದ್ರತೆಯ ವಾತಾವರಣದಲ್ಲೇ ಬದುಕಬೇಕಾಗಿದೆ. ಅತಿ ಒತ್ತಡದಲ್ಲಿ ದುಡಿಯುವ ಮಹಿಳೆಯರು ಬದುಕಬೇಕಾಗಿದೆ. ಮೊದಲು ಇದನ್ನು ಸರಿಪಡಿಸಬೇಕಾಗಿದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ಮುಜೀಬ್, ಸಿಐಟಿಯು ತುಮಕೂರು ತಾಲೂಕು ಕಾರ್ಯದರ್ಶಿ ಷಣ್ಮುಖಪ್ಪ, ತಾಲೂಕು ಸಹಕಾರ್ಯದರ್ಶಿ ಶಿವಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಉಪಸ್ಥಿತರಿದ್ದರು.
ನಿರ್ಣಯ: ಮಹಿಳೆಯರು ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ ರಚಿಸಬೇಕು. ಅದು ಸಕ್ರಿಯ ಹಾಗೂ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಮಹಿಳೆಯರನ್ನು ಸರಕಾಗಿ ಬಿಂಬಿಸುವ ಜಾಹಿರಾತು ಹಾಗೂ ಸಂಬಂಧಪಟ್ಟವರ ವಿರುದ್ಧ ಜಾಗೃತಿ ಮೂಡಿಸಬೇಕು. ಮಹಿಳೆ ಮೇಲಿನ ಎಲ್ಲ ರೀತಿಯ ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸಬೇಕು.ಮುತ್ತುರಾಜ್ ಸ್ವಾಗತಿಸಿ, ಬಸವರಾಜು ವಂದಿಸಿದರು.
ಕಾಡಾನೆ ತುಳಿತಕ್ಕೆ ರೈತ ಸಾವು
ಕ.ಪ್ರ.ವಾರ್ತೆ ತಿಪಟೂರು ಮಾ 31
ತಾಲೂಕಿನ ಹೊನ್ನವಳ್ಳಿ ಹೋಬಳಿ ಬಳುವನೇರಲು ರಂಗಾಪುರದ ಸಾಮಾಜಿಕ ಅರಣ್ಯ ಪ್ರದೇಶದ ಬಳಿ ಕಾಡಾನೆಯೊಂದು ಲಚ್ಚಾನಾಯಕ (40) ಎಂಬ ರೈತನನನ್ನು ತುಳಿದು ಸಾಯಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ದಾಂಧಲೆ ನಡೆಸಿ, ನಂತರ ತಿಪಟೂರು ಕಡೆಗೆ ಶನಿವಾರ ಮಧ್ಯಾಹ್ನ ಆಗಮಿಸಿದ ಕಾಡಾನೆಗಳು ಬಳುವನೇರಲು ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟ ವಿಷಯ ತಿಳಿದ ಅಧಿಕಾರಿಗಳು ಸಂಜೆ ವೇಳೆಗೆ ಕಾಡಿಗೆ ಬೆಂಕಿ ಹಚ್ಚಿ, ಆನೆಗಳನ್ನು ಓಡಿಸಲು ಪ್ರಯತ್ನಿಸಿದಾಗ ಕೆಲ ಜನರು ಕೂಗಾಟ ನಡೆಸಿದ್ದರು. ಆ ಸಮಯದಲ್ಲಿ ಆನೆಗಳು ಓಡಲು ಪ್ರಾರಂಭಿಸಿದವು. ಲಚ್ಚಾನಾಯಕ ಬೈಕಿನಲ್ಲಿ ಆನೆಗಳ ಹಿಂದೆ ಹೋಗುತ್ತಿರುವ ಸಮಯದಲ್ಲಿ ವ್ಯಗ್ರಗೊಂಡು ಆನೆಗಳು ಹಿಂದಿನಿಂದ ಬರುತ್ತಿದ್ದ ಲಚ್ಚನಾಯಕನ ಮೇಲೆ ಕೆಂಗಣ್ಣು ಬೀರಿವೆ. ಸಂದರ್ಭ ಅರಿತ ಲಚ್ಚಾನಾಯಕ ತೋಟದ ಸಾಲುಗಳ ಕಡೆಗೆ ಬೈಕ್ ನಿಲ್ಲಿಸಿ ಓಡಲು ಪ್ರಾರಂಭಿಸಿದರೂ ಆನೆ ಬಿಡದೆ ಅಟ್ಟಿಸಿಕೊಂಡು ಹೋಗಿ ಮನಸೋ ಇಚ್ಛೆ ತುಳಿದು ಸಾಯಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶವಸಂಸ್ಕಾರಕ್ಕೆ 10 ಸಾವಿರ ರು. ನೀಡಿದ್ದು, 5 ಲಕ್ಷ ಇಲಾಖೆ ನೀಡುವ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

