ವೃದ್ಧಾಶ್ರಮಗಳ ಹೆಚ್ಚಳ: ಭಾರತೀಯ ಸಮಾಜ ಅಧೋಗತಿಯತ್ತ- ಹನುಮಂತಯ್ಯ ಅಭಿಮತ
ಕ.ಪ್ರ. ವಾರ್ತೆ ತುಮಕೂರು ಮಾ.31
ವೃದ್ಧಾಶ್ರಮಗಳ ಹೆಚ್ಚಳ ಭಾರತೀಯ ಸಮಾಜ ಅಧೋಗತಿಯತ್ತ ಸಾಗುತ್ತಿರುವ ಸಂಕೇತ ಎಂದು ನಿವೃತ್ತ ಪ್ರಿನ್ಸಿಪಾಲ್ ಎಚ್. ಹನುಮಂತಯ್ಯ ವಿಷಾದಿಸಿದರು. ಅವರು ತುಮಕೂರು ನಗರ ಹೊರವಲಯದ ಮೈದಾಳ ಗ್ರಾಮದ ಶಿರಡಿ ಸಾಯಿಬಾಬಾ ವೃದ್ಧಾಶ್ರಮದಲ್ಲಿ ಮಾರುತಿ ಮಿತ್ರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಮನೋಸ್ಥಿತಿ ಬದಲಾದಂತೆ ಅಂದರೆ ವಿಕೃತಿ ಹೆಚ್ಚಳವಾದಂತೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ. ಇದು ನಿಜಕ್ಕೂ ಆತಂಕದ ಸಂಗತಿ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತದಲ್ಲಿ ಮತ್ತಷ್ಟು ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಇದೊಂದು ಆಘಾತಕಾರಿ ಬೆಳವಣಿಗೆ ಎಂದರು. ವೃದ್ಧಾಪ್ಯದಲ್ಲಿ ಕಾರ್ಯಚಟುವಟಿಕೆಗಳಿಂದ ಇರಲು ಬೇಕಾದ ಕ್ರಮಗಳ ಕುರಿತು ಹನುಮಂತಯ್ಯ ಮಾಹಿತಿ ನೀಡಿದರು.
ಶಾಶ್ವತವಲ್ಲ: ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಸಿಇಓ ಗೋವಿಂದರಾಜು ಮಾತನಾಡಿ, ಯಾವುದೇ ವ್ಯಕ್ತಿಗೆ ಶರೀರ ಹಾಗೂ ಐಶ್ವರ್ಯ ಶಾಶ್ವತವಲ್ಲ. ಇವೆರಡು ಒಂದಲ್ಲ ಒಂದು ದಿನ ನಶಿಸಿ ಹೋಗುವಂತದ್ದು. ಮಾನವೀಯತೆಗೆ ಬೆಲೆ ನೀಡಿ, ಇತರರನ್ನು ಪ್ರೀತಿಸಿ ಎಂದರು. ನಮ್ಮೆದುರಿಗೆ ಓಡಾಡುವರೆಲ್ಲಾ ನಮ್ಮವರೇ ಎಂದು ತಿಳಿದು ತೃಪ್ತರಾಗಿ ಬಾಳುವುದನ್ನು ಕಲಿಯಬೇಕು ಎಂದರು. ವ್ಯಕ್ತಿ ಹುಟ್ಟಿದ ಮೇಲೆ ಸಾವು ನಿಶ್ಚಿತ. ಆದರೆ ಬದುಕಿರುವಾಗ ನಾಲ್ವರಿಗೆ ಬೇಕಾದ ವ್ಯಕ್ತಿಯಾಗಿ ಬದುಕುವುದನ್ನು ಕಲಿಯಬೇಕು. ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿ, ಕೆಲವರಿಗಾದರೂ ಉಪಯುಕ್ತ ವ್ಯಕ್ತಿಯಾಗಿ ಬದುಕಿದಾಗ ವ್ಯಕ್ತಿಯ ಜೀವನ ಸಾರ್ಥಕವಾಗುತ್ತದೆ. ವದ್ಧಾಶ್ರಮದಲ್ಲಿ ತಮ್ಮ ಇಳಿವಯಸ್ಸಿನ ಜೀವನ ಕಳೆಯುತ್ತಿರುವ ವ್ಯಕ್ತಿಗಳು ತಮ್ಮ ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸ ಮಾಡಿರಬಹುದು. ಅದು ನಿಮ್ಮನ್ನು ಕಾಯುತ್ತದೆ ಎಂದರು.
ಕಣ್ಣಿಗೆ ಕಾಣುವ ದೇವರು: ಕಣ್ಣಿಗೆ ಕಾಣುವ ದೇವರೆಂದರು ತಂದೆ - ತಾಯಿ. ಇಳಿವಯಸ್ಸಿನಲ್ಲಿ ಅವರ ಸೇವೆ ಮಾಡುವುದು ಪೂರ್ವಜನ್ಮದ ಸುಕೃತ ಎಂದ ಗೋವಿಂದರಾಜು, ಆದರೆ ಇದು ಸಾಧ್ಯವಾಗುತ್ತಿಲ್ಲ. ಸಮಾಜ ಬದಲಾದಂತೆ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಮಕ್ಕಳು ಜೀವನದ ಕೊನೆಗಾಲದಲ್ಲಿ ನೋಡಿಕೊಳ್ಳಲಿಲ್ಲ ಎಂಬ ಕೊರಗನ್ನು ಬಿಟ್ಟು, ಮುಂದಿನ ಜೀವನವನ್ನು ಸಂತೋಷವಾಗಿ ಕಳೆಯುವಂತೆ ಕರೆ ನೀಡಿದರು. ಶಿರಡಿ ಸಾಯಿಬಾಬಾ ವೃದ್ಧಾಶ್ರಮಕ್ಕೆ ಸಹಕಾರ ನೀಡುವ ಭರವಸೆಯನ್ನು ಜಿಪಂ ಸಿಇಓ ಇದೇ ಸಂದರ್ಭದಲ್ಲಿ ನೀಡಿದರು.
ಮಾರುತಿ ಮಿತ್ರ ಬಳಗ ಸ್ಥಾಪನೆ: ಪತ್ರಕರ್ತ ಚಿ.ನಿ. ಪುರುಷೋತ್ತಮ್ ಮಾತನಾಡಿ, ಸಮಾನ ಮನಸ್ಕ ಗೆಳೆಯರೆಲ್ಲಾ ಸೇರಿ ಮಾರುತಿ ಮಿತ್ರ ಬಳಗ ಸ್ಥಾಪಿಸಿ, ಸಮಾಜ ಸೇವೆಯಲ್ಲಿ ತೊಡಗಿವುದು ಸಂತೋಷದ ಸಂಗತಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

