ಕಲ್ಪತರು ಜಿಲ್ಲೆಯ ಕೋಟೆ ಕಟ್ಟುವವರ್ಯಾರು?
ಕ.ಪ್ರ. ವಾರ್ತೆ ತುಮಕೂರು ಮೇ 7
ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಕಲ್ಪತರು ಜಿಲ್ಲೆ ಎಂದೇ ಖ್ಯಾತಿ ಗಳಿಸಿರುವ ತುಮಕೂರು ಜಿಲ್ಲೆಯ ಮತದಾರರು ಯಾವ ಪಕ್ಷಕ್ಕೆ ಮಣೆ ಹಾಕುತ್ತಾನೆ ಎಂಬ ಚರ್ಚೆ ನಡೆದಿದೆ.
ಈ ಹಿಂದೆ ತುಮಕೂರು ಜಿಲ್ಲೆ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಆನಂತರ ಕಾಂಗ್ರೆಸ್ನ ಭದ್ರಕೋಟೆಯನ್ನು ಜೆಡಿಎಸ್ ಚಿಂದಿ ಮಾಡಿ ಪಾರುಪತ್ಯೆ ಮೆರೆದಿತ್ತು. ಒಂದು ಹಂತದಲ್ಲಿ ತುಮಕೂರು ಜಿಲ್ಲೆಯಲ್ಲಿ 9 ಕಡೆ ಕಾಂಗ್ರೆಸ್ ಜಯಬೇರಿ ಬಾರಿಸಿತ್ತು. ಕಳೆದ ಬಾರಿ ಜೆಡಿಎಸ್ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮಧುಗಿರಿ ಹಾಗೂ ಗುಬ್ಬಿಯಲ್ಲಿ ಜಯಭೇರಿ ಬಾರಿಸಿ ಮೊದಲ ಸ್ಥಾನ ಕಾಯ್ದಿರಿಸಿಕೊಂಡಿತ್ತು. ಕಾಂಗ್ರೆಸ್ ಶಿರಾ, ಕೊರಟಗೆರೆ, ಕುಣಿಗಲ್ನಲ್ಲಿ ಗೆದ್ದಿದ್ದವು. ಹಾಗೆಯೇ ಬಿಜೆಪಿ ತಿಪಟೂರು, ತುಮಕೂರು ಮತ್ತು ತುಮಕೂರು ಗ್ರಾಮಾಂತರ ಪ್ರದೇಶದಲ್ಲಿ ಗೆದ್ದು ಹಿಡಿತ ಸಾಧಿಸಿತ್ತು. ಪಾವಗಡದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಈ ಬಾರಿ ಯಾವ ಪಕ್ಷಕ್ಕೆ ಮತದಾರರು ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಸಲ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಕೆ.ಎನ್. ರಾಜಣ್ಣ, ಬಿ. ಸತ್ಯನಾರಾಯಣ, ಡಿ. ನಾಗರಾಜಯ್ಯ ಸೇರಿದಂತೆ ಘಟಾನುಘಟಿ ರಾಜಕಾರಣಿಗಳ ಭವಿಷ್ಯ ನಿರ್ಧಾರವಾಗಲಿದೆ.
ಬೆಂಗಳೂರಿನ ಉಪನಗರಿ: 11 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಹಳೇ ಮೈಸೂರು ಭಾಗದಲ್ಲಿ ಅತ್ಯಂತ ಸತ್ವಯುತ ಜಿಲ್ಲೆ. ಬೆಂಗಳೂರಿಗೆ 18 ಜಿಲ್ಲೆಗಳನ್ನು ಸಂಪರ್ಕಿಸುವ ಹೆಬ್ಬಾಗಿಲು ಜಿಲ್ಲೆ ಎಂಬ ಖ್ಯಾತಿಯೂ ಸೇರಿದಂತೆ ಭವಿಷ್ಯದ ಬೆಂಗಳೂರಿನ ಉಪನಗರಿ ಎಂಬ ಹಣೆ ಪಟ್ಟಿಯೂ ಇದೆ.
ಜಿ.ಪಂ. ಚುನಾವಣೆಯಲ್ಲಿ ಈ ಜಿಲ್ಲೆಯ ಪಾರುಪತ್ಯವನ್ನು ಜೆಡಿಎಸ್ ಮೆರೆದಿದೆ. ಒಂದರ್ಥದಲ್ಲಿ ಇತ್ತೀಚಿನ ದಿನಗಳಲ್ಲಿ ತುಮಕೂರು ಜೆಡಿಎಸ್ನ ಭದ್ರಕೋಟೆಯಾಗಿದೆ. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ.
ಕುತೂಹಲ: ಇಷ್ಟು ದೊಡ್ಡ ಜಿಲ್ಲೆಯಾದರೂ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳಿಗೆ ಸರ್ಕಾರದ ಮಟ್ಟದಲ್ಲಿ ದೊಡ್ಡ ಹುದ್ದೆ ಏನೂ ಲಭಿಸಿಲ್ಲ. ಹಾಲಿ ಕಾಂಗ್ರೆಸ್ನ ಇಬ್ಬರು ಪ್ರಭಾವಿ ಶಾಸಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಜಯಚಂದ್ರ. ಇವರಿಬ್ಬರು ಕ್ರಮವಾಗಿ ಕೊರಟಗೆರೆ ಮತ್ತು ಶಿರಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಒಟ್ಟಾರೆಯಾಗಿ ತುರುಸಿನ ಚುನಾವಣೆ ಮುಗಿದಿದ್ದು ಕಲ್ಪತರು ಜಿಲ್ಲೆಯಲ್ಲಿ ಯಾವ ಪಕ್ಷ ಅಧಿಪತ್ಯ ಸ್ಥಾಪಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

