ತುಮಕೂರು

ಮನೆಗಳಲ್ಲಿ ಕುಟುಂಬ ಪ್ರೀತಿ ಕಣ್ಮರೆ

Published On :

ಕ.ಪ್ರ.ವಾರ್ತೆ  ತುಮಕೂರು  ಮೇ 11
ಮನೆಗಳಲ್ಲಿ ಕುಟುಂಬ ಪ್ರೀತಿ ಕಾಣೆಯಾಗುತ್ತಿದ್ದು, ವಯಸ್ಸಾದವರು ಸಹಜ ಪ್ರೀತಿಯಿಂದ ವಂಚಿತರಾಗುತ್ತಿರುವುದು ಅತ್ಯಂತ ವಿಷಾದನೀಯ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಹೇಳಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಹೇಮಾದ್ರಿ ಇನ್ಸ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಸಮಾಜ ಕಾರ್ಯವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಅಮ್ಮಂದಿರ ಪಾತ್ರ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಕೀರ್ಣವಾಗುತ್ತಿರುವ ಇಂದಿನ ದಿನಗಳಲ್ಲಿ ಮನೆಗಳಲ್ಲಿ ಅಜ್ಜ, ಅಜ್ಜಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳಿಗೆ ನೀತಿಪಾಠ ಹೇಳಿಕೊಡುತ್ತಿದ್ದ ದಿನಗಳು ಮರೆಯಾಗಿ ಟಿವಿ ಮುಂದೆ ಕುಳಿತುಕೊಳ್ಳುವ ಕಾಲ ಬಂದಿದೆ. ಕುಟುಂಬದ ಸಂಬಂಧಿಕರ ಪ್ರೀತಿ, ವಾತ್ಸಲ್ಯ ಮರೆಯಾಗುತ್ತಿರುವುದು ದುರ್ದೈವ್ಯದ ಸಂಗತಿ ಎಂದರು.
ಕೊನೆ ಕಾಲದಲ್ಲಿ ವೃದ್ಧರು ಮಕ್ಕಳ ಪ್ರೀತಿ ಹಾಗೂ ಆರೈಕೆ ಕಾಣದೆ ಎಲ್ಲೆಲ್ಲೋ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದಿರುವುದು ಎಷ್ಟು ಸರಿ ಎಂದರು. ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ ತಾಯಂದಿರ ರಕ್ಷಣೆ ಹೇಗೆ ಎಂಬ ಬಗ್ಗೆ ಇಡೀ ಸಮಾಜ ಚಿಂತಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಲೇಖಕಿ ಸಿ.ಎಲ್. ಸುನಂದಮ್ಮ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಹುಟ್ಟಿದಾಗಿನಿಂದ ಮಕ್ಕಳನ್ನು ಸನ್ಮಾರ್ಗದತ್ತ ಕರೆದುಕೊಂಡು ಹೋಗುವ ತಾಯಿಯ ಜವಾಬ್ದಾರಿ ಊಹಿಸಲು ಸಾಧ್ಯವಿಲ್ಲ. ಶಾಂತಿ ಮತ್ತು ಸಹನೆಯ ಸಂಕೇತವಾಗಿ ಮಕ್ಕಳ ಬದುಕಿನ ಆಶಾಕಿರಣವಾಗಿ ತಾಯಿ ಹೊರಹೊಮ್ಮುತ್ತಾಳೆ. ಕುಟುಂಬದ ಸ್ವಾಸ್ಥ್ಯ ಕಾಪಾಡುತ್ತಾಳೆ. ಆದರೆ, ಜೀವಿತದ ಕೊನೆಯ ಕಾಲದಲ್ಲಿ ಅವರು ಮಕ್ಕಳಿಂದ ಏನನ್ನೂ ನಿರೀಕ್ಷಿಸುತ್ತಾರೆ ಎಂಬುದು ಮುಖ್ಯವಾದುದು. ಯಾಂತ್ರಿಕ ಜಗತ್ತಿನ ಈ ಕಾಲದಲ್ಲಿ ಈ ಬಗ್ಗೆ ಒಂದಿಷ್ಟು ಚಿಂತನೆ ಅಗತ್ಯ ಎಂದರು.
ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ್ ಮಾತನಾಡಿ, ಮಂಗಳೂರಿನಂತಹ ಪ್ರದೇಶಗಳಲ್ಲಿ ವೃದ್ಧರು ಲಾಡ್ಜ್‌ಗಳಲ್ಲಿ ಬದುಕುತ್ತಿದ್ದಾರೆ. ಅವರ ಮಕ್ಕಳು ಬೇರೆ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದು, ಮಾಸಿಕ ಹಣ ಕಳುಹಿಸಿಕೊಡುತ್ತಾರೆ. ಆದರೆ, ನಮ್ಮಲ್ಲಿಯೂ ವೃದ್ಧರನ್ನು ನಿರ್ಲಕ್ಷಿಸುತ್ತಿರುವ ಉದಾಹರಣೆ ಸಾಕಷ್ಟಿವೆ ಎಂದರು.
ಕೌಟುಂಬಿಕ ಪ್ರೀತಿ ಇದ್ದರೆ ಎಂತಹ ಸಮಸ್ಯೆ ಇತ್ಯರ್ಥಪಡಿಸಲು ಸಾಧ್ಯ. ಆದರೆ, ಆ ಪ್ರೀತಿಯೇ ಇಲ್ಲದ ಸ್ಥಿತಿಯಲ್ಲಿ ಜನತೆ ಬದುಕುತ್ತಿರುವುದು ದುರಂತ ಎಂದರು. ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಹಿರಿಯ ಸಹಕಾರಿ ಹಾಗೂ ಪತ್ರಕರ್ತೆ ರಮಾ ಏಕೇಶ್, ಅಕ್ಕಮ್ಮ, ಲಲಿತ, ಮಲ್ಲಪ್ಪ, ಗಂಗಲಕ್ಷ್ಮೀ, ಸಾಂತ್ವನ ಕೇಂದ್ರದ ಅಂಬುಜಾಕ್ಷಿ, ನಂಜುಂಡಪ್ಪ, ವಿಜಯಕುಮಾರ್ ಹಾಜರಿದ್ದರು. ಪಾರ್ವತಮ್ಮ ಮತ್ತು ಸಂಗಡಿಗರು ಅಮ್ಮಂದಿರ ಕುರಿತಾದ ಹಾಡುಗಳನ್ನು ಪ್ರಸ್ತುತಪಡಿಸಿದರು. ಹೇಮಾದ್ರಿ ಕಾಲೇಜು ಸಮಾಜ ಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿ ಡಿ.ಎಸ್. ವಿದ್ಯಾ ಸ್ವಾಗತಿಸಿದರು. ಸಿ.ಬಿ. ಸುಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.