ಯಾರಿಗೆ ಒಲಿಯುತ್ತೆ ಸಚಿವಗಿರಿ..?
ತುಮಕೂರು: ಸಚಿವ ಸ್ಥಾನದ ಆಕಾಂಕ್ಷಿ ಪಟ್ಟಿ ದೊಡ್ಡದಿದ್ದು ತುಮಕೂರು ಜಿಲ್ಲೆಯ ಯಾರಿಗೆ ಮಂತ್ರಿ ಪಟ್ಟ ಸಿಗುತ್ತದೆ ಎಂಬ ಬಗ್ಗೆ ಕುತೂಹಲ ಗರಿಗೆದರಿದೆ.
ಕೆಲ ಜಿಲ್ಲೆಗಳಿಗೆ ಮಾತ್ರ ಎರಡು ಮಂತ್ರಿ ಪಟ್ಟ ಕೊಡುವ ಉಮೇದನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ. ಆದರೆ ತುಮಕೂರು ಆ ಪಟ್ಟಿಯಲ್ಲಿ ಸೇರಿಲ್ಲ. ಹೀಗಾಗಿ ಒಬ್ಬರು ಮಾತ್ರ ಸಚಿವರಾಗಬಹುದು ಎಂಬ ಚರ್ಚೆ ನಡೆಯುತ್ತಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಾ. ಜಿ. ಪರಮೇಶ್ವರ್ ಅವರು ಸಚಿವರಾಗುತ್ತಾರೆ ಎಂಬ ಸುದ್ದಿ ದೆಹಲಿಯ ಕಾಂಗ್ರೆಸ್ ಪಡಸಾಲೆಯಲ್ಲಿ ಓಡಾಡುತ್ತಿದೆ. ಇದರ ಜತೆಗೆ 6 ಬಾರಿ ಶಾಸಕರಾಗಿರುವ ಟಿ.ಬಿ. ಜಯಚಂದ್ರ ಕೂಡ ರೇಸ್ನಲ್ಲಿ ಇದ್ದಾರೆ. ಆದರೆ ಜಿಲ್ಲೆಗೆ ಒಂದೇ ಸಚಿವ ಸ್ಥಾನದ ಅವಕಾಶವಿದ್ದರೆ ಯಾರಿಗೆ ಸಿಗುತ್ತೆ ಎಂಬ ಜಿಜ್ಞಾಸೆ ಕೂಡ ನಡೆದಿದೆ.
ಈಗಾಗಲೇ ಡಾ. ಜಿ. ಪರಮೇಶ್ವರ ಹಾಗೂ ಜಯಚಂದ್ರ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕೊಡಿ ಎಂದು ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸ್ವತಃ ಜಯಚಂದ್ರ ಅವರೇ ನೀರಾವರಿ ಖಾತೆ ಬಗ್ಗೆ ಒಲವು ಇಟ್ಟುಕೊಂಡಿದ್ದಾರೆ. ಹೀಗಾಗಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬ ಕುತೂಹಲ ಮೂಡಿಸಿದೆ.
ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದೆ. ಮಧುಗಿರಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೆ.ಎನ್. ರಾಜಣ್ಣ ಅವರು ಕೂಡ ಪ್ರಬಲ ಸಚಿವ ಆಕಾಂಕ್ಷಿಯಾಗಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ ಕೆ.ಎನ್. ರಾಜಣ್ಣ ಅವರು ಎರಡು ಬಾರಿ ಶಾಸಕರಾಗಿ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸಹಕಾರ ಕ್ಷೇತ್ರದಲ್ಲಿ ಗಣನೀಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಕೂಡ ಸಹಕಾರ ಖಾತೆ ನೀಡಬೇಕೆಂದು ಒತ್ತಡ ಹೇರಿದ್ದಾರೆ.
ಇನ್ನು ತುಮಕೂರು ನಗರ ಶಾಸಕ ರಫೀಕ್ ಅಹಮದ್ ಕೂಡ ಅಲ್ಪಸಂಖ್ಯಾತರ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ರಫೀಕ್ ಪರವಾಗಿ ದೆಹಲಿ ತನಕ ಹೋಗಿ ಬಂದದ್ದೂ ಆಗಿದೆ.
'ಕೈ'ಗೆ ತಲೆಬೇನೆ: ತುಮಕೂರು ಜಿಲ್ಲೆಯಿಂದ ಹಾಲಿ 4 ಮಂದಿ ಕಾಂಗ್ರೆಸ್ ಶಾಸಕರೂ ಆಯ್ಕೆಯಾಗಿದ್ದಾರೆ. ಅಲ್ಲದೇ ಪರಮೇಶ್ವರ್ ಅವರು ಸಹ ಪ್ರಬಲ ಸಚಿವ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದು ತಲೆನೋವಾಗಿ ಪರಿಣಮಿಸಿದೆ.
ತಿಪಟೂರಿನಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕೆ. ಷಡಕ್ಷರಿ ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಅಲ್ಲದೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿದ್ದಾರೆ. ಜತೆಗೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ವೀರಶೈವ ಜನಾಂಗಕ್ಕೆ ಸೇರಿರುವ ಷಡಕ್ಷರಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರು.
18 ಜನರ ಸಚಿವ ಪಟ್ಟಿಯ ಮೊದಲ ಕಂತು ಬಿಡುಗಡೆಯಾಗಲು ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಸಚಿವ ಸ್ಥಾನ ಪಡೆಯಲು ಕಸರತ್ತು ಕೂಡ ಜೋರಾಗಿದೆ. ಹಾಲಿ ತುಮಕೂರು ಜಿಲ್ಲೆಗೆ ಒಂದೇ ಸಚಿವ ಸ್ಥಾನ ಎನ್ನಲಾಗುತ್ತಿದೆ. ಆದರೆ ಕಡೆಗಳಿಗೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಮಾತುಗಳೂ ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
-ಉಗಮ ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

