ಪೋಷಕರ ಸಜ್ಜನಿಕೆ, ವ್ಯಕ್ತಿತ್ವ ಮಕ್ಕಳಿಗೆ ಆದರ್ಶ
ಕ.ಪ್ರ. ವಾರ್ತೆ ತುಮಕೂರು ಮೇ 18
ಪೋಷಕರ ಸಜ್ಜನಿಕೆ ಮತ್ತು ವ್ಯಕ್ತಿತ್ವದ ಪ್ರಭಾವಗಳು ಮಕ್ಕಳಿಗೆ ಆದರ್ಶ ಎಂದು ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಕೃಪಾಮಯಿ ಮಕ್ಕಳ ಬಳಗದ 7ನೇ ವಾರ್ಷಿಕೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ನಾಗರಿಕತೆಯ ಹೆಸರಿನಲ್ಲಿ ಇಂದು ಅನೇಕ ಬದಲಾವಣೆಗಳು ಆಗುತ್ತಿವೆ. ಆದರೆ ಇವೆಲ್ಲವು ಸುಧಾರಣೆಗಳಾಗಲಾರವು. ದೇಶವಾಸಿಗಳಿಗೆ ಅಕ್ಷರಜ್ಞಾನ ಕೊಡಲು ಹೊರಟು, ಪ್ರತಿಯಾಗಿ ಜನರ ಆಲೋಚನೆಗಳಲ್ಲಿ ದ್ವೇಷ, ಅಸೂಯೆ, ದೌರ್ಜನ್ಯ, ಸ್ವಾರ್ಥ ಮುಂತಾದ ವಿಕೃತ ಭಾವನೆಗಳನ್ನು ನಾವು ಹೆಚ್ಚಾಗಿ ಕಾಣುವಂತಾಗಿದೆ ಎಂದರು.
ದೇಶವಾಸಿಗಳಲ್ಲಿ ಇಂದು ಮನುಷ್ಯತ್ವ ಜಾಗೃತವಾಗುತ್ತಿಲ್ಲ ನಡವಳಿಕೆಯಲ್ಲಿ ಉತ್ತಮ ಗುಣ ಕಾಣುತ್ತಿಲ್ಲ. ಅವಿದ್ಯಾವಂತರಿಗಿಂತ ವಿದ್ಯಾವಂತರ ಬಗ್ಗೆಯೇ ಹೆಚ್ಚು ಎಚ್ಚರವಹಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕವಾಗಿ ಮೂಡುತ್ತಿದೆ. ಕಳೆದ 15-20 ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಮೌಲ್ಯಗಳನ್ನು ಅವಮಾನಿಸುವ ಒಂದು ಹೊಸ ಚಾಳಿ ಶುರುವಾಗುತ್ತಿರುವುದು ದೌರ್ಭಾಗ್ಯ. ಅಕ್ಷರ ಕಲಿಕೆ, ಶೈಕ್ಷಣಿಕ ದಾಖಲೆಗಳು- ಭಾಷಣಕ್ಕೆ ಮಾತ್ರ ಸೀಮಿತವಾದ ಹೆಗ್ಗಳಿಕೆಯಾಗಿದೆ ಎಂದರು.
ಕನಸು ಕನಸಾಗಿಯೇ ಉಳಿದಿದೆ: ಒಟ್ಟಿನಲ್ಲಿ ಸ್ವಾವಲಂಬಿ, ಸ್ವಾಭಿಮಾನಿ ದೇಶಕಟ್ಟುವ ನಮ್ಮ ಕನಸು ಕನಸಾಗಿಯೇ ಉಳಿದಿದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಪೋಷಕರು, ಸಮಾಜದ ಹಿರಿಯರು ಸಮರ್ಪಕವಾಗಿ ನಿರ್ವಹಿಸದೆ ಇರುವುದೇ ಈ ಪರಿಸ್ಥಿತಿಗೆ ಕಾರಣ. ಪೋಷಕರ ವೈಯಕ್ತಿಕ ಬದುಕಿನ ಆದರ್ಶ ಮತ್ತು ಕಥೆ-ನಾಟಕಗಳ ರೂಪದಲ್ಲಿ ಮಕ್ಕಳಲ್ಲಿ ಮೌಲ್ಯಗಳು ಪ್ರವೇಶ ಮಾಡುವುದು ಇಂದಿನ ಅಗತ್ಯ ಎಂದರು.
ಮೌಲ್ಯಗಳನ್ನು ಹೀರಿಕೊಂಡ ಮಕ್ಕಳಲ್ಲಿ ಆಲೋಚನ ಶಕ್ತಿ ದೃಢವಾಗಿ ಅವರಲ್ಲಿ ಬದುಕಿನ ಬಗ್ಗೆ ಸ್ಪಷ್ಟತೆ ಬರುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಲ್ಲಿ ಧೈರ್ಯ ಮತ್ತು ನೈತಿಕ ಶಕ್ತಿಯನ್ನು ಜಾಗೃತಗೊಳಿಸಬೇಕು. ಧೈರ್ಯವೆಂದರೆ ಎಂತಹ ಕಠಿಣ ಸನ್ನಿವೇಶವನ್ನಾದರೂ ಸಮಾಧಾನದಿಂದ ನಿರ್ವಹಿಸುವ ಸಾಮರ್ಥ್ಯ. ಈ ಸಾಮಥ್ಯಕ್ಕೆ ಪೂರಕವಾಗಿ ನೈತಿಕ ಶಕ್ತಿ ಕೆಲಸ ಮಾಡಿದರೆ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದರು.
ಪೋಷಕರಲ್ಲಿ ಸಜ್ಜನಿಕೆ, ವ್ಯಕ್ತಿತ್ವದ ಪ್ರಭಾವಗಳು ಇದ್ದಾಗ ಮಾತ್ರ ಮಕ್ಕಳು ಅವರನ್ನು ಮೀರಿಸುವ ವ್ಯಕ್ತಿ ರತ್ನಗಳಾಗುತ್ತಾರೆ ಎಂದು ಸ್ವಾಮೀಜಿ ವಿಶ್ಲೇಷಿಸಿದರು. ವಾರ್ಷಿಕೋತ್ಸವವನ್ನು ನಟರಾಜ ಶೆಟ್ಟಿಯವರು ಉದ್ಘಾಟಿಸಿದರು. ಕಿಶೋರ ಸೌರಭ ಪತ್ರಿಕೆಯನ್ನು ಅನಂತರಾಮಯ್ಯನವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸುಷುಮಾ ಸುರೇಶ್ ಅವರು ನಿರ್ದೇಶಿಸಿದ ಕವಿ ಪು.ತಿ.ನ. ವಿರಚಿತ ಗೋಕುಲ ನಿರ್ಗಮನ ಗೀತನಾಟಕವನ್ನು ಪ್ರಸ್ತುತಪಡಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

