ತುಮಕೂರು

ರೈತ ಪರ ಬಜೆಟ್, ಸೇವೆ ಮಾಡುವ ಮಠಕ್ಕೆ ಅನುದಾನ

Published On :

ಕ.ಪ್ರ.ವಾರ್ತೆ ತುಮಕೂರು ಮೇ 19
ಮುಖ್ಯಮಂತ್ರಿಯಾದ ನಂತರ ಮೊದಲಿಗೆ ಸಾಹಿತಿಗಳನ್ನು ಭೇಟಿ ಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಮಠಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಸಿದ್ದಗಂಗೆಯ ಡಾ. ಶಿವಕುಮಾರಸ್ವಾಮಿಗಳೊಂದಿಗೆ ಸುಮಾರು 15 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಸಿದ್ದಗಂಗಾ ಶ್ರೀಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆ.ಆರ್‌ಎಸ್‌ನಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಸಚಿವ ಸಂಪುಟ ರಚನೆ ಸುಗಮವಾಗಿ ನಡೆದಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಿದ್ದಗಂಗೆಯ ಕಿರಿಯ ಶ್ರೀ, ಸಿದ್ದಗಂಗಾ ಶ್ರೀಗಳಿಗೆ ವಿವರಿಸುತ್ತಾ, ಸಿದ್ದರಾಮಯ್ಯನವರು ಬಸವಜಯಂತಿಯಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈಗ ರಾಜ್ಯದಲ್ಲಿ ಒಳ್ಳೆ ಮಳೆಯಾಗುತ್ತಿದೆ ಎಂದು ಸಿದ್ದರಾಮಯ್ಯೆ ಈ ಸಂದರ್ಭದಲ್ಲಿ ವಿವರಿಸಿದರು.
ರೈತರಿಗೆ ಅನುಕೂಲವಾಗುವ ಬಜೆಟ್: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೃಷಿ ಬಜೆಟ್ ಪ್ರತ್ಯೇಕವಿಲ್ಲ. ರೈತರಿಗೆ ಅನುಕೂಲವಾಗುವ ಬಜೆಟ್ ಬೇಕು. ಅಷ್ಟೆ. ಈ ನಿಟ್ಟಿನಲ್ಲಿ ತಾವು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು. ಉತ್ತಮ ಮಳೆ-ಬೆಳೆಯಾಗಲಿ ಎಂಬ ಆಶಯದಿಂದ ಸಿದ್ದಗಂಗಾ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.
ಖಜಾನೆ ತುಂಬಿಸಲು ಆದ್ಯತೆ: ಖಜಾನೆ ತುಂಬಿಸುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಘೋಷಿಸಿದ ಸಿದ್ದು, ಆರ್ಥಿಕ ಶಿಸ್ತಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಮಠಗಳು ಕೇಳಿರಲಿಲ್ಲ: ಹಿಂದಿನ ಸರ್ಕಾರ ಮಠಗಳು ಕೇಳದೇ ಇದ್ದರೂ ಸ್ವಯಂಪ್ರೇರಿತವಾಗಿ ಅನುದಾನ ನೀಡಿತ್ತು. ಯಾವೊಂದೂ ಮಠವೂ ತಮಗೆ ಅನುದಾನ ಬೇಕೆಂದು ಅರ್ಜಿ ಹಾಕಿರಲಿಲ್ಲ. ಆದರೆ ತಮ್ಮ ಸರ್ಕಾರ ವಿಶೇಷವಾಗಿ ಶೈಕ್ಷಣಿಕವಾಗಿ ಹಾಗೂ ಸೇವೆ ಮಾಡುವ ಮಠಗಳಿಗೆ ಅನುದಾನ ನೀಡಲಿದೆ. ಜತೆಗೆ ಮಠಗಳೂ ಸಹ ಇಂತಹ ಕೆಲಸಕ್ಕೆ ಅನುದಾನ ಬೇಕು ಎಂದು ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಣ್ಣ ಪುಟ್ಟ ಸಮಸ್ಯೆಗಳಿವೆ: ತಮ್ಮ ಸರ್ಕಾರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿವೆ. ಮಂತ್ರಿ ಸ್ಥಾನ ಸಿಗದವರ ಬೆಂಬಲಿಗರು ಗಲಾಟೆ ಮಾಡಿರಬಹುದು. ಅದೆಲ್ಲಾ ಸರಿಹೋಗಲಿದೆ. ಈ ರೀತಿಯ ಬಿಕ್ಕಟ್ಟುಗಳನ್ನು ಕಾಂಗ್ರೆಸ್ ಹೈಕಮಾಂಡ್ ಬಗೆಹರಿಸಲಿದೆ. ಡಿ.ಕೆ. ಶಿವಕುಮಾರ್ ಸಂಪುಟಕ್ಕೆ ಸೇರಿಸಿಕೊಳ್ಳುವುದು - ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನಪರಿಷತ್ ಸದಸ್ಯರಿಗೆ ಮಂತ್ರಿ ಸ್ಥಾನ ನೀಡುವುದು,ಬಿಡುವುದು ಹೈಕಮಾಂಡ್‌ಗೆ ಬಿಟ್ಟದ್ದು. ಒಂದು ಸ್ಥಾನ ನೀಡುವ ವಿಶ್ವಾಸವಿದೆ ಎಂದರು.
ಮಠದ ಆವರಣದಲ್ಲಿ ಸಿದ್ದರಾಮಯ್ಯನವರ ಪರ ವಿದ್ಯಾರ್ಥಿಗಳು, ಅಭಿಮಾನಿಗಳು ಕೈಬೀಸಿ, ಘೋಷಣೆಗಳನ್ನು ಕೂಗಿದರು. ಪ್ರತಿಯಾಗಿ ಸಿದ್ದರಾಮಯ್ಯ ಕೂಡ ಕೈ ಬೀಸಿದರು.
ಈ ಸಂದರ್ಭದಲ್ಲಿ ಸಚಿವರಾದ ಟಿ.ಬಿ. ಜಯಚಂದ್ರ, ಮಹದೇವಪ್ರಸಾದ್, ತುಮಕೂರು ನಗರ ಶಾಸಕರಾದ ಡಾ. ರಫೀಕ್ ಅಹಮದ್, ಎಂ.ಬಿ. ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್, ಪತ್ರಿಕೋದ್ಯಮಿ ಎಸ್. ನಾಗಣ್ಣ ಸೇರಿದಂತೆ  ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.