ತುಮಕೂರು

ತುರ್ತುವಾಹನ ದುರಸ್ತಿಯಲ್ಲಿದೆ, ಸಾರ್ವಜನಿಕರೇ ಸಹಕರಿಸಿ...

Published On :

ಕ.ಪ್ರ. ವಾರ್ತೆ ಕುಣಿಗಲ್ ಮೇ 22
ತುರ್ತು ವಾಹನ ದುರಸ್ತಿಯಲ್ಲಿದೆ, ಸಾರ್ವಜನಿಕರು ಸಹಕರಿಸಿ  ಎಂಬ ಸೂಚನಾ ಪತ್ರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ರಾರಾಜಿಸುತ್ತಿದ್ದು, ಅಪಘಾತಗಳ ನೆಲೆವೀಡಾದ ರಾಹೆ48ರಲ್ಲಿ ಅವಘಡ ಸಂಭವಿಸಿದಲ್ಲಿ ಈ ಫಲಕದಿಂದ ಗಾಯಾಳುವಿನ ಸ್ಥಿತಿ ಸುಧಾರಿಸುವುದೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಮೊದಲು ಮೂರು ಆಂಬ್ಯುಲೆನ್ಸ್‌ಗಳಿದ್ದವು ( ಮೆಟಾಡರ್, ಟೆಂಪೂಟ್ರಾವೆಲರ್ ಹಾಗೂ ಹೋಸದಾಗಿ ವಿಂಗರ್ ವಾಹನ). ಕಳೆದ ಕೆಲ ತಿಂಗಳ ಹಿಂದೆ ಮೆಟಾಡರ್ ವಾಹನವನ್ನು ಅಮೃತೂರು ಆಸ್ಪತ್ರೆಗೂ, ಟೆಂಪೊ ಟ್ರಾವೆಲರ್ ವಾಹನವನ್ನು ಬೆಂಗಳೂರಿಗೆ ಕಳಿಸಿಕೊಡಲಾಯಿತು. ಹೊಸದಾಗಿ ಬಂದ ವಿಂಗರ್ ವಾಹನ ಸಾರ್ವಜನಿಕ ಆಸ್ಪತ್ರೆಯ ಸೇವೆಯಲ್ಲಿತ್ತು. ಒಂದು ತಿಂಗಳ ಹಿಂದೆ, ಸದರಿ ವಾಹನ ದುರಸ್ತಿಗೆ ಕಳುಹಿಸಿದ್ದರಿಂದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಮೇಲಿನಂತೆ ಭಿತ್ತಿ ಪತ್ರ ಅಂಟಿಸಲಾಗಿದೆ.
ಇರುವುದೇ ಎರಡು: ಇನ್ನು ತುರ್ತುವಾಹನಕ್ಕೆ 108 ವಾಹನ ಬಳಸಿಕೊಳ್ಳಬಹುದೆಂಬ ತರ್ಕವಾದರೆ, 108 ವಾಹನ ಕುಣಿಗಲ್ ಹಾಗೂ ಹುಲಿಯೂರುದುರ್ಗದಲ್ಲಿ ಎರಡೇ ಇದ್ದು, ಯಡೆಯೂರಿಗೆ ನೀಡಲಾಗಿರುವ ವಾಹನ ಅಪಘಾತವಾಗಿ ದುರಸ್ತಿಯಲ್ಲಿದೆ. ದಿನವೊಂದಕ್ಕೆ ಎರಡು ಆಸ್ಪತ್ರೆಗಳು ಸೇರಿದಂತೆ ಅಮೃತೂರು, ಯಡೆಯೂರು, ಹುತ್ರಿದುರ್ಗ, ಕೊತ್ತಗೆರೆ ಸೇರಿದಂತೆ ಪಟ್ಟಣದ ವ್ಯಾಪ್ತಿಯಿಂದ ಕನಿಷ್ಠ 10ರಿಂದ 20 ಕರೆಗಳಿಗೆ ಸ್ಪಂದಿಸುವ ಅನಿವಾರ್ಯತೆ ಇದೆ. ಅಪಘಾತವಾದಲ್ಲಿ 108 ವಾಹನಕ್ಕೆ ಕರೆ ಮಾಡಿದರೆ, 108 ಸಮಸ್ಯೆಗೆ ಸ್ಪಂದಿಸುವ ಅನಿವಾರ್ಯತೆಯಲ್ಲಿ ಸಿಲುಕಿರುವ 108 ವಾಹನ ಲಭ್ಯವಾಗದೆ, ಬೇರೆ ಅಸ್ಪತ್ರೆಯಿಂದ ತುರ್ತು ವಾಹನ ಬರುವಷ್ಟರಲ್ಲಿ ಗಾಯಾಳುವಿನ ಸ್ಥಿತಿ ಊಹೆಗೂ ನಿಲುಕದಂತಾಗುತ್ತದೆ.
ಸರಣಿ ಅಪಘಾತಗಳ ತಾಣವೆಂದೆ ಖ್ಯಾತಿಯಾದ ರಾಹೆ 48ನ್ನು ಹೊಂದಿರುವ ಕುಣಿಗಲ್ ವ್ಯಾಪ್ಕಿಯಲ್ಲಿ ತುರ್ತುವಾಹನ ಸದಾ ಸನ್ನದ್ಧವಾಗಿರಬೇಕು. ಆದರೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ವಾಹನ ದುರಸ್ತಿಯಲ್ಲಿದ್ದು ಸಾರ್ವಜನಿಕರು ಸಹಕರಿಸಬೇಕೆಂಬ ಮನವಿ, ಅಪಘಾತಗಳು ಹೇಳಿ ಕೇಳಿ ಅಗುವುದಿಲ್ಲ ಅಕಸ್ಮಾತ್ ಸಂಭವಿಸಿದರೆ ಗಾಯಗೊಂಡ ಗಾಯಾಳುವಿನ ಬಗ್ಗೆ ಚಿಂತಿಸುವವರು ಯಾರೆಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ದುರಸ್ತಿಗೆ ತೆರಳಿರುವ ತುರ್ತುವಾಹನವನ್ನು ಕೂಡಲೆ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಸಂಬಂಧಪಟ್ಟವರು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.