ರೈತರು ನೇಣಿಗೆ ಶರಣಾಗುವ ಮುನ್ನ ಸಿಎಂ ಸ್ಪಂದಿಸಲಿ
ಕ.ಪ್ರ. ವಾರ್ತೆ , ತುಮಕೂರು , ಮೇ 24
ಬರಗಾಲದಿಂದ ಆತಂಕಕ್ಕೀಡಾಗಿರುವ ರೈತರು ನೇಣಿಗೆ ಶರಣಾಗುವ ಮುನ್ನ ಮುಖ್ಯಮಂತ್ರಿಗಳು ಸ್ಪಂದಿಸುವಂತೆ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಮನವಿ ಮಾಡಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆ ಹಾಗೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ತೆಂಗು, ಅಡಿಕೆ ಇನ್ನೂ ಮುಂತಾದ ಮರ-ಗಿಡಗಳು ಒಣಗಿದ್ದು, ರೈತರಿಗೆ ಭಾರಿ ಅನ್ಯಾಯವಾಗಿದೆ. ಕೂಡಲೇ ಒಣಗಿರುವ ಎಲ್ಲ ಜಾತಿಯ ಮರಗಿಡಗಳಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿಯೇ ಲಕ್ಷಾಂತರ ಅಡಿಕೆ ಮತ್ತು ತೆಂಗಿನ ಮರಗಳು ಒಣಗಿದ್ದು, ರೈತ ಕುಟುಂಬಗಳು ಅವನತಿಯತ್ತ ಸಾಗಿವೆ. ಕೂಡಲೇ ಸಮಗ್ರವಾಗಿ ವರದಿ ತಯಾರಿಸಿ, ಭೂ ಸ್ವಾಧೀನ ಪಡಿಸಿಕೊಳ್ಳುವಾಗ ಮಾಲ್ಕಿ ಬೆಲೆ ( ಅಂದಿನ ಭೂಮಿ ಬೆಲೆ) ನೀಡುವ ಮಾದರಿಯಂತೆ, ರೈತರಿಗೆ ಪರಿಹಾರ ಮಂಜೂರು ಮಾಡಿ, ನೇರ ನಗದು ಖಾತೆಗೆ ಜಮಾವಣೆ ಮಾಡುವ ಮೂಲಕ ರೈತರಿಗೆ ನೆರವಾಗುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಟ್ರಾನ್ಸ್ಫಾರ್ಮರ್: ತುಮಕೂರು ಜಿಲ್ಲಾದ್ಯಂತ ಅಂತರ್ಜಲ ಮಟ್ಟ ಕುಸಿದಿದೆ. ರೈತರ ಬೋರ್ವೆಲ್ಗಳು ಬತ್ತಿವೆ. ಇನ್ನೂ ಹಲವಾರು ಬೋರ್ವೆಲ್ಗಳನ್ನು ಆಳಕ್ಕೆ ಕೊರೆಸಿರುವ ರೈತರು ಉನ್ನತ ಮಟ್ಟದ ಪಂಪ್ ಮೋಟಾರ್ಗಳನ್ನು ಅಳವಡಿಸುತ್ತಿರುವುದರಿಂದ ಹೆಚ್ಚಿನ ಅಶ್ವಶಕ್ತಿ ಮೋಟಾರ್ಗಳಿಂದ ಟ್ರಾನ್ಸ್ಫಾರ್ಮರ್ಗಳಿಗೆ ಲೋಡು ಹೆಚ್ಚುವರಿಯಾಗಿ, ಆಗಿಂದಾಗ್ಗೆ ಟಿ.ಸಿ.ಗಳು ಸುಟ್ಟು ಹೋಗುತ್ತಿರುತ್ತವೆ. ಜತೆಗೆ ರೈತರ ಪಂಪ್ ಸೆಟ್ಟುಗಳಿಗೂ ಹಾನಿಯಾಗಿರುತ್ತದೆ. ಹಾಗೆಯೇ ಬೆಳೆಗಳಿಗೆ ತೊಂದರೆಯಾಗಲಿದೆ. ಇದನ್ನು ತಪ್ಪಿಸುವ ಸಲುವಾಗಿ ಕೂಡಲೇ ಅಗತ್ಯವಿರುವ ಕಡೆ ಹೆಚ್ಚುವರಿಯಾಗಿ ಟ್ರಾನ್ಸ್ಫಾರ್ಮರ್ಗಳನ್ನು ಹಾಕಲು ಅಗತ್ಯ ಹಣ ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ ಎಂದರು.
ಬಡ್ಡಿ, ಸುಸ್ತಿ ಬಡ್ಡಿ ಮನ್ನಾ: ಕಳೆದ 2 ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ರೈತರಿಗೆ ತೊಂದರೆಯಾಗಿರುವುದರಿಂದ ಸಾಲದ ಬಡ್ಡಿ ಮತ್ತು ಸುಸ್ತಿ ಬಡ್ಡಿ ಮನ್ನಾ ಮಾಡಿ ಸಾಲವನ್ನು ನವೀಕರಿಸಿ, ಅಗತ್ಯವಿರುವ ರೈತರಿಗೆ ಹೆಚ್ಚುವರಿ ಸಾಲ ನೀಡಲು ಸಹ ಅಗತ್ಯ ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದು ಮಾಹಿತಿ ನೀಡಿದರು.
ಕೊಬ್ಬರಿಗೆ ಬೆಂಬಲ ಬೆಲೆ: ಕೊಬ್ಬರಿ ಬೆಂಬಲ ಬೆಲೆ ಕುಸಿದಿದ್ದು, ಕೂಡಲೇ ಸರ್ಕಾರ ಬೆಂಬಲ ಬೆಲೆ ಘೋಷಿಸಿ, ರೈತರಿಗೆ ಸಹಕರಿಸಲು ಮನವರಿಕೆ ಮಾಡಿಕೊಡಲಾಗಿದೆ. ಮೇಲ್ಕಂಡ ಎಲ್ಲ ಸಮಸ್ಯೆಗಳಿಂದ ರೈತರು ನೇಣಿಗೆ ಶರಣಾಗುವ ಮುನ್ನ ಅಗತ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಕೂಡಲೇ ಮುಖ್ಯಮಂತ್ರಿಗಳು ಸ್ಪಂದಿಸುವಂತೆ ಜಿಎಸ್ಬಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

