ತುಮಕೂರು

ನಗರದಲ್ಲಿ ಹಂತ, ಹಂತವಾಗಿ ಪ್ರಗತಿ ಕಾರ್ಯ

Published On :

ಕ.ಪ್ರ.ವಾರ್ತೆ   ತುಮಕೂರು   ಮೇ 25
ತುಮಕೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತುಮಕೂರು ನಗರ ನೂತನ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದರು.
ತುಮಕೂರಿನ ಸದಾಶಿವನಗರದ ಸಮಾನಾಸಕ್ತ ಸ್ನೇಹಿತರ ಬಳಗದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಅನುದಾನ ತರುವ ಪ್ರಯತ್ನ: ತುಮಕೂರನ್ನು ಜಾತ್ಯತೀತ ನಗರವನ್ನಾಗಿ ಮಾಡುವ, ಶಾಂತಿ, ಸೌಹಾರ್ದತೆಯಿಂದ ಜನತೆ ಬದುಕುವಂತೆ ಮಾಡುವುದೇ ತಮ್ಮ ಗುರಿ. ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಒಳಚರಂಡಿ ವ್ಯವಸ್ಥೆಯನ್ನು ಹಂತ-ಹಂತವಾಗಿ ಸುಧಾರಿಸುವ ಕಾರ್ಯ ಪ್ರಗತಿಯಲ್ಲಿದೆ. ತುಮಕೂರು ವಿಶ್ವ ವಿದ್ಯಾಲಯಕ್ಕೆ ಸಂಶೋಧನೆಗೆ ಆದ್ಯತೆ ನೀಡಲು ಅವಶ್ಯವಿರುವ ಅನುದಾನ ತರುವ ಪ್ರಯತ್ನ ಮಾಡಲಾಗುವುದು. ನಗರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಬರಲಿದ್ದು, ಅದನ್ನು ಉನ್ನತ ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ಮಹಿಳಾ ಪದವಿ ಕಾಲೇಜು ಅವಶ್ಯಕತೆಯಿದ್ದು,ಕಾಲೇಜು ಮಂಜೂರಾತಿಗೆ ಪ್ರಯತ್ನಿಸಲಾಗುತ್ತಿದೆ. ಬೆಂಗಳೂರಿನ ಉಪನಗರವನ್ನಾಗಿ ತುಮಕೂರನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ರಫೀಕ್ ತಿಳಿಸಿದರು.
ಅಭಿವೃದ್ಧಿ ಹಿನ್ನಡೆ ಇಲ್ಲ: ರಾಜ್ಯ ಹಾಗೂ ಕೇಂದ್ರಗಳಲ್ಲಿ ತಮ್ಮದೇ ಕಾಂಗ್ರೆಸ್ ಸರ್ಕಾರ ಇರುವುದರಿಂದ ಪ್ರಯತ್ನ ಯಶಕಾಣಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರ ಸಲಹೆ, ಸೂಚನೆ, ಮಾರ್ಗದರ್ಶನ ಅವಶ್ಯವಿದ್ದು, ನಾವೆಲ್ಲಾ ಒಟ್ಟಾಗಿ ಸೇರಿ ಹೋರಾಟ ನಡೆಸಿದರೆ, ನಗರದ ಚಿತ್ರಣ ಬದಲಾಗಲಿದೆ ಎಂದರು.
ಅನೇಕ ಸವಾಲುಗಳಿವೆ: ಅಮೀನುದ್ದೀನ್ ಮಾತನಾಡಿ, ನೂತನ ಶಾಸಕ ಡಾ.ರಫೀಕ್ ಅಹಮದ್ ಮುಂದೆ ಅನೇಕ ಸವಾಲುಗಳಿವೆ. ಹಂತ-ಹಂತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಶಾಸಕರು ಉನ್ನತ ಶಿಕ್ಷಣ ಪಡೆದವರಾಗಿದ್ದು, ಸಾಮಾಜಿಕ ಕಳಕಳಿಯುಳ್ಳವರಾಗಿದ್ದಾರೆ. ಸಮಾಜದ ಅಗತ್ಯತೆಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮ್ದಾನಿ ಮಾತನಾಡಿ, ತುಮಕೂರು ನಗರ ವ್ಯಾಪಕವಾಗಿ ಬೆಳೆಯುತ್ತಿದ್ದು, ನಗರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಈ ಸಮಸ್ಯೆಗಳನ್ನು ಗುರುತಿಸಿ, ಶಾಸಕರ ಗಮನಕ್ಕೆ ತರುವ ಪ್ರಯತ್ನ ಮಾಡಬೇಕಾಗುತ್ತದೆ. ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಕೂಡ ಎಂದರು.
ಯುವ ಮುಖಂಡರಾದ ಕೆ.ಜಿ.ಎನ್.ರಫಿ, ಹೆಗ್ಗೆರೆ  ನವೀದ್ಖಾನ್, ಅಸ್ಲಂ ಗುಬ್ಬಿ, ಎಲ್ಐಸಿ ಕಲೀಂ, ಮುಶ್ತಾಕ್ ಅಹಮದ್ ಡಾ. ರಫೀಕ್ ಅಹಮದ್ ಅವರನ್ನು ಸನ್ಮಾನಿಸಿದರು.
ಸಪ್ದಾನ್ ಅಹಮದ್ ಪ್ರಾರ್ಥಿಸಿ, ಪ್ರೊ. ಅಶ್ವಾಖ್ ಅಹಮದ್ ಸ್ವಾಗತಿಸಿ, ಜಯಣ್ಣ ನಿರೂಪಿಸಿ, ಮಂಜುನಾಥ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.