ಬಿಜೆಪಿ-ಕೈ ಕಾರ್ಯಕರ್ತರ ಘರ್ಷಣೆ: 18 ಜನ ಗಾಯ
ಕ.ಪ್ರ. ವಾರ್ತೆ ಟಿ ರಬಕವಿ ಟಿ ಮೇ 27
ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ಸಂಭವಿಸಿ, ನಾಲ್ವರು ಪೊಲೀಸರು ಸೇರಿ ಒಟ್ಟು 18 ಜನರು ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಮದನಮಟ್ಟಿ ಗ್ರಾಮದ ಲಕ್ಕಪ್ಪ ಶಿವಲಿಂಗಪ್ಪ ವ್ಯಾಪಾರಿ ಎಂಬುವರ ಮನೆಯಲ್ಲಿ ಸೋಮವಾರ ವಿವಾಹ ಸಮಾರಂಭ ಇತ್ತು. ಮದನಮಟ್ಟಿ ಗ್ರಾಮಸ್ಥರು ಸಾಮೂಹಿಕವಾಗಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳದೇ ಇರುವುದರಿಂದ ನೆರೆಯ ಹಳಿಂಗಳಿ, ಬನಹಟ್ಟಿ, ತೇರದಾಳ ಪ್ರದೇಶಗಳ ಕಾಂಗ್ರೆಸ್ ಕಾರ್ಯಕರ್ತರು, ಮುಂದಾಗಿ ನಿಂತು ವಿವಾಹ ನೆರವೇರಿಸಿದರು.
ಸಂಜೆ 4.30ರ ವೇಳೆಗೆ ವಿವಾಹ ಸಮಾರಂಭದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪ್ರಚೋದನಕಾರಿ ಮಾತುಗಳನ್ನು ಆಡಿದ್ದರಿಂದ ಕುಪಿತಗೊಂಡ ಮದನಮಟ್ಟಿ ಗ್ರಾಮದ ಧುರೀಣರು ಕೋಪಗೊಂಡಿದ್ದರು. ಆಗ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸ್ಥಳದಲ್ಲಿದ್ದ ಬೆರಳೆಣಿಕೆ ಪೊಲೀಸರು ಉಭಯ ಬಣಗಳನ್ನು ಸಾಂತ್ವನಗೊಳಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಕೊನೆಗೆ ಕಲ್ಲು ತೂರಾಟ ಮತ್ತು ದೊಣ್ಣೆ, ಮಾರಕಾಸ್ತ್ರಗಳನ್ನು ಬಳಸಿ ಉಭಯ ಬಣಗಳು ಹೊಡೆದಾಡಲಾರಂಭಿಸುತ್ತಿದ್ದರಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತು ಪೊಲೀಸರು ಮೂರು ಸುತ್ತು ಅಶ್ರುವಾಯು ಸೆಲ್ ಸಿಡಿಸಿದರು.
ಕಲ್ಲು ತೂರಾಟ ಮತ್ತು ಮಾರಕಾಸ್ತ್ರಗಳ ಬಳಕೆಯಿಂದಾಗಿ ಮದನಮಟ್ಟಿಯ 8 ಮತ್ತು ಹಳಿಂಗಳಿಯ 6 ಜನ ಕಾರ್ಯಕರ್ತರು ಗಾಯಗೊಂಡಿದ್ದರೆ, ಬನಹಟ್ಟಿ ಠಾಣಾಧಿಕಾರಿ ಶಿವಾನಂದ ಕಮತಗಿ, ಬಿ.ಆರ್.ಹವಾಲ್ದಾರ ಮತ್ತು ಇಬ್ಬರು ಡಿಆರ್ ಪೋಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಘರ್ಷಣೆ ಬಳಿಕ ಗುಂಪು ಸೇರಿದ್ದ ಜನರನ್ನು ಚೆದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಶೇ.100ರಷ್ಟು ಒಗ್ಗಟ್ಟಿನ ಮತದಾನವಾಗುತ್ತಿದ್ದ ಗ್ರಾಮದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ 140 ಮತಗಳು ಹೋಗಿದ್ದರಿಂದ ಸ್ಥಳೀಯ ಬಿಜೆಪಿ ಮತ್ತು ಹಳಿಂಗಳಿಯ ಕಾಂಗ್ರೆಸ್ ಮುಖಂಡರ ಮಧ್ಯೆ ಮನಸ್ತಾಪ ಉಂಟಾಗಿತ್ತು. ವಿವಾಹ ಸಂದರ್ಭದಲ್ಲಿ ಭುಗಿಲೆದ್ದ ಅಸಮಾಧಾನ ಗ್ರಾಮದ ಶಾಂತಿ ಕದಡಿದ್ದು, ಸದ್ಯ ಪೊಲೀಸರ ಗಸ್ತು ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಅಶೋಕ ದುಡಗುಂಟಿ, ತಹಸೀಲ್ದಾರ ಝಡ್.ಎಂ.ಮಕ್ತೇದಾರ, ವಿಶೋಷ ತಹಸೀಲ್ದಾರ್ ಆರ್.ವ್ಹಿ, ಕಟ್ಟಿ, ಡಿವೈಎಸ್ಪಿ ಗಿರೀಶ ಕಾಂಬಳೆ, ಬನಹಟ್ಟಿ ಸಿಪಿಐ ರಾಜಶೇಖರ ಮೇಸ್ತ್ರಿ, ಜಮಖಂಡಿ ಸಿಪಿಐ ಉಮೇಶ ಚಿಕ್ಕಮಠ, ಬನಹಟ್ಟಿ ಠಾಣಾಧಿಕಾರಿ ಶಿವಾನಂದ ಕಮತಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಮದನಮಟ್ಟಿ ಮತ್ತು ಹಳಿಂಗಳಿ ಗ್ರಾಮಗಳಲ್ಲಿ 144 ವಿಧಿಯನ್ವಯ ನಿಶೇಧಾಜ್ಞೆ ಜಾರಿಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

