ಶೀಘ್ರವೇ ಪಾಲಿಕೆಯಾಗಿ ತುಮಕೂರು?
ಉಗಮ ಶ್ರೀನಿವಾಸ್
ಕ.ಪ್ರ.ವಾರ್ತೆ ತುಮಕೂರು ಮೇ 28
ತುಮಕೂರು ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೇರುವುದು ಬಹುತೇಕ ಖಚಿತವಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್ನಲ್ಲಿ ಪಾಲಿಕೆಯನ್ನಾಗಿ ಘೋಷಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಆ ಮೂಲಕ ಕಳೆದ ಹಲವಾರು ವರ್ಷಗಳಿಂದ ತುಮಕೂರು ನಗರಸಭೆ ಪಾಲಿಕೆಯಾಗುತ್ತೋ? ಇಲ್ಲವೋ? ಎಂಬ ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆಯಿದೆ. ಈಗಾಗಲೇ ತುಮಕೂರು ನಗರದ ಜನಸಂಖ್ಯೆ 3 ಲಕ್ಷ ಗಡಿ ದಾಟಿದ್ದು ಪಾಲಿಕೆ ಘೋಷಣೆಗಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿವೆ. ಬೆಂಗಳೂರಿನ ಭವಿಷ್ಯದ ಉಪನಗರಿಯಾಗಿರುವ, ರಾಜ್ಯದ 18 ಜಿಲ್ಲೆಗಳನ್ನು ಸಂಪರ್ಕಿಸುವ 'ಹೆಬ್ಬಾಗಿಲು' ಎಂಬ ಖ್ಯಾತಿಗೆ ಪಾತ್ರವಾಗಿರುವ ತುಮಕೂರು ಪಾಲಿಕೆಯಾದರೆ ಹಣದ ಹೊಳೆಯೇ ಹರಿದು ಬರಲಿದೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಕಾನೂನು ಹಾಗೂ ನಗರಾಡಳಿತ ಸಚಿವರಾಗಿದ್ದ ಸುರೇಶ್ಕುಮಾರ್ ತುಮಕೂರು ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಪಾಲಿಕೆಯನ್ನಾಗಿ ಘೋಷಿಸಿದ್ದರು. ಆದರೆ ಕೆಲವು ನಗರಸಭಾ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಮತ್ತೆ ನಗರಸಭೆಯಾಗಿ ಹಿಂಬಡ್ತಿ ಪಡೆಯಿತು. ಪಾಲಿಕೆಯಾಗಿದ್ದಾಗ ಹರಿದು ಬಂದಿದ್ದ 50 ಕೋಟಿಯೂ ಸರ್ಕಾರದ ಬೊಕ್ಕಸಕ್ಕೆ ಹಿಂದಿರುಗಿಸಬೇಕಾಯಿತು. ಅದರೀಗ ಜನಸಂಖ್ಯೆ 3 ಲಕ್ಷ ಮೀರಿದೆ. ತುಮಕೂರು ಶಾಸಕರಾಗಿ ಕಾಂಗ್ರೆಸ್ನ ರಫೀಕ್ ಅಹಮದ್ ಆಯ್ಕೆಯಾಗಿದ್ದಾರೆ. ಅವರದ್ದೇ ಸರ್ಕಾರ ರಾಜ್ಯದಲ್ಲಿದೆ. ಹೀಗಾಗಿ ತ್ವರಿತವಾಗಿ ಪಾಲಿಕೆ ಘೋಷಣೆಗೆ ಮುಂದಾಗಿದ್ದಾರೆ.
ಬೆಳೆಯುತ್ತಿದೆ ನಗರ: ತುಮಕೂರು ನಗರ ದಿನದಿಂದ ದಿನಕ್ಕೆ ಸತತವಾಗಿ ಬೆಳೆಯುತ್ತಲೇ ಇದೆ. ಈಗಾಗಲೇ 51 ಸಿಟಿ ಬಸ್ಗಳ ಸಂಚಾರವಿದೆ. ಇನ್ನೂ 60 ಬಸ್ಗಳು ಸಂಚರಿಸಲಿವೆ. ಪಾಲಿಕೆಯಾದ ಕೂಡಲೇ ಬರುವ ಅನುದಾನವೂ ಹೆಚ್ಚಾಗಿ, ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು. ಮುಖ್ಯವಾಗಿ ಹೊರ ವಲಯದಲ್ಲಿ ರಸ್ತೆ ನಿರ್ಮಿಸಬೇಕಾಗಿದೆ. ಬೀದಿ ದೀಪದ ಸಮಸ್ಯೆಯೂ ಇದೆ. ಮುಖ್ಯವಾಗಿ ಸಿಟಿ ಬಸ್ ಸ್ಟಾಪ್ಗೆ ಶೆಡ್ ನಿರ್ಮಿಸುವಲ್ಲಿಯೂ ಕ್ರಮಕೈಗೊಳ್ಳಬೇಕು. ಇನ್ನು ಒಂದೆರೆಡು ಸಿಗ್ನಲ್ ದೀಪಗಳನ್ನು ಅಳವಡಿಸಬೇಕಾಗಿದೆ. ಇವೆಲ್ಲ ಅಭಿವೃದ್ಧಿ ಕಾರ್ಯಗಳೆಡೆಗೆ ಶಾಸಕರು ಗಮನಹರಿಸಬೇಕು. ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಕೂಡ ಪಾಲಿಕೆ ಮಾಡುವ ಉಮೇದಿನಲ್ಲಿದ್ದಾರೆ. ಒಟ್ಟಾರೆಯಾಗಿ ಪಾಲಿಕೆ ಘೋಷಣೆಯಾಗುತ್ತಿದ್ದಂತೆ ತುಮಕೂರಿನಲ್ಲಿ ಮತ್ತಷ್ಟು ವೇಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂಬ ವಿಶ್ವಾಸ ನಗರದ ಜನತೆಗಿದೆ. ತುಮಕೂರು ಅಮಾನಿಕೆರೆ ಲೋಕಾರ್ಪಣೆಗೊಂಡಿದ್ದು, ಅದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕಾಗಿದೆ. ಜತೆಗೆ ಕೋಡಿ ಬಸವೇಶ್ವರ ದೇವಸ್ಥಾನದ ಬಳಿ ಸಿಗ್ನಲ್ ದೀಪ ಅಳವಡಿಸಬೇಕಾಗಿದೆ. ತುಮಕೂರು ವಿವಿ ಮುಂಭಾಗ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವನೆ ಇದ್ದು ಅದರ ಬಗ್ಗೆಯೂ ಶೀಘ್ರ ನೂತನ ಶಾಸಕರು ಕಾರ್ಯಪ್ರವೃತ್ತರಾಗಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

