ತುಮಕೂರು

ಕೊಬ್ಬರಿ ಬೆಲೆ ಕುಸಿತ: ಆತಂಕದಲ್ಲಿ ತೆಂಗು ಬೆಳೆಗಾರ

Published On :

ಕ.ಪ್ರ. ವಾರ್ತೆ   ತಿಪಟೂರು   ಮೇ 29
ತಾಲೂಕಿನ ಜನರ ಜೀವನಾಧಾರ ವಾಣಿಜ್ಯ ಬೆಳೆಯಾದ ಕೊಬ್ಬರಿ ಬೆಲೆ ಕುಸಿದಿರುವುದು ರೈತರಲ್ಲಿ ತೀವ್ರ ಆತಂಕ ಮೂಡಿಸಿದ್ದು, ತೆಂಗು ಬೆಳೆಗಾರರು ಆತಂಕ ಪರಿಸ್ಥಿತಿ ಎದುರಿಸುತ್ತಿರುವುದು ನೋವಿನ ಸಂಗತಿ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಕಾಂಗ್ರೆಸ್ ಮುಖಂಡ ಎಂ.ಆರ್. ಸಂಗಮೇಶ್ ವಿಷಾದ ವ್ಯಕ್ತಪಡಿಸಿದ್ದಾರೆ.
ತೆಂಗು ಬೆಳೆಗಾರರಿಗೆ ಮೂಲ ಸೌಲಭ್ಯಗಳ ಕೊರತೆ, ಪ್ರಕೃತಿ ವಿಕೋಪ, ದುಬಾರಿ ಕೂಲಿವೆಚ್ಚ, ತೆಂಗಿನ ಮರಕ್ಕೆ ತೀವ್ರವಾಗಿ ಕಾಡುತ್ತಿರುವ ನುಸಿರೋಗ, ಕಪ್ಪು ತಲೆ ಹುಳುರೋಗ, ರಸ ಸೋರಿಕೆ ಇತ್ಯಾದಿ ರೋಗಗಳು ತೆಂಗು ಬೆಳೆವ ರೈತರನ್ನು ಕಂಗಾಲಾಗುವಂತೆ ಮಾಡಿದೆ. ರೈತರು ತೋಟಗಳ ಅಭಿವೃದ್ಧಿಗೆ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆದಿದ್ದು, ಅದರ ಬಡ್ಡಿ ಕಟ್ಟಲೂ ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ.
 ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿಯಾಗಲಿ, ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯಾಗಲಿ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳಾಗಲಿ ಯೋಜನೆಗಳ ಜಾರಿಯಲ್ಲಿ ಕೇವಲ ಅಂಕಿ-ಅಂಶಗಳ ಗುರಿ ತಲುಪುವ ಮಾರ್ಗ ಹಿಡಿಯುತ್ತಿವೆಯೇ ಹೊರತು ರೈತರಿಗೆ ಸೂಕ್ತ ಪ್ರಾರ್ಮಾಣಿಕ ಮಾರ್ಗ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಸಂಗಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಡಿಕೆ: ತಿಪಟೂರು ಕೊಬ್ಬರಿಗೆ ದೇಶಾದ್ಯಂತ ಬೇಡಿಕೆ ಇದ್ದು, ಈ ಭಾಗದ ಕೊಬ್ಬರಿಯು ರುಚಿ ಮತ್ತು ಗುಣಮಟ್ಟದಲ್ಲಿ ಉತ್ತಮ ದರ್ಜೆಯಾಗಿರುವ ಕಾರಣ ಹಿಂದೆ ರು. 8 ಸಾವಿರ ಗಡಿ ದಾಟಿದ್ದ ಕೊಬ್ಬರಿ ಬೆಲೆ ಪ್ರಸ್ತುತ ಕಡಿಮೆಯಾಗಿ ಇದೀಗ ಕೊಬ್ಬರಿಯನ್ನು ಕೇಳುವವರಿಲ್ಲದಂತಾಗಿದೆ. ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಕನಿಷ್ಠ 7ರಿಂದ 8ಸಾವಿರ ಖರ್ಚು ಬರುತ್ತಿದ್ದು, ಕನಿಷ್ಠವೆಂದರೂ ರು.9ರಿಂದ 10ಸಾವಿರ ಬೆಲೆ ಸಿಕ್ಕರೆ ಮಾತ್ರ ವೈಜ್ಞಾನಿಕ ರೀತಿಯ ಬೆಲೆ ಸಿಕ್ಕಿದಂತಾಗುತ್ತದೆ. ಆದರೆ ಸದ್ಯದ ಮಾರುಕಟ್ಟೆ ಹರಾಜು ಧಾರಣೆ ಕ್ವಿಂಟಾಲ್ಗೆ ರು. 4500 ಇದ್ದು ಕೇಂದ್ರ ಸರ್ಕಾರ ಘೋಷಿಸಿರುವ 5,550ರೂ ಬೆಂಬಲ ಬೆಲೆಗಿಂತ ಕೆಳಕ್ಕಿಳಿದಿದೆ.
ಮುಂದೆ ಮತ್ತಷ್ಟು ದರ ಇಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈವರೆವಿಗೂ ಕೇಂದ್ರ ಹಾಗೂ ರಾಜ್ಯ  ಸರ್ಕಾರಗಳು ಇತ್ತ ಕಡೆ ಗಮನಹರಿಸಿ ಬೆಂಬಲ ಬೆಲೆಯನ್ನು ಕನಿಷ್ಠ 8 ಸಾವಿರಕ್ಕಾದರೂ ಹೆಚ್ಚಿಸಿ ತೆಂಗು ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕಿದೆ. ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಳಿವಿನಂಚಿಗೆ ತಲುಪಿರುವ ತೆಂಗನ್ನು ಉಳಿಸಲು ರೈತರ ಸಲಹೆ ಪಡೆದು ಅನುಕೂಲಕರ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ಇದಾಗದಿದ್ದಲ್ಲಿ ಮುಂದೆ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವೆಬುದು ಸಂಗಮೇಶ ಅಭಿಪ್ರಾಯ.
ಚರ್ಚಿಸಬೇಕಿದೆ: ಈ ನಿಟ್ಟಿನಲ್ಲಿ ನೂತನ ಶಾಸಕರಾದ ಕೆ.ಷಡಕ್ಷರಿಯವರು ರೈತಪರ ಹಿನ್ನೆಲೆಯುಳ್ಳವರಾಗಿದ್ದು ಕೊಬ್ಬರಿ ಬೆಳೆಯುವ ಪ್ರದೇಶದ ಶಾಸಕರುಗಳ ಜೊತೆ ಕೊಬ್ಬರಿ ಬೆಳೆಗಾರರ ಸಂಕಷ್ಟದ ಬಗ್ಗೆ ಚರ್ಚಿಸಬೇಕಿದೆ. ನಫೆಡ್ ಮೂಲಕ ಬೆಂಬಲ ಬೆಲೆ ರೂ 5550ಕ್ಕೆ ಖರೀದಿಸಿ, ರಾಜ್ಯ ಸರ್ಕಾರದಿಂದ ಕ್ವಿಂಟಾಲ್ಗೆ 1ಸಾವಿರ ಪ್ರೋತ್ಸಾಹ ಬೆಲೆ ಕೊಡಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲು ಮುಂದಾದಲ್ಲಿ ರೈತರಿಗೆ ರು.6550 ಬೆಲೆ ಸಿಗಬಹುದೆಂದು ಸಂಗಮೇಶ್ ಶಾಸಕರನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.