ಅನ್ನ ನೀಡುವ ರೈತರ ಶೋಷಣೆ ಮಾಡದಿರಿ
.ಪ್ರ. ವಾರ್ತೆ ಕುಣಿಗಲ್ ಮೇ 29
ಕಳೆದೆ ಹಲವು ವರ್ಷಗಳಿಂದಲೂ ಅತಿವೃಷ್ಟಿ, ಅನಾವೃಷ್ಟಿಯ ಸಮಸ್ಯೆಗೆ ಸಿಲುಕಿರುವ ರೈತಾಪಿ ವರ್ಗ, ತೀವ್ರ ಸಂಕಷ್ಟದಲ್ಲಿದ್ದು, ಜನರಿಗೆ ಅನ್ನ ನೀಡುವ ರೈತನೇ ಅನ್ನಕ್ಕಾಗಿ ಪರದಾಡುವ ದುಸ್ಥಿತಿ ಇದೆ. ಇಂತಹ ಕಷ್ಟಕರ ಸಂದರ್ಭದಲ್ಲಿ ರಸಗೊಬ್ಬರ ಮಾರಾಟಗಾರರು ಯಾವುದೇ ಕಾರಣಕ್ಕೂ ರೈತರ ಶೋಷಣೆ ಮಾಡಬಾರದು, ಒಂದು ವೇಳೆ ರೈತರ ಶೋಷಣೆ ಮಾಡುವುದು ಕಂಡು ಬಂದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದೆಂದು ತಹಸೀಲ್ದಾರ್ ಜಗದೀಶ್ ಎಚ್ಚರಿಕೆ ನೀಡಿದರು.
ಮಂಗಳವಾರ, ಪಟ್ಟಣದ ಕಂದಾಯ ಭವನದಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಿಗೆ ರಸಗೊಬ್ಬರ ಪೂರೈಕೆಯ ಬಗ್ಗೆ ತಾಲೂಕಿನ ಖಾಸಗಿ ಹಾಗೂ ಸಹಕಾರಿ ರಸಗೊಬ್ಬರ ಮಾರಾಟಗಾರರ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ರೈತ ನಿಜಕ್ಕೂ ಕಂಗಾಲಾಗಿದ್ದಾನೆ. ರೈತನಿಗೆ ಬೇರೆ ಕಸುಬು ಗೊತ್ತಿಲ್ಲ. ಸಾಲ, ಸೋಲ ಮಾಡಿದರೂ ಎಷ್ಟೆ ಕಷ್ಟ, ನಷ್ಟ ಬಂದರೂ, ಜಗಕ್ಕೆ ಅನ್ನ ನೀಡುವ ಅನ್ನದಾತನ ವೃತ್ತಿಯನ್ನೇ ಅವಲಂಬಿಸಿಕೊಂಡಿದ್ದಾನೆ.
ಕಂಗಾಲು: ಕಷ್ಟಪಟ್ಟು ದುಡಿದರೂ, ಬೆಳೆದ ಬೆಲೆ ಕೈಗೆ ಬಾರದೆ, ಕಂಗಾಲಾಗಿ ಸೊರಗುತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿದ್ದರೂ ಹತಾಶನಾಗದೆ ಮಳೆಬಂದಾಗ ಪುನಃ ಧೂಳಿನಿಂದ ಕೊಡವಿಕೊಂಡು ಮೇಲೆದ್ದು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾನೆ ಇಂತಹ ರೈತರು, ರಸಗೊಬ್ಬರಕ್ಕಾಗಿ ಮಳಿಗೆಗೆ ಬಂದಾಗ ಅವನ ಶೋಷಣೆ ಮಾಡುವುದು ನಿಜಕ್ಕೂ ಅಕ್ಷ್ಯಮ್ಯ ಅಪರಾಧ ಎಂದರು.
ರೈತ ಕೇಳಿದ ಗುಣಟ್ಟದ ರಸಗೊಬ್ಬರ ನೀಡದೆ, ಮಳಿಗೆಯವರು ಕೊಡುವ ಕಾಂಬಿನೇಶನ್ ಗೊಬ್ಬರ ಪಡೆಯಲು ಒತ್ತಡ ಹೇರುವುದು, ಪಡೆದ ರಸಗೊಬ್ಬರಕ್ಕೆ ಬಿಲ್ ನೀಡದೆ, ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲು ಮಾಡುವುದು ತರವಲ್ಲ. ಬಹುತೇಕ ಮಾರಾಟಗಾರರು ರೈತರ ಮಕ್ಕಳೆ ಆಗಿದ್ದು ರೈತರ ಸಮಸ್ಯೆಗಳನ್ನು ಅರಿವೂ ಪೂರಕವಾಗಿ ಸ್ಪಂದಿಸಿ ಅದು ಬಿಟ್ಟು ಶೋಷಣೆಗೆ ಮುಂದಾದರೆ, ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಭಾವವಿಲ್ಲ: ಸಹಾಯಕ ಕೃಷಿ ನಿರ್ದೇಶಕ ನಾರಾಯಣಸ್ವಾಮಿ, ತಾಲೂಕಿನಾದ್ಯಂತ ರಸಗೊಬ್ಬರಕ್ಕೆ ಯಾವುದೇ ಅಭಾವವಿಲ್ಲ, ಕೆಲವರು ಕೃತಕ ಅಭಾವ ಸೃಷ್ಟಿಸುವ ಪರಿಪಾಠ ತೊರೆಯಬೇಕು. ತಾಲೂಕಿನಾದ್ಯಂತ ಬೇಡಿಕೆ ಇರುವ ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಸಂಬಂಧಪಟ್ಟವರು ಬೇಕಾಗಿರುವ ರಸಗೊಬ್ಬರದ ಬೇಡಿಕೆ ಸಲ್ಲಿಸುವಂತೆ, ಬೇಡಿಕೆ ಸಲ್ಲಿಸಿದಷ್ಟು ರಸಗೊಬ್ಬರ ಪೂರೈಸಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ತಾಲೂಕಿನಲ್ಲಿ ಪ್ರಸಕ್ತ ಸಾಲಿಗೆ 2350 ಟನ್ ಯುರಿಯಾ, ಡಿಎಪಿ 2040 ಟನ್, ಎಂಎಪಿ 515ಟನ್, ಕಾಂಪ್ಲೆಕ್ಸ್ (ಬೇರೆ, ಬೇರೆ ಕೆಮಿಕಲ್ಸ್) ಗೊಬ್ಬರ 2855 ಟನ್ ಬೇಕಾಗಬಹುದೆಂದು
ಅಂದಾಜಿಸಲಾಗಿದ್ದು, ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೆ ಇಲಾಖೆವತಿಯಿಂದ ನೀಡಲಾಗಿರುವ ಆಯಾ ರಸಗೊಬ್ಬರದ ದರಗಳನ್ನು ಪ್ರತಿಯೊಬ್ಬ ಮಾರಾಟಗಾರರು ತಮ್ಮ ಮಳಿಗೆಗಳ ಮುಂದೆ ಲಗತ್ತಿಸುವಂತೆ, ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದೆಂದ ಅವರು, ರಸಗೊಬ್ಬರ ಕಲಬೆರೆಕೆಯಾದದ್ದು ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ ಅವರು, ಹಳೇಯ ಸ್ಟಾಕ್ ರಸಗೊಬ್ಬರದ ದರದಲ್ಲಿ ಕಡಿಮೆಯಾಗಿದ್ದು ಅದನ್ನು ಪರಿಷ್ಕೃತ ಕಡಿಮೆ ದರಕ್ಕೆ ಮಾರುವಂತೆ ಸೂಚನೆ ನೀಡಿದರು.
ವಿವಿಧ ಸಹಕಾರ ಸಂಘಗಳವರು ರಸಗೊಬ್ಬರ ಸಂಗ್ರಹ ಹಾಗೂ ತರಿಸಲು ವೆಚ್ಚ ತಗಲುತ್ತಿದ್ದು ಇದಕ್ಕಾಗಿ ರೈತರಿಂದ ಹೆಚ್ಚಿಗೆ ಚೀಲವೊಂದಕ್ಕೆ ನಿರ್ವಹಣೆ (ಹ್ಯಾಡ್ಲಿಂಗ್)ದರ ಪಡೆಯಲು ಅನುಮತಿ ನೀಡುವಂತೆ ಮನವಿ ಮಾಡಿ, ತಮ್ಮ ಸಮಸ್ಯೆ ತೋಡಿಕೊಂಡರು. ಆದರೆ ಅಧಿಕಾರಿಗಳು ರಸಗೊಬ್ಬರ ಮಾರಾಟಗಾರರು ಯಾವುದೇ ಕಾರಣಕ್ಕೂ ಹೆಚ್ಚಿನ ದರ ವಸೂಲು ಮಾಡದಂತೆ ತಾಕೀತು ಮಾಡಿ, ಅಕ್ರಮಗಳು ಕಂಡುಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. 19 ವಿಎಸ್ಎಸ್ಎನ್ ಸೇರಿದಂತೆ 47ಖಾಸಗಿ ರಸಗೊಬ್ಬರ ಮಾರಾಟಗಾರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

