ಬಸ್ ಸಂಚಾರವಿಲದೇ ಪ್ರಯಾಣಿಕರ ಪರದಾಟ
ತುರುವೇಕೆರೆ: ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೇ ಕೆಎಸ್ಆರ್ಟಿಸಿ ಚಾಲಕರು ಹಾಗೂ ನಿರ್ವಾಹಕರು ಮಾಡಿದ ಬೆಂಗಳೂರು ಚಲೋ ಕಾರ್ಯಕ್ರಮದಿಂದಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು.
ಎಐಟಿಯುಸಿ ಸಂಘಟನೆ ನೀಡಿದ್ದ ಕರೆಯನ್ವಯ ಸ್ಥಳೀಯ ಕೆಎಸ್ಆರ್ಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಲವಾರು ಚಾಲಕರು ಹಾಗೂ ನಿರ್ವಾಹಕರು ಗುರುವಾರ ದಿಢೀರನೇ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇದರಿಂದಾಗಿ ಇಂದು ಸಾವಿರಾರು ಪ್ರಯಾಣಿಕರು ಬಸ್ನ ಸಂಚಾರವಿಲ್ಲದೇ ಪರದಾಡಿದರು.
ಈ ಸಂಘಟನೆಗೆ ಸೇರಿದ ನೌಕರರು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ಬಸ್ ಸಂಚಾರಕ್ಕೆ ವ್ಯತ್ಯಯ ಮಾಡಿದ್ದರಿಂದ ಜನರು ಹಿಡಿಶಾಪ ಹಾಕುತ್ತಿದ್ದರು. ತಾಲೂಕು ಬಸ್ ಡಿಪೋದ ಮೂಲಕ 65 ರೂಟ್ಗಳು ಇದ್ದವು. ಇದರಲ್ಲಿ 25 ರೂಟ್ ಮಾತ್ರ ಬಸ್ ಮಾರ್ಗ ಸಂಚರಿಸಿತು ಎಂದು ಹೇಳಲಾಗಿದೆ. ಎಐಟಿಯುಸಿ ಸಂಘಟನೆಯ ಸದಸ್ಯರಾಗಿರುವ ಹಲವಾರು ನಿರ್ವಾಹಕರು ಹಾಗೂ ಚಾಲಕರು ಮಾತ್ರ ಈ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಏಕಾಏಕಿ ಬಸ್ ಸಂಚಾರ ಬಂದ್: ಆದರೆ ಗುರುವಾರ ಬೆಳಗ್ಗೆಯೇ ಬಸ್ಗಳ ಸಂಚಾರ ವಿರಳವಾಗಿದ್ದಾಗಲೇ ಪ್ರಯಾಣಿಕರಿಗೆ ಅರಿವಿಗೆ ಬಂದಿದ್ದು. ಹಲವಾರು ಪ್ರಯಾಣಿಕರು ಬಸ್ ಇಲ್ಲದ ಬಗ್ಗೆ ಬಸ್ ನಿಲ್ದಾಣದಲ್ಲಿ ಇರುವ ಟಿಸಿಯನ್ನು ತರಾಟೆಗೆ ತೆಗೆದುಕೊಂಡರು. ಆದರೆ ಅವರು ನಿರುತ್ತರಾಗಿದ್ದರು. ಎಐಟಿಯುಸಿ ಸಂಘಟನೆಯ ಪದಾಧಿಕಾರಿಗಳು ಇತರೆ ಸಂಘಟನೆಯ ಸದಸ್ಯರನ್ನೂ ಸಹ ತಮ್ಮ ಕಾರ್ಯಕ್ರಮಕ್ಕೆ ಬರುವಂತೆ ಒತ್ತಾಯಿಸಿದ್ದರೆಂದೂ ಹೇಳಲಾಗಿದೆ. ಆದರೆ ತಾವುಗಳು ಏಕಾಏಕಿ ಬಸ್ ಸಂಚಾರವನ್ನು ತಡೆಹಿಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹಲವಾರು ನಿರ್ವಾಹಕರು ಹಾಗೂ ಚಾಲಕರು ಕೆಲ ಬಸ್ಗಳನ್ನು ಮಾತ್ರ ಓಡಿಸಲು ಮುಂದಾದರು.
ಪರೀಕ್ಷೆ ಪರದಾಟ: ಡಿಪ್ಲೊಮೋ ಪರೀಕ್ಷೆ ಇದ್ದು ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಬಸ್ಗಳಿಗೆ ಕಾದು ಬಸವಳಿದಿದ್ದಾರೆ. ಬಸ್ನ ಸಂಚಾರ ಇಲ್ಲ ಎಂದು ತಿಳಿದ ಮೇಲಷ್ಟೇ ಬೇರೆ ವ್ಯವಸ್ಥೆ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕಾಯಿತು. ಗುರುವಾರ ಬೆಳಗ್ಗೆ ಮನೆ ಬಿಟ್ಟು ಶಾಲಾ ಕಾಲೇಜಿಗೆ ಬಂದಿರುವ ಪುಟಾಣಿ ಮಕ್ಕಳಿಂದ ಹಿಡಿದು ವಿದ್ಯಾರ್ಥಿಗಳು ಸಹ ಸಂಜೆ ಮನೆಗೆ ಹಿಂತಿರುಗಲು ಬಸ್ ಇಲ್ಲದೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಬಸ್ ನಿಲುಗಡೆ ಮಾಡಿದ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಕೇವಲ ಒಂದೆರಡು ಡಿಪೋಗಳ ನಿರ್ವಾಹಕರು ಹಾಗೂ ಚಾಲಕರು ಮಾತ್ರ ಬೆಂಗಳೂರು ಚಲೋಗೆ ಹೋಗಿದ್ದಾರೆ ಎನ್ನಲಾಗಿದೆ. ಬೇರೆ ಜಿಲ್ಲೆಯಿಂದ ಬಸ್ಗಳು ಮಾಮೂಲಾಗೇ ಓಡಾಡಿಕೊಂಡಿದ್ದವು. ಈ ಬಸ್ ಡಿಪೋದಿಂದ ಗ್ರಾಮಾಂತರ ಪ್ರದೇಶಕ್ಕೆ ತೆರಳುವ ಬಸ್ಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದರಿಂದ ಸಾವಿರಾರು ಪ್ರಯಾಣಿಕರು ಲಗೇಜ್ ಆಟೋಗಳ ಮೊರೆ ಹೋಗುವುದು, ಆಟೋಗಳ ಮೊರೆ ಹೋಗುವುದು ಅನಿವಾರ್ಯವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

