ತುಮಕೂರು

ಏತ ನೀರಾವರಿ ಯೋಜನೆ ಜಾರಿಗೆ ಕ್ರಮ

Published On :

ಕ.ಪ್ರ.ವಾರ್ತೆ, ಕುಣಿಗಲ್  ನ.24
ಕುಡಿಯುವ ನೀರು ಪೂರೈಕೆಗೆ  ಅಗತ್ಯ ನೀರಾವರಿ ಸವಲತ್ತು ಕಲ್ಪಿಸುವ ಉದ್ದೇಶದಿಂದ ರೂಪಿತಗೊಂಡಿರುವ ಬಂಡೀಹಳ್ಳಿ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕ್ಷೇತ್ರದ ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹನುಮಂತನಗರ ಗಡಿಯಿಂದ ಕೆಂಕೆರೆವರೆಗಿನ ಹೇಮಾವತಿ ನಾಲಾ ವಲಯದ ಅಚ್ಚುಕಟ್ಟು ಪ್ರದೇಶದ 5.4 ಕಿಮಿ ರಸ್ತೆಗಳ ಅಭಿವೃದ್ಧಿಗೆ ನಬಾರ್ಡ್ ನೆರವಿನಿಂದ 110 ಲಕ್ಷ ರು.ವೆಚ್ಚದಲ್ಲಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ, ವಾರ್ಷಿಕ ತಾಲೂಕಿಗೆ ಆರು ಟಿಎಂಸಿ ನೀರನ್ನು ಹೇಮಾವತಿ ನಾಲಾ ವಲಯದಿಂದ ಹರಿಸಬೇಕಾಗಿದೆ. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ತಾಲೂಕಿನ ಪಾಲಿನ ಹೇಮಾವತಿ ನೀರು ಪಡೆಯಲು ಹರಸಾಹಸ ಪಡುವ ಪ್ರಮೇಯ ಬಂದಿರುವುದು ನಿಜಕ್ಕೂ ಖೇದಕರ. ಆದರೂ ನಾಲಾ ವಲಯದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಬಂಡೀಹಳ್ಳಿ ಏತನೀರಾವರಿ ಸೇರಿದಂತೆ ಇತರೆ ನೀರಾವರಿ ಕಾಮಗಾರಿಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು.
ರಸ್ತೆ ಹಾಳು: ಗ್ರಾಮಾಂತರ ಪ್ರದೇಶದಲ್ಲಿ ಜನ, ಜಾನುವಾರು ಸಂಪರ್ಕಕ್ಕೆ ಉತ್ತಮ ರಸ್ತೆಯನ್ನು ಕಿಮಿ ಒಂದಕ್ಕೆ 30 ಲಕ್ಷ ಖರ್ಚು ಮಾಡಿ ನಿರ್ಮಿಸಲಾಗುತ್ತಿದ್ದು, ಅಕ್ರಮ ಮರಳು ಲಾರಿಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಾ, ಜನ ಜಾನುವಾರು ತಿರುಗಾಡಲು ತೊಂದರೆಯಾಗುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಜಾಗೃತೆ ವಹಿಸಿ ಅವರ ಗ್ರಾಮಗಳ ರಸ್ತೆಗಳ ಸಂರಕ್ಷಣೆಗೆ ಅವರೇ ಕ್ರಮ ಕೈಗೊಳ್ಳುವಂತಾಗಬೇಕಿದೆ. ತಾಲೂಕಿನ ಆರು ಕಾಮಗಾರಿಗಳನ್ನು ಕೇಂದ್ರವು ತಡೆ ಹಿಡಿದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಂಡು ಶೀಘ್ರಕಾಮಗಾರಿ ಅನುಷ್ಠಾನಕ್ಕೆ ಸಹಕರಿಸುವ ಆಶ್ವಾಸನೆ ನೀಡಿದ್ದಾರೆಂದರು.
ಸದ್ಬಳಕೆ ಮಾಡಿಲ್ಲ: ಜಿಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಡಾ.ಬಿ.ಎನ್.ರವಿ, ತಾಲೂಕಿನ ಗಡಿಭಾಗದ ಗ್ರಾಮಗಳಾದ ಕೆಂಕೆರೆ, ಭೈರನಾಯಕನಹಳ್ಳಿ, ಹನುಮಂತನಗರ ಗ್ರಾಮಗಳು ರಸ್ತೆಯಿಲ್ಲದೆ, ಜನರು ಪರದಾಡುವಂತಾಗಿದೆ. ಸಿಎಂ ಆಗಿದ್ದ ಕುಮಾರಸ್ವಾಮಿ ಅವಧಿಯಲ್ಲಿ ಎಸ್ಜೆಎಸ್‌ಆರ್‌ಐ ಯೋಜನೆಯಲ್ಲಿ, ಈ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಆದರೆ ಈ ಅನುದಾನವು ಬಹುಕಾಲ ಇದ್ದರೂ, ಹಿಂದಿನ ಶಾಸಕ ಬಿ.ಬಿ. ರಾಮಸ್ವಾಮಿಗೌಡ, ಸದ್ಬಳಕೆ ಮಾಡದೆ, ಕೇವಲ ಪ್ರಚಾರಕ್ಕೋಸ್ಕರ ಕಲ್ಲುಗಳ ಮೇಲೆ ತಮ್ಮ ಹೆಸರುಗಳನ್ನು ಹಾಕಿಸಿಕೊಂಡಿದ್ದೇ ಅವರ ಸಾಧನೆ ಎಂದರು.
 ತಹಸೀಲ್ದಾರ್ ಪುಟ್ಟನರಸಯ್ಯ, ಜಿಪಂ ಎಇಇ ಸಣ್ಣಮರಿಗೌಡ, ಹೇಮಾವತಿ ನಾಲಾ ವಲಯದ ಯಡೆಯೂರು ಉಪವಿಭಾಗದ ಅಧಿಕಾರಿಗಳು, ಕಿತ್ನಾಮಂಗಲ ರಮೇಶ, ಜೆಸಿಬಿ ರಾಜಣ್ಣ, ಹುಲಿಯೂರು ದುರ್ಗ ಗ್ರಾಪಂ ಅಧ್ಯಕ್ಷ ವೆಂಕಟೇಶ್, ಜಯರಾಮಯ್ಯ, ಮುಖಂಡ ಹನುಮಂತಯ್ಯ, ಇತರರು ಉಪಸ್ಥಿತರಿದ್ದರು.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.