ಕಕ್ಷಿದಾರರಿಗೆ ನ್ಯಾಯ ದೊರಕಿಸಲು ಮುಂದಾಗಿ
ಕ.ಪ್ರ.ವಾರ್ತೆ ತುಮಕೂರು ನ. 27
ನ್ಯಾಯಾಲಯದಲ್ಲಿ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲರು ತಮ್ಮ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿಸಿ ಕೊಡಲು ಮುಂದಾಗುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹೆಚ್.ಬಿ. ಪ್ರಭಾಕರಶಾಸ್ತ್ರಿ ತಿಳಿಸಿದ್ದಾರೆ.
ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಮೆಗಾ ಲೋಕ್ ಅದಾಲತ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಜವಾಬ್ದಾರಿಯು ಹೆಚ್ಚಾಗುತ್ತದೆ. ಕಾನೂನಿನ ಮೂಲಕವೇ ಎಲ್ಲವನ್ನು ಬಗೆಹರಿಸಲು ಸಾಧ್ಯವಿಲ್ಲ. ಸಮಾಜದ ಸಹಕಾರವೂ ಅಗತ್ಯ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಗ್ರಾಮೀಣ ಪ್ರದೇಶಗಳ ಜನತೆ ಸೌಲಭ್ಯ ವಂಚಿತರಾಗಿದ್ದು, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಬಹುಬೇಗ ಇತ್ಯರ್ಥ ಪಡಿಸುವ ಕೆಲಸ ಆಗಬೇಕೆಂದರು.
ಸಾರ್ವಜನಿಕರಿಗೆ ತೊಂದರೆ: ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಪ್ರಕರಣಗಳು ಇತ್ಯರ್ಥವಾಗುವಲ್ಲಿ ಹಿಂದೆ ಉಳಿಯುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ ಎಂದು ವಿಷಾದಿಸಿದರು.
ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳು ಆದಷ್ಟು ಬೇಗನೆ ಕೇಸುಗಳನ್ನು ಬಗೆಹರಿಸಿ ಸಾರ್ವಜನಿಕರು ನೆಮ್ಮದಿಯ ಜೀವನ ಮಾಡುವಂತೆ ಅವಕಾಶ ಮಾಡಿಕೊಡಬೇಕು. ಜಿಲ್ಲೆಯ ನ್ಯಾಯಾಲಯದ ಪ್ರಕರಣಗಳಲ್ಲಿ 49800 ಕೇಸುಗಳು ಬಾಕಿ ಉಳಿದು ಕೇವಲ 3680 ಕೇಸುಗಳು ಬಗೆಹರಿದಿವೆ. ಬಗೆಹರಿದಿರುವ ಸಮಸ್ಯೆಗಳು ಇತ್ತಿಚೀನ ಪ್ರಕರಣಗಳು ಮಾತ್ರ. ಹಿಂದಿನ ಪ್ರಕರಣಗಳು ಬಾಕಿ ಉಳಿಯುತ್ತಿವೆ. ಆದ್ದರಿಂದ ನಾವೆಲ್ಲಾ ಜಾಗೃತರಾಗಿ ಇತ್ತೀಚಿನ ಪ್ರಕರಣಗಳ ಜೊತೆಗೆ ಹಿಂದಿನ ಪ್ರಕರಣಗಳನ್ನು ಬಗೆಹರಿಸುತ್ತ ಗಮನಹರಿಸಬೇಕಾಗಿದೆ ಎಂದರು.
ಭಾರ ಕಡಿಮೆ ಮಾಡಬೇಕಿದೆ: ಕಾನೂನು ತಜ್ಞರಾದ ನಾವೆಲ್ಲಾ ನಂಬಿಕೆಯ ಆಧಾರದ ಮೇಲೆ ಕೆಲಸ ಕಾರ್ಯಗಳನ್ನು ಮಾಡಿ ನ್ಯಾಯಾಲಯದಲ್ಲಿ ಉಳಿದಿರುವ ಪ್ರಕರಣಗಳನ್ನು ಬಗೆಹರಿಸಿ ನ್ಯಾಯಾಲಯಗಳ ಮೇಲಿನ ಭಾರವನ್ನು ಕಡಿಮೆ ಮಾಡಬೇಕಾಗಿದೆ. ಕಕ್ಷಿದಾರರು ಜಾಸ್ತಿಯಾದಂತೆ, ನ್ಯಾಯದಾನ ವಿಳಂಬವಾಗಿ ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಹೊಗುತ್ತದೆ. ಹೀಗಾದರೆ ನ್ಯಾಯಾಧೀಶರು ಮತ್ತು ಸಾರ್ವಜನಿಕರು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ನ್ಯಾಯಾಧೀಶರು, ತಜ್ಞರು ಪ್ರಕರಣಗಳನ್ನು ಬಗೆಹರಿಸುವ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ನೆಮ್ಮದಿಯ ಜೀವನ ನಡೆಸುವಂತಹ ಅವಕಾಶ ಕಲ್ಪಿಸಿಕೊಡಬೇಕು ಎಂದು ನ್ಯಾ. ಪ್ರಭಾಕರಶಾಸ್ತ್ರಿ ನುಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲ ಗೌಡ ಮಾತನಾಡಿ, ಸಾರ್ವಜನಿಕರು, ಅಧಿಕಾರಿಗಳಿಗೆ ತಿಳಿವಳಿಕೆ ನೀಡಿದರೂ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಪ್ರಕರಣಗಳು ಜಾಸ್ತಿಯಾಗುತ್ತಿರುವುದನ್ನು ಗಮನಿಸಿದರೆ ನ್ಯಾಯಾಲಯದಲ್ಲಿ ಪ್ರಕರಣಗಳು ಖಾಲಿಯಾಗುವುದಿಲ್ಲ ಎಂಬಂತೆ ಕಾಣುತ್ತದೆ. ಪ್ರಕರಣಗಳಿಗೆ ಸಿಲುಕಿರುವ ವಾಹನಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಈ ನ್ಯಾಯಾಲಯದ ಆವರಣವನ್ನು ವಾಹನಗಳು ಆವರಿಸಿಕೊಂಡಿವೆ. ನಿಲ್ಲಿಸಲು ಜಾಗವಿಲ್ಲದಂತಾಗಿದೆ. ಇದಕ್ಕೆ ಮೂಲ ಕಾರಣ ಪ್ರಕರಣಗಳು ಇತ್ಯರ್ಥವಾಗದೇ ಇರುವುದು ಎಂದು ಹೆಳಿದರು.
ಹೆಚ್ಚಿದ ಜವಾಬ್ದಾರಿ: ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಜವಾಬ್ದಾರಿಯು ಹೆಚ್ಚಾಗುತ್ತದೆ. ಕಾನೂನಿನ ಮೂಲಕವೇ ಎಲ್ಲವನ್ನು ಬಗೆಹರಿಸಲು ಸಾಧ್ಯವಿಲ್ಲ. ಸಮಾಜದ ಸಹಕಾರವೂ
ಅಗತ್ಯ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಗ್ರಾಮೀಣ ಪ್ರದೇಶಗಳ ಜನತೆ ಸೌಲಭ್ಯ ವಂಚಿತರಾಗಿದ್ದು ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಬಹುಬೇಗ ಇತ್ಯರ್ಥಪಡಿಸುವ ಕೆಲಸ ಆಗಬೇಕೆಂದರು.
ಇದೇ ಸಂದರ್ಭದಲ್ಲಿ ಯುನೈಟೆಡ್ ಇಂಡಿಯಾ ಇನ್ಷ್ಯೂರೆನ್ಸ್ ಕಂಪನಿಯಿಂದ ವಿವಿಧ ಪ್ರಕರಣಗಳಲ್ಲಿ ಬಾಕಿ ಇದ್ದ ಪರಿಹಾರದ ಚೆಕ್ಗಳನ್ನು ಪಲಾನುಭವಿಗಳಿಗೆ ವಿತರಿಸಿದರು.
ನ್ಯಾಯಾಧೀಶ ಸಿದ್ದಲಿಂಗ ಪ್ರಭು, ಕಾನೂನು ಸಲಹೆಗಾರರು, ವಕೀಲರು, ಯುನೈಟೆಡ್ ಇಂಡಿಯಾ ಇನ್ಷ್ಯೂರೆನ್ಸ್ ಕಂಪನಿಯ ಡಿವಿಜನಲ್ ಮ್ಯಾನೇಜರ್ ಜೆ.ಸಿ ಲೋಕೇಶ್, ರೇಣುಕಾರಾಧ್ಯ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

