ತುಮಕೂರು

ಬಿಸಿಯೂಟ ಸಿಬ್ಬಂದಿ ಬವಣೆ ನಿವಾರಿಸಿ

Published On :

ತುಮಕೂರು: ಒಂದು ಲಕ್ಷಕ್ಕೂ ಹೆಚ್ಚು ಅಕ್ಷರ ದಾಸೋಹ ನೌಕರರು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದು, ರಾಜ್ಯ ಸರ್ಕಾರ ಈ ಕೂಡಲೇ ಬಿಸಿಯೂಟ ಕಾರ್ಯಕರ್ತರ ನೆರವಿಗೆ ಧಾವಿಸಬೇಕು ಎಂದು ರಾಜ್ಯ ಅಕ್ಷರ ದಾಸೋಹ  ನೌಕರರ ಸಂಘದ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , 1 ರಿಂದ 10ನೇ ತರಗತಿಯ ಸುಮಾರು 69,25,932 ವಿದ್ಯಾರ್ಥಿಗಳಿಗೆ 1,14,874 ಬಿಸಿಯೂಟ ಅಡುಗೆ ಸಿಬ್ಬಂದಿ ಸೇವಾ ಸೌಲಭ್ಯ, ಕನಿಷ್ಠ ವೇತನವೂ ಇಲ್ಲದೆ ಬಿಸಿಯೂಟ ಉಣಬಡಿಸುತ್ತಿದ್ದಾರೆ. ಕಳೆದ 11 ವರ್ಷಗಳಿಂದ ದುಡಿಯುತ್ತಿರುವ ಈ ಬಡ ಮಹಿಳೆಯರು ಯಾವುದೇ ಸವಲತ್ತು, ಸೌಲಭ್ಯವಿಲ್ಲದೆ ದಿನವೊಂದಕ್ಕೆ ಕೇವಲ ರು.38ಕ್ಕೆ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ದುಡಿಯುತ್ತಿದ್ದಾರೆ. ಆದರೆ ಪಕ್ಕದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಇದೇ ಬಿಸಿಯೂಟ ಮಹಿಳಾ ಸಿಬ್ಬಂದಿಗೆ ದಿನವೊಂದಕ್ಕೆ 150 ರು. ಇದೆ ಎಂದು ಮೇಸ್ತಾ ತಿಳಿಸಿದರು.
ನೆರೆ ರಾಜ್ಯದ ಮಾದರಿ ಅನುಸರಿಸಿ: ತಮಿಳುನಾಡು ಹಾಗೂ ಕೇರಳ ಮಾದರಿ ಅನುಸರಿಸುವಂತೆ ಒತ್ತಾಯಿಸಿದ ಮಾಲಿನಿ ಮೇಸ್ತಾ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರಿಗೆ ದಿನಮೊಂದಕ್ಕೆ ರು.174  ಹಾಗೂ ಸರ್ಕಾರದ ಯಾವುದೇ ವಿಭಾಗದಲ್ಲಿ ದುಡಿಯುವವರಿಗೆ ರು.130 ರಿಂದ 150  ಗಳಿಗೆ ಕಡಿಮೆಯಿಲ್ಲದಂತೆ ಕೂಲಿ ಕೊಡಲಾಗುತ್ತಿದೆ. ಆದರೆ ಅಕ್ಷರ ದಾಸೋಹ ಮಹಿಳಾ ನೌಕರರಿಗೆ ಮಾತ್ರ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಕ್ಷರ ದಾಸೋಹ ಯೋಜನೆಯಿಂದ ಮಕ್ಕಳ ಗೈರು ಹಾಜರಾತಿ ಪ್ರಮಾಣ ಕಡಿಮೆಯಾಗಿ, ಮಧ್ಯಾಹ್ನದ ನಂತರವೂ ಶಾಲಾ ಚಟುವಟಿಕೆಗಳಲ್ಲಿ ಮಕ್ಕಳು ಕ್ರಿಯಾತ್ಮಕವಾಗಿ ಭಾಗವಹಿಸುತ್ತಿರುವುದು ಅಷ್ಟೇ ಅಲ್ಲ, ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುತ್ತಿದ್ದಾರೆ. ವಿದ್ಯಾರ್ಥಿಗಳ ಈ ಬೆಳವಣಿಗೆಗೆ ಕಾರಣವಾಗಿರುವ ಈ ಬಿಸಿಯೂಟ ಮಹಿಳಾ ನೌಕರರನ್ನು ಮಾತ್ರ ಸರ್ಕಾರ ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗೀಕರಣ ಸಲ್ಲ: 2013 ಮೇ 17,18 ರಂದು ನಡೆದ 45 ನೇ ಐಎಲ್ಸಿ (ಭಾರತೀಯ ಕಾರ್ಮಿಕ ಸಮ್ಮೇಳನ) ಸರ್ಕಾರದ  ವಿವಿಧ ಯೋಜನೆಗಳಲ್ಲಿ  (ಸ್ಕೀಂ ವರ್ಕರ್ಸ್) ದುಡಿಯುವ ಕಾರ್ಯಕರ್ತರಿಗೆ ಕನಿಷ್ಟ ಕೂಲಿ, ಸಾಮಾಜಿಕ ಭದ್ರತೆ ಮತ್ತು ಕೆಲಸದ ಭದ್ರತೆಯನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಈ ಶಿಪಾರಸ್ಸಿನ ಆಧಾರದಲ್ಲಿ ಬಿಸಿಯೂಟ ನೌಕರರಿಗೆ ಕನಿಷ್ಟ ರು. 3 ಸಾವಿರ ನೀಡಬೇಕೆಂದು ಒತ್ತಾಯಿಸಿದರು. ಹಾಗೆಯೇ ಬಿಹಾರದ ಬಿಸಿಯೂಟ ಯೋಜನೆಯಲ್ಲಿ ಆದ ಘಟನೆಗಳನ್ನು ಆಧರಿಸಿ, ರಾಜ್ಯ ವಿಧಾನಪರಿಷತ್ನಲ್ಲಿ ನಡೆದ ಚರ್ಚೆಯಲ್ಲಿ ಶಿಕ್ಷಣ ಮಂತ್ರಿಗಳು ತಾವೇ ಖುದ್ದಾಗಿ ನಿಂತು ಕಾರ್ಪೊರೇಟ್ ಸಂಸ್ಥೆಗಳಿಗೆ ಬಿಸಿಯೂಟ ಯೋಜನೆಯನ್ನು ಖಾಸಗಿ, ಕಾರ್ಪೊರೇಟ್ ಸಂಸ್ಥೆಗಳಿಗೆ ವಹಿಸಿಕೊಡುತ್ತೇನೆ ಎಂದು ಪ್ರಶ್ನೋತ್ತರ ಚರ್ಚೆಯ ವೇಳೆ ತಿಳಿಸಿದ್ದಾರೆ. ಸರ್ಕಾರದ ಈ ಪ್ರಯತ್ನ ಕೂಡಲೇ ನಿಲ್ಲಬೇಕು ಮೇಸ್ತಾ ಆಗ್ರಹಿಸಿದರು.
ಉಂಡು ತೇಗುವ ಖಾಸಗಿ ಬೇಡ: ಈಗಾಗಲೇ ಖಾಸಗೀಕರಣದ ಫಲವಾಗಿ 40 ಸಾವಿರ  ಬಿಸಿಯೂಟ ತಯಾರಿಸುವ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಇಸ್ಕಾನ್ ನಂತಹ ಸಂಸ್ಥೆಗಳು ಸರ್ಕಾರದ ಅನುದಾನ ತೆಗೆದುಕೊಂಡು ಮತ್ತೆ ಹೊರಗಿನ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ವಿದೇಶಗಳಲ್ಲಿ ಸಹಸ್ರ ಕೋಟಿಗಟ್ಟಲೆ ನಿಧಿ ಸಂಗ್ರಹಿಸಿ, ಬಿಸಿಯೂಟವನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಈ ಕುರಿತು ಹಲವು ಬಾರಿ ವಿಧಾನಸಭೆಯಲ್ಲೂ ಚರ್ಚಿಸಿರುವುದು ಗಮನಾರ್ಹ ಎಂದರು. ಜಿಲ್ಲಾ ಬಿಸಿಯೂಟ ಕಾರ್ಯದರ್ಶಿ ಮಲ್ಲಮ್ಮ, ಸಿಐಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಸಿ ಎನ್.ಕೆ. ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



ಬೇಡಿಕೆಗಳು...
ಟಿ ಇಲಾಖಾ ಮಾರ್ಗದರ್ಶನದಂತೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 93 ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಮಾತ್ರ ಈ ಯೋಜನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಖಾಸಗಿಯವರ ಸಹಾಯ ಬೇಡ.
ಟಿ ಒಂದು ವೇಳೆ ಪಡೆದರೆ ಆ ಹಣವನ್ನು ಯೋಜನೆಯ ಇನ್ನಿತರ ಅಂದರೆ ಕಟ್ಟಡ ಪರಿಕರಗಳಿಗೆ ಉಪಯೋಗಿಸಲಿ. ಬಿಸಿಯೂಟ ಸಂಪೂರ್ಣ ಜವಾಬ್ದಾರಿಯನ್ನು ಯೋಜನೆಯ ಅಧಿಕಾರಿಗಳಿಗೆ, ಅಡುಗೆ ಸಿಬ್ಬಂದಿಗೆ ನೀಡಬೇಕು. ಇದರಿಂದ ಶಿಕ್ಷಕರ ಹೊರೆ ಕಡಿಮೆಯಾಗಲಿದೆ.
ಟಿ ಸಾಮಾಜಿಕ ಭದ್ರತೆಯ ಅಂಗವಾಗಿ ಕೇಂದ್ರ ಸರ್ಕಾರದ ಜನಶ್ರೀ ಯೋಜನೆಯನ್ನು ಜಾರಿ ಮಾಡುವುದರಿಂದ ಬಿಸಿಯೂಟ ನೌಕರರ ಮಕ್ಕಳಿಗೆ ಹಾಗೂ ನೌಕರರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಹೀಗಾಗಿ ಈ ಯೋಜನೆಯನ್ನು ಎಲ್ಲ ನೌಕರರಿಗೆ ವಿಸ್ತರಿಸಬೇಕು. ಕಳೆದ 11 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ಯಾವುದೇ ಕಾರಣಕ್ಕೂ ತೆಗೆಯಬಾರದು. -ಶಾಲೆಗಳನ್ನು ವಿಲೀನಗೊಳಿಸುವ ಸಂದರ್ಭದಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡುವ ಹಾಗೆ ಅಡುಗೆಯವರನ್ನು ಹತ್ತಿರದ ಶಾಲೆಗಳಿಗೆ ವರ್ಗಾವಣೆ ಮಾಡಬೇಕು. ಪ್ರತಿ ತಿಂಗಳೂ ಸರಿಯಾಗಿ ವೇತನವನ್ನು ನೀಡಬೇಕು. ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು. ಅಡುಗೆ ತಯಾರಿಸುವ ವೇಳೆ ಅಕಸ್ಮಾತ್ ಗಾಯಗಳಾದಲ್ಲಿ ಪರಿಹಾರ ನೀಡುವುದು ಕಡ್ಡಾಯವಾಗಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.