ತುಮಕೂರು

ವೈಭವದ ಸಂಕೇತ ತಿಪಟೂರು ಗಣೇಶ ಉತ್ಸವ

Published On :

ತಿಪಟೂರು: ಸ್ವಾಂತತ್ರ್ಯ ಹೋರಾಟಕ್ಕೆ ಜನತೆಯ ಒಗ್ಗೂಡಿಸುವ ನಿಟ್ಟಿನಲ್ಲಿ ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಎಂದು ಘೋಷಿಸಿದ್ದ ಬಾಲಗಂಗಾಧರ ತಿಲಕ್ 1930ರ ದಶಕದಲ್ಲಿ ಪ್ರಾರಂಭಿಸಿದ ಗಣೇಶ ಉತ್ಸವಗಳು ದೇಶಾದಾದ್ಯಂತ ಮಹತ್ವ ಪಡೆದುಕೊಂಡಿವೆ. ಇಂತಹ ಮಹತ್ವದ ಉತ್ಸವಗಳಲ್ಲಿ ತಿಪಟೂರು ಗಣೇಶ ಉತ್ಸವ ಕೂಡ ಒಂದು.
 ಸ್ವಾತಂತ್ರ್ಯ ಸೇನಾನಿ ಬಾಲಗಂಗಾಧರ ತಿಲಕ್ ಅವರ ಕರೆಯಿಂದ ಪ್ರೇರಣೆ ಪಡೆದ ತಿಪಟೂರಿನ  ಸ್ವಾತಂತ್ರ್ಯ ಹೋರಾಟಗಾರರಾದ ತಿಮ್ಮಪ್ಪಯ್ಯ ಅವರ ಆಶಯದಂತೆ 1930ರಲ್ಲಿ ತಿಪಟೂರು ನಗರದಲ್ಲಿ ಗಣೇಶ ಉತ್ಸವ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಮೈಸೂರಿನ ಶಿವನಂಜಪ್ಪನವರ ಅಧ್ಯಕ್ಷತೆಯಲ್ಲಿ ರಚಿತವಾಗಿ ಗಣೇಶ ಉತ್ಸ ಸಮಿತಿಯ ಮುಖಂಡರಾಗಿ ಅನೇಕರು ಯಶಸ್ವಿಯಾಗಿ ಕಾರ್ಯನಿರ್ವಹಿಸಿ 1978ರವರೆಗೆ ಸುಸೂತ್ರವಾಗಿ ಪ್ರತಿವರ್ಷ ಅತ್ಯಂತ ವೈಭವದಿಂದ ನಡೆದುಕೊಂಡು ಬಂದಿತ್ತು. ಈ ಕಾಲದಲ್ಲಿ ನಾಡಿನ ಹಿರಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ ಗಣೇಶನ ಉತ್ಸವ ಅತ್ಯಂತ ಪ್ರಸಿದ್ಧಿ ಪಡೆಯಿತು.  
2004ರಲ್ಲಿ ಗಣೇಶ ಉತ್ಸವ ಪ್ರಾರಂಭದ 75ನೇ ವರ್ಷದ ನೆನಪಿಗಾಗಿ ಅಮೃತ ಮಹೋತ್ಸವ ಕಾರ್ಯಕ್ರಮ ನೆರವೇರಿಸಿದ್ದು, ಇದರ ನೆನಪಿಗಾಗಿ ಭವನವೊಂದನ್ನು ಸಮಿತಿಯ ವತಿಯಿಂದ ನಿರ್ಮಾಣ ಮಾಡಿ ಸಾರ್ವಜನಿಕ ಅನುಕೂಲಕ್ಕೆ ನೀಡಲಾಗಿದೆ. ಪ್ರಸ್ತುತ ಸಾಲಿನ ಗಣೇಶ ಉತ್ಸವ ಶನಿವಾರ ಆರಂಭವಾಗಿದ್ದು ಡಿಸೆಂಬರ್ 1ರ ವರೆಗೆ ನಡೆಯಲಿದೆ.
ಈ ಸಾಲಿನ ಉತ್ಸವದಲ್ಲೂ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು, ಟ್ಯಾಬ್ಲೋ ಮತ್ತು ತರಂಗಾಂತರ ಸೌಂಡ್  ಸೇರಿದಂತೆ ಅನೇಕ ಕಾರ್ಯಕ್ರಮಗಳು ವಿಶೇಷ ಮೆರಗು ನೀಡಲಿವೆ. ಹುಲಿವೇಷ ಹಾಗೂ ಪಂಜಾಬಿ ಡ್ಯಾನ್ಸ್ ಈ ಬಾರಿಯ ವಿಶೇಷ. ಭಾನುವಾರ ರಾತ್ರಿ 10ಗಂಟೆಯವರೆಗೆ ನಗರದ ರಾಜಬೀದಿಗಳಲ್ಲಿ ಅತ್ಯಂತ ಅರ್ಥಪೂರ್ಣ ಉತ್ಸವವ ನಡೆಯಲಿದೆ. ಬೆಂಗಳೂರಿನ ಕರಗ, ಮೈಸೂರಿನ ದಸರಾ ರೀತಿಯಲ್ಲಿಯೇ ನಗರದ ರಸ್ತೆಗಳಲ್ಲಿ ಅತ್ಯಂತ ವೈಭವದಿಂದ ಜರುಗುವ ಗಣೇಶ ಉತ್ಸವ ನೋಡಲು ಕಿಕ್ಕಿರಿದು ಸೇರುವ  ತಿಪಟೂರು,
ತುರುವೇಕೆರೆ, ಚಿ.ನಾ.ಹಳ್ಳಿ, ಅರಸೀಕೆರೆ ಸೇರಿದಂತೆ ಸುತ್ತಮುತ್ತಲಿನ ಜನರಲ್ಲದೆ, ಬೆಂಗಳೂರು, ತುಮಕೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಉತ್ಸವದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆ ಹೆಚ್ಚುತ್ತಿದೆ.
ಸಾವಿರಾರು ಜನ: ವಿಸರ್ಜನೆ ಸಂದರ್ಭದಲ್ಲಿ ಸತತ 24 ಗಂಟೆಗಳ ಕಾಲ ನಡೆಯುವ ಉತ್ಸವವನ್ನು ನೋಡಲು ಸಾವಿರಾರು ಜನ ಸೇರುತ್ತಾರೆ. ಬಹುತೇಕ ಕಟ್ಟಡಗಳು ಆಕರ್ಷಕ ವಿದ್ಯುತ್ ದೀಪಗಳಿಂದ ಬೆಳಗುತ್ತಿರುತ್ತವೆ. ನಗರದ ಸರ್ಕಲ್ಗಳಲ್ಲಿ ಗಣೇಶನಿಗೆ ಹತ್ತಾರು ಸಂಘ ಸಂಸ್ಥೆಗಳವರು ವಿಶೇಷ ಹಾರತುರಾಯಿ ಅರ್ಪಿಸಿ ಪೂಜೆ ಸಲ್ಲಿಸಿ ಪಾನಕ, ಸಿಹಿ, ಪುಳಿಯೊಗರೆ, ಚಿತ್ರಾನ್ನ ಹಂಚುವುದು ವಿಶೇಷ.
 ಸಾಂಸ್ಕೃತಿಕವಾಗಿ ಅತ್ಯಂತ ವಿಜೃಂಭಣೆಯಿಂದ ನಡೆಯುವ ಈ ಉತ್ಸವದಲ್ಲಿ ಪ್ರಮುಖವಾಗಿ ಕೇರಳದ ಚಂಡೆವಾದ್ಯ, ಕುಪ್ಪುಂನ ನಾದಸ್ವರ, ಮದ್ರಾಸ್ನ ಕೀಲುಕುದುರೆ ಸೇರಿದಂತೆ ಹೆಸರಾಂತ ಕಲಾ ತಂಡಗಳು ಪ್ರತಿವರ್ಷ ಪ್ರದರ್ಶನ ನೀಡುತ್ತವೆ.
ಇದುವರೆಗೂ ನಡೆದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಸರಾಂತ ಗಾಯಕರಾದ ಪಿ.ಕಾಳಿಂಗರಾವ್, ಪಿಟೀಲ್ ಚೌಡಯ್ಯ, ಎಂ.ಎಸ್. ಸುಬ್ಬುಲಕ್ಷ್ಮಿ, ಜೇಸುದಾಸ್, ಬಾಂಬೆ ಸಿಸ್ಟರ್ಸ್, ಕದರಿ ಗೋಪಾಲನಾಥನ್ ಸೇರಿದಂತೆ ಅಗ್ರಗಣ್ಯ ಕಲಾವಿದರು ತಮ್ಮ ಗಾಯನ ಮತ್ತು ವಾದ್ಯಗಳ ಸ್ವರದಿಂದ ಭಕ್ತರನ್ನು ಸಂತೃಪ್ತಿಗೊಳಿಸಿದ್ದಾರೆ. ಪ್ರತಿವರ್ಷ ಕನಿಷ್ಠ 80ರಿಂದ ಗರಿಷ್ಠ 90 ದಿನಗಳ ಕಾಲ ನಡೆಯುವ ಗಣೇಶ ಪೂಜೆಯ ವೇಳೆ ನಿತ್ಯ ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ.
ಉತ್ಸವಕ್ಕೆ ಈಗಾಗಲೆ ಬಿಗಿ ಪೊಲೀಸ್ ವ್ಯವಸ್ಥೆ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೇಚ್ಚರಿಕೆ ತೆಗೆದುಕೊಳ್ಳಲಾಗಿದೆ.


ಚಿತ್ತಾಕರ್ಷಕ ಬೆಳಕು
ವಿಶೇಷ ಸಿಡಿ ಮದ್ದು ಪ್ರದರ್ಶನಕ್ಕೆ ಕೇರಳದ ಪ್ರಸಿದ್ಧ ತಂಡ ಆಗಮಿಸಲಿದ್ದು ಭಾನುವಾರ ಬೆಳಗಿನ ಜಾವ 2ಗಂಟೆಗೆ ಮತ್ತು ಗಣೇಶ ವಿಸರ್ಜನೆಯ ವೇಳೆ ಭಾನುವಾರ ರಾತ್ರಿ 10ಗಂಟೆಗೆ ತಿಪಟೂರು ಅಮಾನಿಕೆರೆ ಬಳಿ ಸಿಡಿಸುವ ಚಿತ್ತಾಕರ್ಶಕ ಬೆಳಕಿನೊಂದಿಗೆ ಸದ್ದು 20 ಕಿ.ಮೀ.ದೂರದಲ್ಲಿನ ಸುತ್ತಮುತ್ತಲ ಊರುಗಳಲ್ಲಿ ಪ್ರತಿಧ್ವನಿಸುತ್ತದೆ. ಸಿಡಿ ಮದ್ದಿನ ಪ್ರದರ್ಶನ ನೋಡಲೇ ಕೆರೆ ಅಂಗದಲ್ಲಿ ಲಕ್ಷಾಂತರ ಜನ ಸೇರಿವುದು ವಿಶೇಷವಾಗಿದೆ. ಅಲ್ಲದೆ ನಗರದ ಅಮಾನಿಕೆರೆ ಹೇಮಾವತಿ ನೀರಿನಿಂದ ತುಂಬಿ ತುಳುಕುತ್ತಿದ್ದು, ಹಲವಾರು ವರ್ಷಗಳ ನಂತರ ತೆಪ್ಪೋತ್ಸವ ವಿಷೇಶ ಆಕರ್ಷಣೆಯಾಗಿದೆ. ಪ್ರತಿವರ್ಷದಿಂತೆ ಈ ವರ್ಷವೂ ಯಾವುದೇ ಗೊಂದಲವಿಲ್ಲೆ ಅತ್ಯಂತ ವಿಜೃಂಭಣೆಯಿಂದ ಉತ್ಸವ ನಡೆಯಲು ಎಂಬುದು ನಾಗರೀಕರು, ಜನಪ್ರತಿನಿಧಿಗಳ ಮತ್ತು ಸಂಘ ಸಂಸ್ಥೆಗಳ ಆಶಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.