ಲೋಷನ್ಗಳ ಅಕ್ರಮ ಮಾರಾಟ ತಡೆಗೆ ಪ್ರಜ್ಞಾವಂತ ನಾಗರಿಕರ ಆಗ್ರಹ
ಕನ್ನಡಪ್ರಭ ವಾರ್ತೆ ಕುಣಿಗಲ್ ಸೆ. 1
ಪಟ್ಟಣದ ಕೆಲ ಹಿಂದುಳಿದ ಬಡಾವಣೆಗಳಲ್ಲಿ ಯಾವುದೇ ಸೈಕಲ್ ಶಾಪ್ ಮತ್ತು ಟೈಪಿಂಗ್ ಅಂಗಡಿಗಳು ಇಲ್ಲದಿದ್ದರೂ, ಅಲ್ಲಿನ ಅಂಗಡಿಗಳಲ್ಲಿ ಪಂಚರ್ ಲೋಷನ್ ಹಾಗೂ ಎರೆಸರ್ ಲೋಷನ್ ಅಧಿಕ ಮಾರಾಟವಾಗುತ್ತಾ, ಕೆಲ ಯುವಕರು ಲೋಷನ್ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ಲೋಷನ್ಗಳ ಅಕ್ರಮ ಮಾರಾಟ ತಡೆಯಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಕೋಟೆಪ್ರದೇಶದ ಸುತ್ತಮುತ್ತಲೂ, ದೊಡ್ಡಕೆರೆಗೆ ಹೊಂದುಕೊಂಡ ವಸತಿ ಪ್ರದೇಶ, ಮದ್ದೂರು ರಸ್ತೆಯ ಚಿಕ್ಕಕೆರೆ ಸಮೀಪದ ಹಿಂದುಳಿದ ಪ್ರದೇಶದ ಕೆಲ ಅಂಗಡಿಗಳಲ್ಲಿ ಸೈಕಲ್ ಟ್ಯೂಬ್ ಪಂಕ್ಚರ್ ಹಾಕಲು ಬಳಸುವ ಲೋಷನ್ ಮತ್ತು ಟೈಪಿಂಗ್ ಮಾಡಿದಾಗ ತಪ್ಪಾದಲ್ಲಿ ಅದನ್ನು ಸರಿಪಡಿಸಲು ಬಳಸುವ ಎರೆಸರ್ ಲೋಷನ್ಗಳನ್ನು ಅಕ್ರಮವಾಗಿ ಯುವಕರಿಗೆ ಮಾರಾಟ ಮಾಡುತ್ತಿದ್ದು, ಪಂಚರ್ ಲೋಷನ್ ಅನ್ನು ಹತ್ತಿ ಅಥವಾ ಬಟ್ಟೆಗೆ ಹಾಕಿ ವಾಸನೆಯನ್ನು ಹೀರುವ ಮೂಲಕ ಯುವಕರು ಮತ್ತೇರಿಸಿಕೊಂಡರೆ,
ಎರೆಸರ್ ಲೋಷನ್ ಅನ್ನು ತಗಡಿನ ಮೇಲೆ ಹಾಕಿ, ಕೆಳಗೆ ಬೆಂಕಿಕಡ್ಡಿಗೀರಿ, ಬರುವ ಅಪಾಯಕಾರಿ ಹೊಗೆಯನ್ನು ಸೇವಿಸಿಸುತ್ತಾರೆ. ಮತ್ತಿನಲ್ಲಿ ತೇಲಾಡುವ ಕೆಲ ಯುವಕರು, ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲದೆ, ಹಿರಿಯರು ಸೇರಿದಂತೆ ಮಹಿಳೆಯರಿಗೂ ಗೌರವ ನೀಡದೆ ಅಸಭ್ಯವಾಗಿ ವರ್ತಿಸುತ್ತಿರುವುದು ನಾಗರಿಕರ ತಲೆನೋವಿಗೆ ಕಾರಣವಾಗಿದೆ. ಇನ್ನು ಈ ಮತ್ತಿಗೆ ಅವಲಂಬಿತರಾಗುವ ಯುವಕರು ಲೋಷನ್ ಮತ್ತಿನಲ್ಲಿ ಅಂಗಡಿಗಳಲ್ಲಿ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಹಲವು ಗಂಭೀರ ಅಪರಾಧಗಳನ್ನು ಎಸಗುತ್ತಿದ್ದು, ಪಟ್ಟಣದಲ್ಲಿ ದ್ವಿಚಕ್ರ ವಾಹನ ಕಳವು ಸಹ ಹೆಚ್ಚಾಗಲು ಕಾರಣವೆಂದು ಹಿರಿಯ ನಾಗರಿಕರಾದ ಶ್ರೀನಿವಾಸ್ ಆರೋಪಿಸಿದ್ದಾರೆ.
ಖಂಡನೀಯ: ಇನ್ನು ಪಟ್ಟಣದ ಕೆಲ ಪ್ರಮುಖ ಸ್ಟೇಷನರಿ ಅಂಗಡಿಯವರು ಮತ್ತಿಗೆ ಒಳಗಾಗಿರುವ ಯುವಕರೆಂದು ಗೊತ್ತಿದ್ದರೂ, ಅವರಿಂದ ಹೆಚ್ಚಿನ ಹಣ ಪಡೆದು ಪಂಕ್ಚರ್ ಹಾಗೂ ಎರೆಸರ್ ಲೋಷನ್ ನೀಡುತ್ತಿರುವುದು ನಿಜಕ್ಕೂ ಖಂಡನೀಯ. ಬಹುತೇಕ ಹಿಂದುಳಿದ ಪ್ರದೇಶಲ್ಲಿನ ಕೆಲ ಯುವಕರು, ಸುಲಭವಾಗಿ ಸಿಗುವ ಈ ಲೋಷನ್ ನಶೆಯ ಮತ್ತಿಗೆ ಒಳಗಾಗುತ್ತಾ, ತಮ್ಮ ಜೀವನ ಹಾಳು ಮಾಡಿಕೊಳ್ಳುವುದರ ಜೊತೆಯಲ್ಲಿ ಸಮಾಜ ಘಾತುಕ ಶಕ್ತಿಯಾಗಿ ಬೆಳೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆ ಸೇರಿದಂತೆ ತಾಲೂಕು ಆಡಳಿತ ಇಂತಹ ಬಡಾವಣೆಗಳಲ್ಲಿ ಲೋಷನ್ ಮಾರಾಟಕ್ಕೆ ಕಡಿವಾಣ ಹಾಕುವುದರ ಜೊತೆಯಲ್ಲಿ, ಪಟ್ಟಣದಲ್ಲಿನ ಸ್ಟೇಷನರಿ ಅಂಗಡಿ ಮಾಲೀಕರಿಗೆ, ಸಂಬಂಧಪಡದ ವ್ಯಕ್ತಿಗಳಿಗೆ ಲೋಷನ್ ಮಾರಾಟ ಮಾಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡುವ ಮೂಲಕ ಲೋಷನ್ ಪಿಡುಗಿಗೆ ಹಿಂದುಳಿದ ಬಡಾವಣೆ ಪ್ರದೇಶದ ಯುವಕರು ಬಲಿಯಾಗದಂತೆ ತಡೆಯಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

