10 ಕುರಿಗಳು ವಿದ್ಯುತ್ ಆಘಾತಕ್ಕೆ ಸಿಕ್ಕು ಸಾವು
ಕ.ಪ್ರ.ವಾರ್ತೆ ಕುಣಿಗಲ್ ಸೆ.2
ಬೆಸ್ಕಾಂ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಸಮರ್ಪಕ ಗ್ರೌಂಡಿಂಗ್ ವ್ಯವಸ್ಥೆ ಇಲ್ಲದ ಕಾರಣ ಹತ್ತು ಕುರಿಗಳು ವಿದ್ಯುತ್ ಆಘಾತಕ್ಕೆ ಸಿಕ್ಕು ಮೃತಪಟ್ಟರೆ, ಕುರಿಗಾಹಿಯೊಬ್ಬ ಚಿಕಿತ್ಸೆ ಪಡೆಯುತ್ತಿರುವ ಘಟನೆ ತಾಲೂಕಿನ ಅಮೃತೂರು ಹೋಬಳಿಯ ರಾಘವನಹೊಸೂರು ಗ್ರಾಮದ ಸಮೀಪ ಪುಟ್ಟನಪಾಳ್ಯ ಗ್ರಾಮದ ಕಟ್ಟೆ ಬಳಿ ಸೋಮವಾರ ಸಂಭವಿಸಿದೆ.
ರಾಘವನಹೊಸೂರು ಸುತ್ತಮುತ್ತಲ ಗ್ರಾಮಗಳಲ್ಲಿ ಕೃಷಿ ಜೊತೆಗೆ ಕುರಿಸಾಕಾಣೆಯನ್ನು ರೈತರು ಅವಲಂಬಿಸಿದ್ದು, ಕುರಿಗಳನ್ನು ಮೇಯಿಸಿಕೊಂಡು ಬರಲು ಗ್ರಾಮದ ಬಸವರಾಜು ಮತ್ತು ಶಿವಲಿಂಗ ಎಂಬುವವರು ಕುರಿ ಕಾಯುವ ವೃತ್ತಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಎಂದಿನಂತೆ ಸೋಮವಾರ ಕುರಿಗಳನ್ನು ಮೇಯಿಸಲು ಕರೆತಂದಾಗ, ಪುಟ್ಟನಪಾಳ್ಯಕಟ್ಟೆಯ ಮೇಲಿನ ಸುತ್ತಮುತ್ತಲ ಕೃಷಿ ಪ್ರದೇಶಕ್ಕೆ ವಿದ್ಯುತ್ ಪೂರೈಸಲು ರಸ್ತೆಬದಿಯಲ್ಲಿ ಅಳವಡಿಸಲಾದ ವಿದ್ಯುತ್ ಪರಿವರ್ತಕದ ಕೆಳಭಾಗದಲ್ಲಿ ಕುರಿಗಳು ಮೇಯಲು ಹೋಗಿದ್ದವು.
ಆಘಾತ: ಇತ್ತೀಚೆಗೆ ಈ ಪರಿವರ್ತಕವನ್ನು ದುರಸ್ತಿಗೊಳಿಸಲು ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿದ್ದು, ಸದರಿಯವರು ಪರಿವರ್ತಕ ದುರಸ್ತಿಗೊಳಿಸಿದ ನಂತರ ಗ್ರೌಂಡಿಂಗ್ ವ್ಯವಸ್ಥೆ ಸರಿಪಡಿಸದೆ ಹಾಗೇ ಬಿಟ್ಟಿದ್ದ ಕಾರಣ ಮೇಯಲು ಬಂದ ಕುರಿಗಳು ಪರಿವರ್ತಕದ ಕೆಳಗೆ ಬಂದಾಗ ವಿದ್ಯುತ್ ಆಘಾತಕ್ಕೆ ಸಿಕ್ಕು ವಿಲವಿಲ ಒದ್ದಾಡಿ ಪ್ರಾಣಬಿಟ್ಟವು. ಕುರಿಗಾಹಿ ಬಸವರಾಜ ದಿಢೀರ್ ಆಘಾತಗೊಂಡ ಕುರಿ ಎಳೆಯಲು ಮುಂದಾದಾಗ ಆತನಿಗೆ ವಿದ್ಯುತ್ ಆಘಾತವಾಗಿ ಕುಸಿದು ಬಿದ್ದ. ಕೂಡಲೆ ಎಚ್ಚೆತ್ತ ಮತ್ತೊಬ್ಬ ಕುರಿಗಾಹಿ ಶಿವಲಿಂಗ, ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಕೂಗಿಕೊಂಡ.
ಗ್ರಾಮಸ್ಥರು ಸ್ಥಳಕ್ಕಾಗಮಿಸಿ, ಆಘಾತಕ್ಕೆ ಸಿಲುಕಿದ್ದ ಬಸವರಾಜುನನ್ನು ಅಮೃತೂರು ಆಸ್ಪತ್ರೆಗೆ ದಾಖಲಿಸಿದರು. ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಸ್ಥಳದಲ್ಲಿ ಜಮಾವಣೆಗೊಂಡರು. ಅಮೃತೂರು ಪಿಎಸೈ ಮಂಜುನಾಥ ಹೂಗಾರ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಗ್ರಾಮಸ್ಥರು ಬೆಸ್ಕಾಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಕುರಿಗಳನ್ನು ತೆರವುಗೊಳಿಸುವುದಿಲ್ಲವೆಂದು ಪಟ್ಟುಹಿಡಿದರು.
ವಾಗ್ವಾದ: ಅಮೃತೂರು ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು, ಘಟನೆಗೆ ಬೆಸ್ಕಾಂನ ಅಮೃತೂರು ಉಪವಿಭಾಗದ ಸೆಕ್ಷನ್ ಆಫೀಸರ್ ನೇರಹೊಣೆ ಎಂದು ಆರೋಪಿಸಿ, ಸ್ಥಳಕ್ಕೆ ಬಂದ ಎಸ್ಒ ಶಂಕರ್ರೊಂದಿಗೆ ವಾಗ್ವಾದ ನಡೆಸಿದರು. ಎಸ್ಒ ಶಂಕರ್ ಇನ್ನು ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಉತ್ತರದಿಂದ ಆಕ್ರೋಶಗೊಂಡ ಗ್ರಾಮಸ್ಥರು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳುತ್ತೀರಾ ಮತ್ತೆ ಪರಿವರ್ತಕಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೆ ವಿದ್ಯುತ್ ಸರಬರಾಜು ನೀಡಿದ್ದೇಕೆ ಎಂದು ತರಾಟೆಗೆ ತೆಗೆದುಕೊಂಡರು. ನಿಮ್ಮ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎಂದು ನೇರವಾಗಿ ವಾಗ್ವಾದಕ್ಕೆ ಇಳಿದು, ಎಳೆದಾಡಿದರು. ಮಧ್ಯ ಪ್ರವೇಶಿಸಿದ ಪಿಎಸೈ, ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ, ಪರಿಹಾರಕ್ಕೆ ಹಿರಿಯಾಧಿಕಾರಿಗಳು ಆಗಮಿಸಿದ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಶಾಂತರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

