ರಸಋಷಿಗಳಾಗಿ ಕಾವ್ಯ ಕೃಷಿ ಮಾಡಬೇಕು
ಕನ್ನಡಪ್ರಭ ವಾರ್ತೆ ತುಮಕೂರು ಸೆ.3
ಲೇಖಕರು ರಸಋಷಿಗಾಗಿ ಕಾವ್ಯ ಕೃಷಿ ಮಾಡಬೇಕು ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ಅವರು ನಗರದ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ನಡೆದ ಕವಿ ಕೆ.ಎನ್. ಸ್ವಾಮಿ ಅವರ ಬದುಕು ಬರಹ ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೇಖಕರು ಕೃತಿಗಳನ್ನು ರಚಿಸಿದರೆ ಸಾಲದು. ಬದಲಾಗಿ ಕನ್ನಡ ಕಟ್ಟುವ ಕಾರ್ಯದಲ್ಲಿ ಪ್ರಾಂಜಲ ಚಿತ್ತದಿಂದ ದುಡಿಯಬೇಕು. ದುಡಿದಿದ್ದರೆ ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬರುತ್ತಿರಲಿಲ್ಲ. ಸ್ವಾಮಿಯವರು ಕನ್ನಡ ಕಟ್ಟುವ ಕಾರ್ಯದಲ್ಲಿ ಕ್ರಿಯಾಶೀಲರಾಗಿ ದುಡಿದವರು. ಮಕ್ಕಳ ಲೋಕ ಕಟ್ಟಿ ಮಾನ್ಯರಾಗಿದ್ದಾರೆ ಎಂದು ಶ್ಲಾಘಿಸಿದರು.
ಕಾಲಧರ್ಮಕ್ಕೆ ಮಣಿಯಬೇಕು: ಪ್ರಶಸ್ತಿ ಪ್ರದಾನ ಮಾಡಿದ ಶಿಕ್ಷಣ ತಜ್ಞ ಹಾಗೂ ಕವಿ ಡಾ. ಓಬಳೇಶ್ಗಟ್ಟಿ ಮಾತನಾಡಿ ಒಂದು ಕೃತಿ ಹೊರಬಂದಾಗ ಅದನ್ನು ಶ್ರದ್ಧೆಯಿಂದ ಓದಬೇಕು. ಓದಿ ಅದರ ಮೌಲ್ಯ ನಿರ್ಧರಿಸಬೇಕು. ಓದುಗರು ಕಾಲಧರ್ಮಕ್ಕೆ ಮಣಿಯಬೇಕೆಂದು ನುಡಿದರು. ಸ್ವಾಮಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಶ್ಲಾಘನೆ: ಮಂದಿರದ ಅಧ್ಯಕ್ಷ ಕೆ.ಬಿ. ಜಯಣ್ಣ ಕಾರ್ಯಕ್ರಮ ಉದ್ಘಾಟಿಸಿ ಸಾಹಿತ್ಯ ಮಂದಿರದ ಕಾರ್ಯಕ್ರಮ ಅನ್ಯರಿಗೆ ಪ್ರಭಾವ ಪ್ರೇರಣೆ ನೀಡುವಂತಿದೆ ಎಂದು ಶ್ಲಾಘಿಸಿದರು. ಹೊಟೇಲ್ ಗಂಗಾಧರ್ ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಿ.ಎನ್. ಸುಗುಣಾದೇವಿಯವರು ಸ್ವಾಮಿ ಅವರ ಸೇವೆ ಶ್ಲಾಘನೀಯ ಮಾತ್ರವಲ್ಲ. ಅನುಕರಣೀಯ. ಅಭಿನಂದನಾ ಕೃತಿ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಪ್ರಬಂಧಗಳನ್ನು ಕುರಿತು ಮಾತನಾಡಿದ ನಿವೃತ್ತ ಇತಿಹಾಸ ಉಪನ್ಯಾಸಕಿ ಎಸ್. ಸಾವಿತ್ರಿ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ವೈಜ್ಞಾನಿಕ ವಿಚಾರಗಳ ಚಿಂತನೆಗಳು ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವಲ್ಲಿ ಪ್ರಭಾವಿಯಾಗಿದೆ ಎಂದರು.
ಭಾವಧಾರೆ ಕುರಿತು ಮಹಿಳಾ ಮಕ್ಕಳ ಸಾಹಿತ್ಯ ಕೂಟದ ಅಧ್ಯಕ್ಷೆ ಕಮಲಾ ಬಡ್ಡಿಹಳ್ಳಿ ಕವಿತೆಗಳು ಸಾತ್ವಿಕ ಪ್ರತಿಭೆಯ ರಸಬುಗ್ಗೆಗಳಾಗಿವೆ ಎಂದರು. ಬಾಲ್ಯ ಬದುಕು ಕುರಿತು ಕೆ.ಜಿ. ಮಂಜುನಾಥ್ ಮಾತನಾಡಿ ಸ್ವಾಮಿ ಮಾದರಿ ವ್ಯಕ್ತಿಗಳೆಂದು ಶ್ಲಾಘಿಸಿದರು. ಚಂದನ್ ಕೆ. ನರಸಿಂಹಯ್ಯ ಸಿದ್ದಾಪುರ, ತಾಲರಂ ಮಾತನಾಡಿದರು. ಗಂಗಾಧರ ಕೊಡ್ಲಿಯವರ, ಡಾ. ಇಂತಿಯಾಜ್ ಅಹಮದ್, ಸಿ.ಎಲ್. ಸುನಂದಮ್ಮ ಉಪಸ್ಥಿತರಿದ್ದರು. ಮಂಜುಳಾದೇವಿ ಪ್ರಾರ್ಥಿಸಿದರು. ಕವಯತ್ರಿ ಉಮಾಶರ್ಮ ಸ್ವಾಗತಿಸಿದರು. ತನು ಅರವಿಂದ್ ವಂದಿಸಿದರು. ಎಂ.ಸಿ. ಉಷಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

