ಕನಕದಾಸರದು ಸಾರ್ವಕಾಲಿಕ ಜನಪರ ಸಾಹಿತ್ಯ
ಕ.ಪ್ರ.ವಾರ್ತೆ ತುಮಕೂರು ಸೆ.3
ಹರಿದಾಸ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಕನಕದಾಸರು ಕೀರ್ತನೆಗಳ ಮೂಲಕ ಸಮಾಜಮುಖಿ ಚಿಂತನೆಗಳನ್ನು ಹರಿಸಿದ್ದಾರೆ. ವೈಚಾರಿಕತೆಯನ್ನು ಕೀರ್ತನೆಗಳಲ್ಲಿ ತುಂಬಿ ಪಾರಮಾರ್ಥಿಕ ಸತ್ಯವನ್ನು ಸಾರಿದ ಕನಕದಾಸರದು ಸಾರ್ವಕಾಲಿಕ ಜನಪರ ಸಾಹಿತ್ಯ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೊಡ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ತುಮಕೂರು ಜಿಲ್ಲಾ ಕಸಾಪ, ತಾಲೂಕು ಹಾಗೂ ನಗರ ಕಸಾಪ ಶಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ವಾರದ ಸಾಹಿತ್ಯ ಸಂಭ್ರಮದ 11ನೇ ಕಾರ್ಯಕ್ರಮದಲ್ಲಿ ಕನಕ ಲೋಕಕ್ಕೆ ಹೋಗುವ ಮುನ್ನ ಎಂಬ ವಿಷಯದ ಬಗ್ಗೆ ಮಾತನಾಡಿದರು.
ವಚನ ಸಾಹಿತ್ಯ ಉದಯವಾಗಿ 300 ವರ್ಷಗಳ ನಂತರ ದಾಸ ಸಾಹಿತ್ಯ ಅರಳಿತು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದಾಸ ಸಾಹಿತ್ಯ ಹುಟ್ಟಿತು. ಜನಮನ ಭಾಷೆಯಲ್ಲಿ ತತ್ವವನ್ನು ಅಳವಡಿಸಿಕೊಂಡು ಕರ್ಣಾನಂದಕರವಾದ ಸಂಗೀತವನ್ನು ಒಳಗೊಂಡು ಜೀವನದ ಆಚಾರ ವಿಚಾರಗಳಿಂದ ತುಂಬಿದ ಹರಿದಾಸ ಸಾಹಿತ್ಯ ಭಕ್ತ ಪರಂಪರೆಗಾಗಿ ಭಕ್ತಿ ಪಂಥವಾಗಿ ಹೊರಹೊಮ್ಮಿತು ಎಂದರು.
ದಾಸ ಪರಂಪರೆ: ವಿಜಯನಗರ ಅರಸರ ಅಣತಿಯಂತೆ ದಾಸ ಸಾಹಿತ್ಯವು ಹರಿಸರ್ವೋತ್ತಮತೆಯನ್ನು ಸಾರುವ ಸಾಹಿತ್ಯವಾಗಿ ಮುಂದೆ ನರಹರಿ ತೀರ್ಥರು, ಶ್ರೀಪಾದರು, ವಿಠಲದಾಸರು, ಪುರಂದರದಾಸರು, ಕನಕದಾಸರು, ಅಭಿನವ ವಿಠ್ಠಲದಾಸರು ಮುಂತಾದ ಮಹನೀಯರಿಂದ ದಾಸ ಪರಂಪರೆ ಬೆಳೆದು ಬಂದಿತು ಎಂದರು.
98 ವರ್ಷಗಳ ತುಂಬು ಜೀವನ ನಡೆಸಿದ ಕನಕದಾಸರು ದಾಸ ಶ್ರೇಷ್ಠರಾಗಿದ್ದರು. ದಾಸ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದ್ದು ಕರ್ನಾಟಕ ಸಂಗೀತಕ್ಕೆ ಇವರು ನೀಡಿದ ಕಾಣಿಕೆಯನ್ನು ಕೀರ್ತನೆಗಳಲ್ಲಿ ಕಾಣಬಹುದು ಎಂದರು.
ಈಗಿನ ಕಾಲಕ್ಕೂ ಪ್ರಸ್ತುತ: ವ್ಯಾಸರಾಯರ ನೇತೃತ್ವದಲ್ಲಿ ವ್ಯಾಸಕೂಟ ಹಾಗೂ ದಾಸಕೂಟದ ವೇದಿಕೆಗಳು ಅನುಷ್ಠಾನಕ್ಕೆ ಬಂದು ವ್ಯಾಸ ಸಾಹಿತ್ಯ ಮತ್ತು ದಾಸ ಸಾಹಿತ್ಯ ರಚನೆಯಾದವು. ಈ ಎರಡು ಕೂಟಗಳ ನಡುವೆ ಆಗಾಗ್ಗೆ ಸಾಂಸ್ಕೃತಿಕ ಘರ್ಷಣೆಯಾದಾಗ ಎರಡನ್ನೂ ಸಮನ್ವಯಗೊಳಿಸಿ ವ್ಯಾಸರಾಯರು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕನಕದಾಸರು ದಾಸಕೂಟದ ದಳವಾಯಂತೆ ನಡೆಸಿದರು. ಕನಕದಾಸರು ಜಾನಪದೀಯ ಶಿಸ್ತುಳ್ಳ ದಾಟಿಯಲ್ಲಿ ಕೀರ್ತನೆಗಳನ್ನು ರಚಿಸಿ ಅದ್ಭುತ ಕವಿ ಎನಿಸಿಕೊಂಡರು. ಕನಕರ ಕೀರ್ತನೆಗಳಲ್ಲಿ ಹಾಗೂ ಸಾಹಿತ್ಯ ಕೃತಿಗಳಲ್ಲಿ ಕಾಣುವಂತಹ ಚಿಂತನೆಗಳು ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಅಧ್ಯಕ್ಷತೆಯನ್ನು ಚಿ.ನ. ಏಕೇಶ್ ವ ಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್, ನಗರ ಕಸಾಪ ಅಧ್ಯಕ್ಷೆ ಎಂ.ಸಿ. ಲಲಿತಾ ಇದ್ದರು. ಪ್ರೊ. ಶಶಿಕುಮಾರ್, ಕಾಂತಪ್ಪ, ಅಕ್ಕಮ್ಮ, ಸಿರಿವರ ಶಿವರಾಮಯ್ಯ ಕನಕದಾಸರ ಕೀರ್ತನೆಗಳನ್ನು ಹಾಡಿದರು. ಹರಿಕಥಾ ವಿದ್ವಾನ್ ಶಂಕರಯ್ಯ ಪ್ರಾರ್ಥಿಸಿದರು. ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿ ನಿರೂಪಿಸಿದರು. ಕಂಟಲಗೆರೆ ಸಣ್ಣಹೊನ್ನಯ್ಯ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

