ಅದ್ಧೂರಿ ಕರಿಯಮ್ಮದೇವಿ ಮಡೇ ಉತ್ಸವ
ತಿಪಟೂರು: ತಾಲೂಕಿನ ಹಾಲ್ಕುರಿಕೆ ಗ್ರಾಮದ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಸಂಪ್ರದಾಯದಂತೆ ನಡೆಯುವ ಕಾರ್ಯಕ್ರಮದಲ್ಲಿ ಮದುವಣಗಿತ್ತಿ ಶಾಸ್ತ್ರ ನಂತರ ಗ್ರಾಮದೇವತೆ ಕೆಂಪಮ್ಮದೇವಿ ಮತ್ತು ಪ್ಲೇಗಿನಮ್ಮ ದೇವಿ, ತಮ್ಮಡಿಹಳ್ಳಿ ದುರ್ಗಮ್ಮದೇವಿ, ಹುಲೀಹಳ್ಳಿ ಪಿರಿಯಾಪಟ್ಟಣದಮ್ಮ ದೇವಿಯವರ ಆಗಮನದೊಂದಿಗೆ ಗಂಗಾಸ್ನಾನ ಜರುಗಿತು. ಬೆಳಗ್ಗೆ ಚಿತ್ರಲಿಂಗೇಶ್ವರ ಸ್ವಾಮಿಗೆ ನೂರೊಂದೆಡೆ ಸೇವೆ ನಂತರ ಕರಿಯಮ್ಮದೇವಿ ಮಡೇ ಉತ್ಸವವನ್ನು ಮುತೈದೆಯರು ಆರತಿಯೊಂದಿಗೆ ಆಚರಿಸಲಾಯಿತು.
ಮಕ್ಕಳ ಕುತೂಹಲವನ್ನು ಅರಳಿಸಬೇಕು
ತುಮಕೂರು: ಮಕ್ಕಳ ಸಾಹಿತ್ಯ ಮಕ್ಕಳ ಕುತೂಹಲವನ್ನು ಅರಳಿಸುವಂತಿರಬೇಕು ಎಂದು ಸಮಾಜ ಸೇವಕಿ ಸುನಿತಾಮೂರ್ತಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಆಯೋಜಿಸಲಾಗಿದ್ದ ಪದ್ಮಾ ಕೃಷ್ಣಮೂರ್ತಿಅವರು ರಚಿಸಿರುವ ಡಾ. ಕವಿತಾಕೃಷ್ಣ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವಂತೇ ಕೃತಿಗಳು ರಚನೆಯಾಗಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂದಿರಾಬಾಯಿ ಅವರು ಮಕ್ಕಳ ಸಾಹಿತ್ಯ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಅಸಡ್ಡೆ ಮಾಡಬಾರದು. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಸ್ನೇಹದಿಂದ ವರ್ತಿಸಬೇಕು ಎಂದರು.
ಪ್ರಕಾಶಕ ಸತೀಶ್ ಹೆಬ್ಬಾಕ ಮಾತನಾಡಿ ಹಿರಿಯ ಸಾಹಿತಿಗಳ ಪರಿಚಯ ಮುಂದಿನ ಪೀಳಿಗೆಗೂ ತಿಳಿಯಬೇಕು. ಪದ್ಮಾ ಅವರಿಂದ ಇನ್ನೂ ಹೆಚ್ಚಿನ ಮಕ್ಕಳ ಸಾಹಿತ್ಯ ಕೃತಿ ಹೊರಬರಲಿ ಎಂದು ಆಶಿಸಿದರು.
ಮತ್ತೊಬ್ಬ ಅತಿಥಿ ಜಿ.ಕೆ. ಕುಲಕರ್ಣಿ ಮಾತನಾಡಿ ಅಮೆರಿಕದ ಪ್ಲೋರಿಡಾ ವಿವಿ ಯಿಂದ ಗೌರವ ಡಾಕ್ಟರೇಟ್ ಪಡೆದ ಈ ಸಂದರ್ಭದಲ್ಲಿ ಪದ್ಮಾ ಅವರು ಡಾ. ಕವಿತಾಕೃಷ್ಣ ಪುಸ್ತಕ ಬರೆದು ಒಳ್ಳೆ ಕೆಲಸ ಮಾಡಿದ್ದಾರೆ. ಮಕ್ಕಳ ಸಾಹಿತ್ಯ ವಿಪುಲವಾಗಿ ಹೊರಬರಬೇಕೆಂದರು.
ಲೇಖಕಿ ಸುಮಾ ಹರ್ಷ ಮಾತನಾಡಿ ಕವಿತಾಕೃಷ್ಣರು ಶ್ರೇಷ್ಠ ಮಕ್ಕಳ ಸಾಹಿತಿಯೂ ಹೌದು. ಅವರು ಮಕ್ಕಳಿಗೋಸ್ಕರ ಕೇವಲ ಪದ್ಯಗಳನ್ನಲ್ಲದೇ ನಾಟಕಗಳನ್ನು, ಏಕಪಾತ್ರಾಭಿನಯವನ್ನು ರಚಿಸಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ಕವಿತಾಕೃಷ್ಣ ಅವರು ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಇರುತ್ತದೆ. ನಾವು ಕಾಲಧರ್ಮಕ್ಕೆ ಸ್ಪಂದಿಸಿ ಮಕ್ಕಳ ಮನೋಭಿಲಾಷೆಗೆ ತಕ್ಕಂತೆ ಸಾಹಿತ್ಯ ರಚಿಸಬೇಕು. ವೈಜ್ಞಾನಿಕ ತಳಹದಿಯ ಮೇಲಿನ ಸಾಹಿತ್ಯದ ಅಗತ್ಯ ಕೂಡ ಇದೆ ಎಂದು ಅಭಿಪ್ರಾಯಪಟ್ಟರು.
ನಾಗರಾಜ್ ಯಾದವ್, ಬಾ.ಹ. ರಮಾಕುಮಾರಿ, ಕಲಾಶ್ರೀ, ಕಮಲಾ ಬಡ್ಡಿಹಳ್ಳಿ, ಪದ್ಮಾಕೃಷ್ಣಮೂರ್ತಿ, ನಾಗರತ್ನಕೃಷ್ಣ, ಶಾಲಿನಿ, ಗಾಯಕ ಸವಣೂರ್, ಗೌಡನಕಟ್ಟೆ ತಿಮ್ಮಯ್ಯ, ಎಂ.ಡಿ. ಶ್ರೀನಿವಾಸ್, ಚೆನ್ನಬಸಯ್ಯ, ಡಾ. ಭರತರಾಜ್, ಗಣೇಶ್, ದೊಗ್ಗನಹಳ್ಳಿ, ಮಹಾಲಕ್ಷ್ಮೀ, ಉಮಾಶರ್ಮ ಮುಂತಾದವರು ಹಾಜರಿದ್ದರು. ಪಾವಗಡ ಸಣ್ಣರಂಗಮ್ಮ ಪ್ರಾರ್ಥಿಸಿದರು. ಉಮಾಶರ್ಮ ಸ್ವಾಗತಿಸಿದರು. ಉಷಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

