ಅನ್ನ, ಅಕ್ಷರ ನೀಡುತ್ತಿರುವ ಸಿದ್ಧಗಂಗಾಶ್ರೀ
ತುಮಕೂರು: ಅನ್ನ ಮತ್ತು ಅಕ್ಷರವನ್ನು ಯಾವುದೇ ಜಾತಿಭೇದವಿಲ್ಲದೆ ನಾಡಿನ ಜನತೆಗೆ ನೀಡುತ್ತಿರುವ ಸ್ವಾಮೀಜಿಯ ಜೀವನ ಎಲ್ಲ ಮಠ ಮಾನ್ಯಗಳಿಗೆ ಸಾರ್ವಕಾಲಿಕ ಮಾರ್ಗದರ್ಶಿಯಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಡಿ.ಎನ್. ಯೋಗೀಶ್ ನುಡಿದರು.
ಅವರು ಹೆಗ್ಗೆರೆ ವೀರಶೈವ ಸಮಾಜದವರು ಹೆಗ್ಗೆರೆಯ ತಮ್ಮ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿಯವರ 107 ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
1930 ರಲ್ಲಿ ವಿರಕ್ತಾಶ್ರಮ ದೀಕ್ಷೆಯನ್ನು ಪಡೆದರೂ 1941 ರಲ್ಲಿ ಮಠದ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂದು ಶೂನ್ಯ ಸ್ಥಿತಿಯಲ್ಲಿದ್ದ ಮಠವನ್ನು ಗಗನದೆತ್ತರಕ್ಕೆ ಏರಿಸಿ ಸುತ್ತುಕಟ್ಟು ಸಂಸ್ಕೃತಿಯ ಮೂಲಕ ಹೊಸ ಪರಂಪರೆಯನ್ನೇ ಸೃಷ್ಟಿಸಿದ ಮಹಾಪುರುಷ ಡಾ.ಶಿವಕುಮಾರ ಸ್ವಾಮಿಗಳು ಈ ಜಗತ್ತು ಕಂಡ ವಿಸ್ಮಯ ಎಂದರು.
ಸದಾ ಚೈತನ್ಯ ಚಿಲುಮೆಯಾಗಿರುವ ಶ್ರೀಗಳು ಮೂರು ಶತಮಾನಗಳನ್ನು ಕಂಡು ತಮ್ಮ 107ರ ವಯಸ್ಸಿನಲ್ಲೂ ತಮ್ಮ ಕಾಯಕದ ಮೂಲಕ ಗಮನ ಸೆಳೆಯುತ್ತಾ ಕಾಯಕ ಮಾಡದ ವ್ಯಕ್ತಿಗೆ ಫಲ ಅನುಭವಿಸುವ ಹಕ್ಕಿಲ್ಲ ಎಂದು ಪ್ರತಿಪಾದಿಸುತ್ತಾರೆ. ಇವರು ಬಸವಣ್ಣನ ಜಾತ್ಯತೀತೆಯ ಆಶಯಗಳ ಪರಿಪಾಲಕರಾಗಿದ್ದು ಬಸವಣ್ಣ ಮತ್ತು ತೋಂಟದ ಸಿದ್ದಲಿಂಗೇಶ್ವರರ ಗುಣಗಳನ್ನು ಮೈಗೂಡಿಸಿಕೊಂಡ ಮಿತಹಾರಿ ಮತ್ತು ಕಠಿಣ ಪರಿಶ್ರಮಿ ಸಿದ್ಧಗಂಗೆಯ ಸಿದ್ದರು ಡಾ.ಶಿವಕುಮಾರ ಸ್ವಾಮಿಗಳು ಎಂದು ಬಣ್ಣಿಸಿದರು.
ಕನ್ನಡಕವಿಲ್ಲದೇ ಓದುವ ಶ್ರೀ: ಕಾರ್ಯಕ್ರಮ ಉದ್ಘಾಟಿಸಿದ ಡಿ.ರಾಮಯ್ಯನವರು ಭಕ್ತರ ಪಾಲಿಗೆ ನಡೆದಾಡುವ ದೇವರೇ ಆಗಿರುವ ಶ್ರೀಗಳು ಇಂದಿಗೂ 107 ರ ಇಳಿವಯಸ್ಸಿನಲ್ಲಿಯೂ ಕೂಡಾ ಕನ್ನಡಕವಿಲ್ಲದೆ ಓದುವ ಶ್ರೇಷ್ಠ ಗುರುವರೇಣ್ಯ ತ್ರಿಕಾಲ ಶಿವಪೂಜಾ ನಿರತರು ಎಂದರು.
ಮಠದ ಹಳೆಯ ವಿದ್ಯಾರ್ಥಿ ಎ.ಪಿ. ಚನ್ನಬಸವಯ್ಯನವರು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ಮಠದಲ್ಲಿನ ಕಟ್ಟಡಗಳ ಪ್ರತಿಯೊಂದು ಕಲ್ಲೂ ಶ್ರೀಗಳಿಂದ ಸ್ಪರ್ಷಗೊಂಡಿದ್ದು ವಿದ್ಯಾರ್ಥಿಗಳ ದಾಸೋಹಕ್ಕೆ ಪ್ರತಿ ನಿತ್ಯ ತುಮಕೂರಿಗೆ ಶ್ರೀಗಳು ನಡೆದುಕೊಂಡು ಬಂದು ಮಂಡಿಪೇಟೆಯಲ್ಲಿ ಸಾತ್ವಿಕ ಭಿಕ್ಷೆಯ ಮೂಲಕ ದವಸ ಧಾನ್ಯಗಳನ್ನು ಸಂಗ್ರಹಿಸಿ ತಲೆಯಮೇಲೆ ಹೊತ್ತು ಹೋಗುತ್ತಿದ್ದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಎಂದರು.
ದಾಸೋಹವೇ ಉಸಿರು: ಅಧ್ಯಕ್ಷತೆ ವಹಿಸಿದ್ದ ಹೆಗ್ಗೆರೆ ವೀರಶೈವ ಸಮಾಜದ ಅಧ್ಯಕ್ಷ ಜಿ.ಎನ್. ಸದಾಶಿವಯ್ಯನವರು ದಾಸೋಹವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ಶ್ರೀಗಳು ಸರ್ವಧರ್ಮಿಯರಿಗೂ ಪ್ರಸಾದ ವಿನಿಯೋಗ ಮಾಡುತ್ತಿರುವುದು ಮನುಕುಲವೆಲ್ಲ ಒಂದೇ ಎಂಬುದನ್ನು ನೆನೆಪಿಸುತ್ತದೆ ಎಂದರು.
ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಕಾರ್ಯದರ್ಶಿ ಚಂದ್ರಶೇಖರ್, ಚಿಕ್ಕ ಬೆಳ್ಳಾವಿ ಶಿವಕುಮಾರ್, ಸೋಮಶೇಖರ್, ಗುರುಸಿದ್ದಪ್ಪ ಮೊದಲಾದವರಿದ್ದರು. ಹೆಗ್ಗೆರೆ ವೀರಶೈವ ಸಮಾಜದ ಕಾರ್ಯದರ್ಶಿ ಹೆಚ್.ಎನ್. ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ.ಸಿ. ವೀರಭದ್ರಸ್ವಾಮಿ ಸ್ವಾಗತಿಸಿದರು. ರುದ್ರಮೂರ್ತಿ ಪ್ರಾರ್ಥಿಸಿದರು. ಶಿವನಂಜಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

