ಬಿಜೆಪಿ- ಕಾಂಗ್ರೆಸ್ ನೇರ ಹಣಾಹಣಿ
ಕ.ಪ್ರ.ವಾರ್ತೆ ಕುಣಿಗಲ್ ಏ.7
ಕುಣಿಗಲ್ ತಾಲೂಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಾದ್ಯಂತ ಬಿಜೆಪಿ- ಕಾಂಗ್ರೆಸ್ ನಡುವೆ ಮಾತ್ರ ನೇರ ಹಣಾಹಣಿ ಇದ್ದು, ಜೆಡಿಎಸ್ ಲೆಕ್ಕಕ್ಕೆ ಇಲ್ಲವೆಂದು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ತಿಳಿಸಿದರು.
ಸೋಮವಾರ, ಪಕ್ಷದ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಕುಣಿಗಲ್ ವಿಧಾನಸಭಾ ಕ್ಷೇತ್ರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಗಳಲ್ಲಿ ಜೆಡಿಎಸ್ ಗೌಣವಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಅಭ್ಯರ್ಥಿಗಳು ಸ್ಪರ್ಧಿಸಿದ್ದಲ್ಲಿ ಜೆಡಿಎಸ್ ಸ್ಪರ್ಧೆ ಪರಿಗಣಿಸಬಹುದಿತ್ತು.
ಆದರೆ ಈಗ ಈ ಕ್ಷೇತ್ರದಲ್ಲಿ ಜೆಡಿಎಸ ಲೆಕ್ಕಕ್ಕಿಲ್ಲ, ಸ್ಥಳೀಯವಾಗಿ ಕುಣಿಗಲ್ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರ ಅಸಮರ್ಪಕ ಕಾರ್ಯವೈಖರಿಯಿಂದ ಜೆಡಿಎಸ್ನವರೂ ಸೇರಿದಂತೆ ಬಹುತೇಕ ಕ್ಷೇತ್ರದ ಜನತೆ ಬಿಜೆಪಿ ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದರು.
ಶಾಸಕ ಡಿ.ನಾಗರಾಜಯ್ಯ ಅಧಿಕಾರಕ್ಕೆ ಬರುವ ಮುನ್ನ ಹೇಮಾವತಿ ನೀರು ಹರಿಸಲು ಹಲವು ಹೋರಾಟಗಳನ್ನು ಮಾಡಿ, ಈಗ ಅಧಿಕಾರ ಸಿಕ್ಕನಂತರ ಹೋರಾಟ ಮನೋಭಾವ ತೊರೆದು ನಿಷ್ಕ್ರಿಯರಾಗಿರುವುದರಿಂದ ಸಮಸ್ಯೆಗಳ ಸರಮಾಲೆ ಹೆಚಿದ್ದು, ಪುರಸಭೆ, ತಾಲೂಕು ಪಂಚಾಯಿತಿ ಸೇರಿದಂತೆ ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಕಾರಣ ಜನತೆ ಬೇಸತ್ತಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರ ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ಬೇಸಿಗೆಯಲ್ಲಿ ದಿನಕ್ಕೆ ಆರುಗಂಟೆ ಮೂರುಫೇಸ್ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರಗಾಲವಿದ್ದರೂ ಗ್ರಾಮಾಂತರ ಪ್ರದೇಶದಲ್ಲಿ ಆರುಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಕೇವಲ ಪುಕ್ಕಟೆ ಪ್ರಚಾರದಲ್ಲೆ ಕಾಲಕಳೆದಿದ್ದರಿಂದ ಜನತೆ ರೋಸಿಹೋಗಿದ್ದಾರೆ.
ಬಿಜೆಪಿಗೆ ಬೆಂಬಲ: ಕೊಬ್ರಾ ಪೋಸ್ಟ್ನ ಪ್ರಹಸನ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವೆಂದು ರಾಜ್ಯ, ರಾಷ್ಟ್ರದ ಜನತೆಗೆ ಮನವರಿಕೆಯಾಗಿದ್ದು, ಇದರಿಂದ ಪಕ್ಷದ ವರ್ಚಸ್ಸಿಗೆ ಯಾವುದೇ ಧಕ್ಕೆಇಲ್ಲ, ಮುಸ್ಲಿಂ ಮತದಾರರನ್ನು ಓಲೈಸಲು ಕಾಂಗ್ರೆಸ್ನ ಯಾವುದೇ ತಂತ್ರ ಫಲಿಸುವುದಿಲ್ಲ, ಅವರೂ ಜಾಗೃತರಾಗಿದ್ದು ರಾಜ್ಯ ಮತ್ತು ರಾಷ್ಟ್ರದಲ್ಲಿನ ಹಲವು ನೀರಾವರಿ ಸಮಸ್ಯೆ ಬಗೆಹರಿಸಲು ಪ್ರಮುಖ ನದಿಗಳ ಜೋಡಣೆಗಾಗಿ ಮತ್ತು ಕೇಂದ್ರದಲ್ಲಿ ಬದಲಾವಣೆ ಬಯಸಿರುವ ಜನತೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ.
ಇದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಅಗುವ ಸಾಧ್ಯತೆ ದಟ್ಟವಾಗಿದೆ ಎಂದರು. ಈಬಾರಿ ಕುಣಿಗಲ್ ತಾಲೂಕಿನಲ್ಲಿ ಅತಿಹೆಚ್ಚು ಮತಗಳನ್ನು ಬಿಜೆಪಿಗೆ ಜನತೆ ನೀಡುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಬಿಜೆಪಿ ವಶವಾಗುವುದರಲ್ಲಿ ಅನುಮಾನವಿಲ್ಲ. ಅಭ್ಯರ್ಥಿ ಮುನಿರಾಜುಗೌಡರ ಪರವಾಗಿ ಮತಯಾಚಿಸಲು ಬಿಜೆಪಿ ರಾಷ್ಟ್ರೀಯ ನಾಯಕರಾದ ಎಲ್.ಕೆ.ಆಡ್ವಾಣಿ, ಬಿಜೆಪಿ ರಾಜ್ಯಾಧ್ಯಕ್ಷ ರಾಜನಾಥಸಿಂಗ್ ಸೇರಿದಂತೆ ಮಾಜಿ ಸಿಎಂಗಳಾದ ಸದಾನಂದಗೌಡ, ಯಡಿಯೂರಪ್ಪ ಇತರೆ ಗಣ್ಯರು ಇದೇ 9ರ ಗುರುವಾರ ಸಂಜೆ ಪಟ್ಟಣದ ಜಿಕೆಬಿಎಂಎಸ್ ಕ್ರೀಡಾಂಗಣದಲ್ಲಿ ಭಾರಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆಂದರು. ಮುಖಂಡರಾದ ರಂಗಸ್ವಾಮಿ, ಜಯರಾಜ್, ಬಲರಾಮ, ರೇಣುಕಪ್ಪ, ನರಸಿಂಹ,ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

