ಕುಡಿವ ನೀರಿಗೆ ಕೋಟಿ ಮಂಜೂರು
ಮಧುಗಿರಿ: ಬರ ಪರಿಸ್ಥಿತಿ ನಿಭಾಯಿಸಲು ತುರ್ತು ಕುಡಿವ ನೀರು ಯೋಜನೆಯಡಿ ಮಧುಗಿರಿ ತಾಲೂಕಿಗೆ 1 ಕೋಟಿ 86 ಲಕ್ಷ ರು.ಮಂಜೂರ ಮಾಡಲಾಗಿದೆ ಎಂದು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿದಂರಾಜು ತಿಳಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ.ಪಂ. ಪಿಡಿಓ, ಕಾರ್ಯದರ್ಶಿಗಳು ಹಾಗೂ ಎಂಜಿನಿಯರಗಳ ತುರ್ತು ಸಭೆ ಕರೆದು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.
ಮಧುಗಿರಿ ತಾಲೂಕಿನ 62 ಗ್ರಾಮಗಳಲ್ಲಿ ಕುಡಿವ ನೀರಿಗೆ ತೊಂದರೆಯಿದ್ದು ನೀರಿನ ಸಮಸ್ಯೆ ನೀಗಿಸಲು ತಕ್ಷಣ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವ ಜೊತೆಗೆ ಹೊಸ ಕೊಳವೆ ಬಾವಿ, ಬೆಸ್ಕಾಂಗೆ ಠೇವಣಿ ಹಾಗೂ ಪಂಪು-ಮೋಟಾರ್ ಖರೀದಿಸಲು ಈ ಹಣ ಬಳಸಬೇಕು ಎಂದರು.
ಮಾಹಿತಿ ನೀಡಿ: ಗ್ರಾ. ಪಂ. ಮಟ್ಟದಲ್ಲಿ ವಿದ್ಯುತ್ ಅಭಾವದಿಂದಾಗಿ ಪ್ರತಿ ಸೋಮವಾರ ನೀರುಗಂಟಿಗಳ ಸಭೆ ಕರೆದು ನಾಗರಿಕರಿಗೆ ನೀರು ಬಿಡುವ ವೇಳೆ ಪ್ರಚುರ ಪಡಿಸುವ ಜತೆಗೆ ಕುಡಿವ ನೀರಿನ ಸಮಸ್ಯೆಗಳ ಬಗ್ಗೆ ಕೂಲಂಕಶವಾಗಿ ಮಾಹಿತಿ ನೀಡಬೇಕು. ಅದೇ ರೀತಿ ಪ್ರತಿ ಶನಿವಾರ ತಹಸೀಲ್ದಾರ್, ಜಿ.ಪಂ.ಎಇಇ ಹಾಗೂ
ತಾ.ಪಂ.ಇಓ ಸಭೆ ನಡೆಸಿ ಕುಡಿವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಎಲ್ಲೂ ಕೂಡ ಕುಡಿವ ನೀರಿಗೆ ತೊಂದರೆ ಆಗದಂತೆ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಗ್ರಾಮದಿಂದ ಆಗಲಿ ನೀರಿನ ಬವಣೆ ಬಗ್ಗೆ ತಿಳಿದ ಕೂಡಲೇ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ತಹಸೀಲ್ದಾರ್ ಖಾತೆಗೆ 10ಲಕ್ಷ ರು.ಮೀಸಲಿಟ್ಟಿದೆ ಎಂದರು.
ತಾಕೀತು: ತಾಲೂಕಿನ ಎಲ್ಲ ಗ್ರಾ,ಪಂ.ವ್ಯಾಪ್ತಿಯಲ್ಲಿ ಬರುವ ಕೊಳವೇ ಬಾವಿಗಳ ನಿರ್ವಹಣೆಗಾಗಿ ತಲಾ 1 ಸಾವಿರ ರು.ಮೀಸಲಿಟ್ಟಿದ್ದು, ತೊಂದರೆ ಕಂಡು ಬಂದಾಗ ಈ ಹಣ ತೆಗೆದು ಕೊಳವೇ ಬಾವಿಗಳ ರಿಪೇರಿ ಮಾಡಿಸಿ ಸಮರ್ಥವಾಗಿ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಹಾಯವಾಣಿ: ಎಲ್ಲೇ ಆಗಲಿ ನೀರಿನ ಸಮಸ್ಯ ಕಂಡು ಬಂದಲ್ಲಿ ತಹಸೀಲ್ದಾರ್, ಜಿ.ಪಂ.ಎಇಇ ಹಾಗೂ ತಾ.ಪಂ.ಇಓ ಕಚೇರಿಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ದೂರವಾಣಿ ಮೂಲಕ ಕರೆ ಮಾಡಿ ಸಮಸ್ಯೆ ದಾಖಲು ಮಾಡುವ ವ್ಯವಸ್ಥೆ ಕಲ್ಪಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಗೋವಿಂದರಾಜು ಸಲಹೆ ನೀಡಿದರು.
ಗ್ರಾ.ಪಂ.ಪಿಡಿಓ, ಕಾರ್ಯದರ್ಶಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ ಮಾಡುವ ಮೂಲಕ ತಮಗೆ ಬರುವ ಗ್ರಾ.ಪಂ.ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮುತುವರ್ಜಿ ವಹಿಸಬೇಕು. ಅಧಿಕಾರಿಗಳು
ತಾತ್ಸರ ಮನೋಭಾವ ಅನುಸರಿಸಿದ್ದೇ ಆದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಗೋವಿಂದರಾಜು ಎಚ್ಚರಿಕೆ ನೀಡಿದರು.
ಗೊಂದಿಹಳ್ಳಿ ಗ್ರಾ.ಪಂ.ಕಾರ್ಯದರ್ಶಿ ಮಲ್ಲೇಶಚಾರ್ ಪಂಚಾಯಿತಿಗೆ ಸತತ ಗೈರು ಹಾಜರಾಗಿದ್ದು, ಸಭೆಗೆ ಹಾಜರಾಗದ ಕಾರಣ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡುವುದಾಗಿ ಸಿಇಓ ಗೋವಿಂದರಾಜು ತಿಳಿಸಿದರು. ಸಭೆಯಲ್ಲಿ ಜಿ.ಪಂ.ಎಇಇ ಕೃಷ್ಣಮೂರ್ತಿ,ತಾ.ಪಂ.ಇಓ ಮಹಾಲಿಂಗಯ್ಯ ಮತ್ತು ತಾಲೂಕು ಮಟ್ಟದ ಎಲ್ಲ ಗ್ರಾ.ಪಂ.ಪಿಡಿಓ,ಕಾರ್ಯದರ್ಶಿಗಳು ಹಾಗೂ ಎಂಜಿನಿಯರಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

