ತುಮಕೂರು

ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ

Published On :

ತುಮಕೂರು: ನರೇಂದ್ರ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ರಾಜ್ಯದ ಮಾಜಿ ನಿರ್ದೇಶಕ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್  ಮುಖಂಡ ಉಗ್ರಪ್ಪ ಅವರು ತಮ್ಮ ವಿದ್ಯಾರ್ಥಿ ಜೀವನವನ್ನು ಸಂಘಪರಿವಾರದಲ್ಲಿ ಮುಗಿಸಿ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಮತ್ತು ಕಾಂಗ್ರೆಸ್ಸಿನ ಕೃಪಾಕಟಾಕ್ಷಕ್ಕಾಗಿ ಯಾರನ್ನು ಬೇಕಾದರೂ ತೆಗಳುವ ಸಂಸ್ಕಾರವನ್ನು ಮೈಗೂಡಿಸಿಕೊಂಡಿರುವವರು. ಅವರದು ಉಂಡ ಮನೆಗೆ ದ್ರೋಹ ಬಗೆಯುವ ಸಂಸ್ಕೃತಿ ಎಂದು ತಿಳಿಸಿದರು. ಬಿಜೆಪಿ ಮತ್ತು ನರೇಂದ್ರ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಆ ಪಕ್ಷದ ಉಗ್ರಪ್ಪ ನವರಿಗೆ ಇಲ್ಲ ಎಂದು ಪ್ರಭಾಕರ ತಿಳಿಸಿದರು ನಾವು ಮಾತ್ರ ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳ ತರಹ ಪೋಜು ನೀಡುವ ಅವರ ಹುಳುಕನ್ನು ಮುಚ್ಚಿಕೊಳ್ಳದೆ ಇನ್ನೊಬ್ಬರ ಬಗ್ಗೆ ಮಾತನಾಡುವುದು ಎಷ್ಷು ಸಮಂಜಸ ಎನ್ನುವುದನ್ನು ಉಗ್ರಪ್ಪ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಿಪಿಐ ಅಭ್ಯರ್ಥಿಚಿನ್ನಪ್ಪಮತಯಾಚನೆ ಇಂದು
ತುಮಕೂರು: ಭಾರತ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ವಿ. ಚಿನ್ನಪ್ಪ ಅವರು ಏ.13 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಾದಯಾತ್ರೆ ಮುಖಾಂತರ ಮತ ಯಾಚನೆ ಮಾಡಲಿದ್ದಾರೆ.
ಭಾನುವಾರ ಬೆಳಿಗ್ಗೆ 10 ಗಂಟೆಗೆ ಟೌನ್‌ಹಾಲ್ ಮುಖಾಂತರ ಎಂ.ಜಿ. ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಮಾರ್ಕೆಟ್, ಗುಬ್ಬಿ ಗೇಟ್, ನಂತರ ಟೌನ್‌ಹಾಲ್, ಬಿ.ಎಚ್. ರಸ್ತೆ, ಬಾರ್ ಲೈನ್ ರಸ್ತೆ, ಕೋತಿ ತೋಪು, ಗೌರ್ನಮೆಂಟ್ ಕಾಲೇಜು, ಎಸ್‌ಐಟಿ, ಸೋಮೇಶ್ವರ ಪುರಂ ಮುಖಾಂತರ ಮತಯಾಚನೆ ಮಾಡಲಿದ್ದಾರೆ.
ಪಕ್ಷದ ಅಭಿಮಾನಿಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ವಿ. ಚಿನ್ನಪ್ಪ ಅವರನ್ನು ಬೆಂಬಲಿಸಬೇಕೆಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಗಿರೀಶ್ ಅವರು ತಿಳಿಸಿದ್ದಾರೆ.

ಬಿಜೆಪಿ ರೋಡ್ ಷೋ ಕಾರ್ಯಕ್ರಮ ನಾಳೆ
ತುಮಕೂರು: ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರು ಏ. 14 ರ ಸೋಮವಾರದಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಟೌನ್ ಹಾಲ್ ಸರ್ಕಲ್‌ನಿಂದ ಎಂ.ಜಿ. ರಸ್ತೆ, ಗಂಗೋತ್ರಿ ರಸ್ತೆ, ಬಿ.ಹೆಚ್. ರಸ್ತೆ ಮೂಲಕವಾಗಿ ಭದ್ರಮ್ಮ ಕಲ್ಯಾಣ ಮಂಟಪದವರಗೆ ರೋಡ್ ಶೋ ನಡೆಸಲಿದ್ದಾರೆ. ತುಮಕೂರು ನಗರದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಹಾಗೂ ನರೇಂದ್ರ ಮೋದಿ, ಬಿಎಸ್‌ವೈ, ಜಿ.ಎಸ್.ಬಿ ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಪ್ರಚಾರವನ್ನು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಪರ ಮಾಡಲಾಗಿದೆ. ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ. ಇನ್ನು ತುಮಕೂರು 14 ರಂದು ಪಾದಯಾತ್ರೆ ನಡೆಸಲಾಗುವುದು. ಈಗಾಗಲೇ ಬಸವರಾಜು, ಮೋದಿ, ಯಡಿಯೂರಪ್ಪ ಅಭಿಮಾನಿಗಳು ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ.

ಮತಪತ್ರಗಳ ಜೋಡಣೆ
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಇವಿಎಂ ಮತಯಂತ್ರಕ್ಕೆ ಮತಪತ್ರಗಳ ಜೋಡಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಸಹಾಯಕ ಚುನಾವಣಾಧಿಕಾರಿ ಇ. ಪ್ರಕಾಶ್, ತಹಸೀಲ್ದಾರ್ ಕಾಮಾಕ್ಷಮ್ಮ,ಪುರಸಭೆ ಮುಖ್ಯಾಧಿಕಾರಿ ಟಿ.ಆರ್. ವೆಂಕಟೇಶಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ  ಆನಂದ್, ಜೆಡಿಎಸ್ ಮುಖಂಡರಾದ ಸಿ.ಎಸ್.ನಟರಾಜ್  ಮುಂತಾದವರಿದ್ದರು.

ಅಂಬೇಡ್ಕರ್ ಜನ್ಮದಿನಾಚರಣೆ ನಾಳೆ
ತುಮಕೂರು: ಬಿ.ಆರ್. ಅಂಬೇಡ್ಕರ್ ಮತ್ತು ಬಾಬುಜಗಜೀವನರಾಂ ಅವರ ಜನ್ಮದಿನಾಚರಣೆ ಅಂಗವಾಗಿ ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘದ ವತಿಯಿಂದ ಏ.14 ರಂದು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರ ಪಕ್ಕ ಇರುವ  ರಂಗತಾಲೀಮು ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆ. ದೊರೈರಾಜ್ ನೆರವೇರಿಸುವರು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅವರು ಅಧ್ಯಕ್ಷತೆಯನ್ನು ವಹಿಸುವರು. ಕಾರ್ಯಕ್ರಮದಲ್ಲಿ ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ್ ದಾಸ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ. ನರಸಿಂಹಮೂರ್ತಿ, ಅಂಗನವಾಡಿ ನೌಕರರ ಸಂಘದ ಎಸ್.ಡಿ. ಪಾರ್ವತಮ್ಮ, ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಸಂಘದ ಶಂಕರಪ್ಪ, ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಖಜಾಂಚಿ ಸಿ. ವೆಂಕಟೇಶ್, ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಪ್ಪ, ಎನ್.ಕೆ. ಸುಬ್ರಮಣ್ಯ ಇತರರು ಭಾಗವಹಿಸುವರು.

ಪ್ರಚಾರ
ತುಮಕೂರಿನ 30ನೇ ವಾರ್ಡ್ ವಿಜಯನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ ಪರ ಜೆಡಿಎಸ್ ಮುಖಂಡರು ಪ್ರಚಾರ ನಡೆಸಿದರು. ಹೆಬ್ಬೂರು ಮೂರ್ತಿ, ವಿಶ್ವನಾಥ್ ಗೌಡ, ನಗರಾಧ್ಯಕ್ಷ ನರಸೇಗೌಡ, ಜೆಡಿಎಸ್ ವಕ್ತಾರ ಮಲ್ಲಿಕಾರ್ಜುನ್, ದಿನಕರ್ ಮತ್ತಿತರರು ಹಾಜರಿದ್ದರು.

ಕೇಂದ್ರ ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವದ ಪಾತ್ರ
ಶಿರಾ: ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ರಾಜ್ಯದಲ್ಲಿ ಜೆಡಿಎಸ್   ಹಲವಾರು ಸ್ಥಾನ ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಲಿದೆ.  ಚಿತ್ರದುರ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಸ್ಥಳಿಯರಾಗಿದ್ದು, ಕ್ಷೇತ್ರದ ಸಮಸ್ಯೆ ಬಗ್ಗೆ ಸಂಪೂರ್ಣಮಾಹಿತಿ ಇದ್ದು, ಈ ಜಿಲ್ಲೆಯ ಅಭಿವೃದ್ಧಿಗೆ ಈ ಬಾರಿ ಮತ ನೀಡಿ ಗೆಲ್ಲಿಸಬೇಕೆಂದು ಮಾಜಿ ಸಚಿವ ಬಿ.ಸತ್ಯನಾರಾಯಣ ಮನವಿ ಮಾಡಿದರು. ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದರು. ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದ್ದು, ಈ ಭಾರಿ ಜನರಿಂದ ತಿರಸ್ಕಾರ ಗೊಳ್ಳಲಿದೆ, ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ನಾಯಕರು ಸಹ ಭ್ರಷ್ಟಾಚಾರದಿಂದ ಜೈಲು ಸೇರಿದ್ದಾರೆ. ಈ ಎರಡು ರಾಷ್ಟ್ರೀಯ ಪಕ್ಷಗಳು  ಜನರ ವಿಶ್ವಾಸ ಕಳೆದು ಕೊಂಡಿದೆ ಎಂದರು.

ಮತಯಾಚನೆ
ಶಿರಾ ತಾಲೂಕಿನ  ಗೌಡಗೆರೆ ಹೋಬಳಿಯ ಮಾನಂಗಿ, ಲಕ್ಷ್ಮೀಸಾಗರ,ತಾವರೆಕೆರೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಚಿತ್ರದುರ್ಗ  ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಪರ ಮತಯಾಚಿಸಿದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಮಾಜಿ ಸಚಿವ ಬಿ.ಸತ್ಯನಾರಾಯಣ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ನಗರಸಭೆ ಸದಸ್ಯ ಆಂಜಿನಪ್ಪ ಇತರರು ಇದ್ದಾರೆ.

ಉದ್ಘಾಟನೆ
ಹುಳಿಯಾರಿನ ಮಾರುತಿ ಶಾಲೆಯಲ್ಲಿ ಪ್ರಾರಂಭಗೊಂಡ ಬೇಸಿಗೆ ಶಿಬಿರವನ್ನು ರೋಟರಿ ಕಾರ್ಯದರ್ಶಿ ಈ. ರವೀಶ್ ಉದ್ಘಾಟಿಸಿದರು. ಮುಖ್ಯಶಿಕ್ಷಕ ಹಾಗೂ ಇತರರಿದ್ದಾರೆ.

ಪಿಡಿಒ ಕರ್ತವ್ಯಕ್ಕೆ ಹಾಜರಾಗದೆ ತೊಂದರೆ: ಆರೋಪ
ಶಿರಾ: ಹಂದಿಕುಂಟೆ ಗ್ರಾ.ಪಂ. ಪಿಡಿಒ ಅವರು ಕರ್ತವ್ಯಕ್ಕೆ ಹಾಜರಾಗದೆ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದು ಸ್ಥಳೀಯ ಕರವೇ ಅಧ್ಯಕ್ಷ ದೇವರಾಜು ಆರೋಪಿಸಿದ್ದಾರೆ. ಸದರಿ ಪಿ.ಡಿ.ಓ. ಮಂಜಣ್ಣ ಅವರು ನಮ್ಮ ಗ್ರಾ.ಪಂ. ಗೆ ಬಂದು ಸುಮಾರು 2 ವರ್ಷ ಕಳೆದಿದ್ದು, ಈ ಎರಡು ವರ್ಷದಲ್ಲಿ ಕೆಲವೇ ಕಲವು ದಿನಗಳು ಮಾತ್ರ ಕಾರ್ಯ ನಿರ್ವಹಿಸಿದ್ದಾರೆ. ಮಿಕ್ಕ ದಿನಗಳಲ್ಲಿ ಆರೋಗ್ಯ ಸರಿ ಇಲ್ಲ, ಕೋರ್ಟಿದೆ, ಶಿರಾದಲ್ಲಿ ಮೀಟಿಂಗ್ ಇದೆ, ತುಮಕೂರಲ್ಲಿ ಮೀಟಿಂಗ್ ಇದೆ ಎಂದು ಹೇಳುತ್ತಾರೆ. ಪಂಚಾಯ್ತಿಗೆ ಬಂದರೂ ಒಂದು-ಎರಡು ಗಂಟೆ ಹೆಚ್ಚು ಕಾಲ ಇರುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಕರವೇ ಅಧ್ಯಕ್ಷ ದೇವರಾಜು ಆಗ್ರಹಿಸಿದ್ದಾರೆ.

ಮತದಾರರ ದಾರಿ ತಪ್ಪಿಸಬೇಡಿ: ಯದುನಂದನ
ತಿಪಟೂರು: ಮತದಾರರಿಗೆ ಇಲ್ಲಸಲ್ಲದ ಆಮಿಷಗಳನ್ನು ಹುಟ್ಟಿಸಿ ಮತಪಡೆಯುವುದು ಸರಿಯಲ್ಲ. ಅವರವರ ಪ್ರಣಾಳಿಕೆ ಮತ್ತು ಬೇಡಿಕೆಗಳನ್ನು ಜನರುಗಳಿಗೆ ತಿಳಿಸಿ ಮತಯಾಚನೆ ಮಾಡಬೇಕೆ ವಿನಃ ಮತದಾರರನ್ನು ತಪ್ಪುದಾರಿಗೆಳೆಯಬೇಡಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಲ್.ಪಿ. ಯದುನಂದನ ತಿಳಿಸಿದರು.
 ಪಟ್ಟಣದ ವಿವಿದ ಬಡಾವಣೆಗಳಲ್ಲಿ ಕಾಲ್ನಡಿಗೆಯ ಮೂಲಕ ಸಂಚರಿಸಿ ಮತಯಾಚನೆ ನಡೆಸಿ ಮಾತನಾಡಿದ ಅವರು ಯಾವುದೇ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮತ್ತ ಮತಗಳನ್ನು ಸೆಳೆಯಲು ಅಭ್ಯರ್ಥಿಗಳ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುವ ಜೊತೆಗೆ ಜಾತಿ-ಧರ್ಮಗಳ ಹೆಸರಿನಲ್ಲಿ ಮತದಾರರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈ ಕ್ಷೇತ್ರದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟು ಚುನಾವಣೆಯಲ್ಲಿ ನನ್ನ ಗುರುತಾದ ಫ್ಯಾನ್‌ಗೆ ತಮ್ಮ ಅಮೂಲ್ಯವಾದ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಅವರು ಮನವಿ ಮಾಡಿದರು. ಸಂಗೊಳ್ಳಿರಾಯಣ್ಣ ಸಂರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ರಾಜಶೇಖರ ಲಿಂಗದಹಳ್ಳಿ, ವಕೀಲರಾದ ಚನ್ನಕೇಶವ, ವೆಂಕಟೇಶ್ ಮತಯಾಚಿಸಿದರು.  

ಅಲಂಕಾರ
ಗುಬ್ಬಿ ಪಟ್ಟಣದ ಶ್ರೀಬಿದ್ದಾಂಜನೇಯಸ್ವಾಮಿಗೆ ಶ್ರೀರಾಮ ನವಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.  

ಸವಿತಾ ಸಮಾಜ ಪ.ಜಾತಿ, ಪಂಗಡಕ್ಕೆ ಸೇರಿಸಿ
ತಿಪಟೂರು: ರಾಜ್ಯದಲ್ಲಿಯೇ ಸವಿತಾ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅತಿ
ಹಿಂದುಳಿದಿರುವ ಸಮಾಜವಾಗಿದೆ. ಮಡಿವಾಳ, ಉಪ್ಪಾರ ಮತ್ತು ಬೆಸ್ತರ ಸಮಾಜಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಸಿದ್ದು, ಅದರಂತೆ  ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬೇಕೆಂದು ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ತಿಪಟೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಲೂಕು ಸವಿತಾ ಸಮಾಜದ ಪ್ರತಿನಿಧಿ ಟಿ.ಸಿ.ಗೋವಿಂದರಾಜು ಹಾಗೂ ಟಿ.ಎಂ.ವರದರಾಜು, ಎಸ್.ಕುಮಾರ್‌ಮನವಿ ಮಾಡಿದರು.

ದಸೂಡಿ: ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ
ಹುಳಿಯಾರು: ಹೋಬಳಿಯ ಇತಿಹಾಸ ಪ್ರಸಿದ್ಧ ದಸೂಡಿ ಗ್ರಾಮದ ಶ್ರೀ ಆಂಜನೇಯನಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರದಂದು ಅಪಾರ ಸಂಖ್ಯೆಯ ಭಕ್ತಾದಿಗಳ ಹರ್ಷೋದ್ಘಾರದೊಂದಿಗೆ ವೈಭವಯುತ  ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಜರುಗಿತು.
ಶನಿವಾರ ಬೆಳಿಗ್ಗೆಯಿಂದಲೇ  ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಸ್ವಾಮಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲಂಕೃತಗೊಂಡಿದ್ದ ಸ್ವಾಮಿಯನ್ನು 11.30ರ ವೇಳೆಗೆ ದೇಗುಲದಿಂದ  ಗೌಡಗೆರೆ ದುರ್ಗಮ್ಮ ದೇವಿಯೊಂದಿಗೆ ಸಕಲ ವಾದ್ಯಮೇಳಗಳೊಂದಿಗೆ ಕರೆತಂದು ಸ್ವಾಮಿಯನ್ನು ರಥದಲ್ಲಿ ಕುಳ್ಳಿರಿಸಿ, ರಥದ ಮುಂದಿನ ಬಾಳೆಕಂದನ್ನು ತುಂಡರಿಸುವ ಮೂಲಕ ಜೈಕಾರವನ್ನು ಹಾಕುತ್ತಾ ರಥವನ್ನು ಎಳೆಯಲಾಯಿತು. ಸುಡುವ ಬಿಸಿಲನ್ನು ಲೆಕ್ಕಿಸದೆ ಕೆಲ ಭಕ್ತರು ಸ್ವಾಮಿ ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿಭಾವ ಸಮರ್ಪಿಸಿದರೆ ಮತ್ತೆ ಕೆಲವರು ರಥಕ್ಕೆ ಬಾಳೆಹಣ್ಣುನ್ನು ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿಕೊಂಡರು.

ಮೆರವಣಿಗೆ
ಹುಳಿಯಾರು ಹೋಬಳಿ ಕೆಂಕೆರೆ ಕಾಳಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮ ಅವರನ್ನು ಹೂವಿನ ಮಂಟಪದಲ್ಲಿ ಮೆರವಣಿಗೆ ನಡೆಸಲಾಯಿತು.

ಮತ ಎಣಿಕೆ ನಂತರ ಬಿಜೆಪಿ  ಸಾಮರ್ಥ್ಯ ಗೊತ್ತಾಗುತ್ತೆ
ಕುಣಿಗಲ್: ಗುರುವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸಚಿವ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಅಭ್ಯರ್ಥಿ ನಮ್ಮ ಮುಂದೆ ಸರಿಸಾಟಿಯಲ್ಲ ಎಂಬ ಹೇಳಿಕೆಗೆ, ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಅಸಮಾಧಾನ ವ್ಯಕ್ತಪಡಿಸಿ, ಲೋಕಸಭೆ ಚುನಾವಣೆಯ ಮತ ಎಣಿಕೆ ನಂತರ ಬಿಜೆಪಿ ಏನೆಂದು ಗೊತ್ತಾಗುತ್ತೆ.
ಇನ್ನು ಸಚಿವರು, ನಾನು ಅವರ ತಮ್ಮ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆಸುರೇಶ್‌ಗೆ ಸರಿಸಮವಿಲ್ಲ ಎಂದು ಜರಿದ್ದಾರೆ. ಹೌದು, ನಾನು ಸುರೇಶ್ ಅವರಷ್ಟು ಬಲಿಷ್ಠನಲ್ಲ, ಆದರೆ ಸುರೇಶ್ ಹಾಗೂ ಡಿಕೆಶಿ ಅವರು ಮಾಡಿರುವ ಗಣಿಹಗರಣ, ಭ್ರಷ್ಟಾಚಾರ, ವಸತಿ ಹಗರಣ, ರಿಯಲ್ ಎಸ್ಟೇಟ್ ಹಗರಣ, ಅಧಿಕಾರ ದುರುಪಯೋಗ ಮತ್ತು ಅವರರ ಮೇಲಿರುವಷ್ಟು ಕ್ರಿಮಿನಲ್ ಪ್ರಕರಣಗಳು, ಇದಾವುದರ ಲೆಕ್ಕಾಚಾರಗಳಲ್ಲಿ ಸಹೋದರರಿಬ್ಬರಿಗೆ ಸರಿಸಾಟಿಯಲ್ಲ. ಸಾರ್ವಜನಿಕ ಜೀವನದಲ್ಲಿ ಸಚ್ಚಾರಿತ್ರನಾಗಿರುವ ನನ್ನ ವಿರುದ್ಧ ಸಚಿವರು, ಒಂದರ್ಥದಲ್ಲಿ ಸರಿಯಾಗಿ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರ ಸಮಾವೇಶ ಇಂದು
ಹುಳಿಯಾರು: ತಾಲೂಕು ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಭಾನುವಾರ ಮಧ್ಯಾಹ್ನ 3 ಕ್ಕೆ  ಪಟ್ಟಣದ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ  ಹಮ್ಮಿಕೊಳ್ಳಲಾಗಿದೆ. ಇದುವರೆಗೂ ಕೆಜೆಪಿಯಲ್ಲಿದ್ದ ಜೆ.ಸಿ.ಮಾಧುಸ್ವಾಮಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಹಾಗೂ ಇದುವರೆಗೂ ಬಿಜೆಪಿ ಪ್ರತಿನಿಧಿಸಿಕೊಂಡು ಬರುತ್ತಿರುವ ಹುಳಿಯಾರಿನವರೆ  ಆದ ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಅವರ ಬೆಂಬಲಿಗರೂ ಒಟ್ಟಾಗಿ ಸೇರಿ ಅಭ್ಯರ್ಥಿ ಬಸವರಾಜು ಪರ ಚುನಾವಣ ಪ್ರಚಾರ ಕೈಗೊಳ್ಳಲು ಈ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದೆ.  ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ  ಬಿ. ಸುರೇಶ್‌ಗೌಡ,  ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ, ಕೆ.ಎಸ್. ಕಿರಣ್ ಕುಮಾರ್ ಹಾಗೂ  ಜಿ.ಎಸ್. ಬಸವರಾಜು,  ಎಂ.ಎಂ.ಜಗದೀಶ್ ಇತರರು ಭಾಗವಹಿಸಲಿದ್ದಾರೆ.

ಬಿಜೆಪಿಗೆ ಸೇರ್ಪಡೆ...
ತುಮಕೂರಿನ ಕೆ.ಆರ್.ಬಡಾವಣೆಯ ಬಿಜೆಪಿ ಲೋಕಸಭಾ ಕಾರ್ಯಾಲಯದಲ್ಲಿ 19ನೇ ವಾರ್ಡ್‌ನ ರಾಮಾಂಜಿನೇಯ ಜೆಡಿಎಸ್ ತೊರೆದು ಬಿಜೆಪಿ ಸೇರಿದರು. ಈ ಸಂದರ್ಭದಲ್ಲಿ ಧನಿಯಾಕುಮಾರ್, ಡಿ.ಎ.ಜಗದೀಶ್, ಶಂಕರ್, ಬೋಜಕುಮಾರ್ ಮತ್ತಿತರರು ಇದ್ದರು.

ಏಡ್ಸ್ ನಿರ್ಮೂಲನೆಗೆ ಜಾಗೃತಿ ಪರಿಹಾರ
ತುಮಕೂರು: ಬಹಳಷ್ಟು ಮಾರಣಾಂತಿಕ ಕಾಯಿಲೆಗಳನ್ನು ನಿರ್ಮೂಲನೆ ಮಾಡಲಾಗಿದೆ. ಪ್ಲೇಗ್, ಮಲೇರಿಯಾದಂತಹ ಭೀಕರ ಕಾಯಿಲೆಗೆ ಲಸಿಕೆ ಕಂಡು ಹಿಡಿಯಲಾಗಿದೆ. ಆದರೆ ಏಡ್ಸ್ ನಂತಹ ಕಾಯಿಲೆಯ ನಿರ್ಮೂಲನೆಗೆ ಜಾಗೃತಿಯೊಂದೇ ಪರಿಹಾರ ಎಂದು ಪ್ರೊ. ಜೋಯೆಲ್ ಹೇಳಿದರು.
ಅವರು ತುಮಕೂರಿನಿ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ರೆಡ್  ರಿಬ್ಬನ್  ಕ್ಲಬ್ ವತಿಯಿಂದ ನಡೆದ ಏಡ್ಸ್ ಜಾಗೃತಿ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಪ್ತ ಸಮಾಲೋಚಕ ದಯಾನಂದ ಮಾತನಾಡಿ ಕರ್ನಾಟಕದಲ್ಲಿ ತುಮಕೂರು ಏಡ್ಸ್ ಬಾಧಿತ ಪ್ರದೇಶ. ಈ ಕಾಯಿಲೆ ನಮಗರಿವಿಲ್ಲದಂತೆ ನಮ್ಮ ದೇಹಕ್ಕೆ ಸೇರಿಕೊಂಡು ಮಾರಣಾಂತಿಕವಾಗುತ್ತದೆ. ಆದರೆ ಸೂಕ್ತ ಮುನ್ನೆಚ್ಚರಿಕೆಯಿಂದ ರೋಗ ಬಾರದಂತೆ ತಡೆಗಟ್ಟಬಹುದು ಎಂದರು. ಪ್ರೊ. ಎಂ. ಮಹದೇವು, ಪ್ರೊ. ಸಿ.ವಿ. ರಾಜಗೋಪಾಲ, ಪ್ರೊ. ಸುಜಾತ ಜೋಯೆಲ್, ಪ್ರೊ. ಅಫ್ಸಲ್ ಅಹಮದ್, ಷರೀಪ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.