ರಾಜಕೀಯ ಚಟುವಟಿಕೆಗೆ ಬ್ರೇಕ್
ಕ.ಪ್ರ. ವಾರ್ತೆ, ತುಮಕೂರು, ಏ.17
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಮೇಲಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.
ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮುಖಂಡರ ವಲಸೆಯಿಂದ ರಂಗೇರಿದ್ದ ಚುನಾವಣೆಗೆ ಕಡೆಗೂ ಮುಕ್ತಾಯವಾಗಿದೆ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ತವರು ಜಿಲ್ಲೆಯಾಗಿರುವ ಕಾರಣ ತನ್ನ ಅಭ್ಯರ್ಥಿ ಮುದ್ದಹನುಮೇಗೌಡರನ್ನು ಗೆಲ್ಲಿಸಿಕೊಳ್ಳಬೇಕಾಗಿದೆ. ಹಾಗೆಯೇ ಜೆಡಿಎಸ್ ತನ್ನ ಪಕ್ಷದ ರಾಜ್ಯಾಧ್ಯಕ್ಷರನ್ನೇ ಚುನಾವಣಾ ಆಖಾಡಕ್ಕೆ ನಿಲ್ಲಿಸಿರುವುದರಿಂದ ಆ ಪಕ್ಷಕ್ಕೂ ಇದು ಪ್ರತಿಷ್ಠೆಯ ಕಣವಾಗಿದೆ.
ಇನ್ನು 4 ಬಾರಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರು ಈ ಬಾರಿ ಗೆದ್ದು ದಾಖಲೆಯ 5ನೇ ಬಾರಿಗೆ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಕ್ಕೂ ಈ ಚುನಾವಣೆ ನಾಂದಿ ಹಾಡಲಿದೆ.
ಈ ಬಾರಿ ಕಣದಲ್ಲಿದ್ದ ಎಲ್ಲಾ ಮೂರು ಪಕ್ಷಗಳ ಅಭ್ಯರ್ಥಿಗಳು ಮೂಲತಃ ಕಾಂಗ್ರೆಸ್ಸಿಗರೇ. ಕಳೆದ ಒಂದು ತಿಂಗಳಿನಿಂದ ಈ ಮೂರು ಪಕ್ಷದ ಅಭ್ಯರ್ಥಿಗಳು ಟೀಕೆ, ಪ್ರತಿ ಟೀಕೆ ಮಾಡುತ್ತಾ ಚುನಾವಣೆಗೆ ಒಂದು ರೀತಿಯ ಖದರ್ ತಂದಿದ್ದರು. ನಿರಂತರ ರೋಡ್ ಶೋಗಳು, ಮನೆ ಮನೆಗೆ ತೆರಳಿ ಪ್ರಚಾರ ಮಾಡಿತ್ತು. ತಾರಾಮಣಿಗಳು ಬಂದು ಹೋಗಿದ್ದು, ಖುದ್ದು ದೇವೇಗೌಡರೇ ನಿರಂತರವಾಗಿ ಈ ಕ್ಷೇತ್ರಕ್ಕೆ ಬಂದು ಹೋಗಿದ್ದರಿಂದ ಮತ್ತಷ್ಟು ಖದರ್ ಬಂದಿತ್ತು
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಂದು ಈ ಕ್ಷೇತ್ರ ಕಾಂಗ್ರೆಸ್ಗೆ ಎಷ್ಟು ಮುಖ್ಯ ಎಂಬ ಸಂದೇಶವನ್ನು ರವಾನಿಸಿದ್ದರು. ಅಲ್ಲದೇ ಕೊರಟಗೆರೆಗೆ ಕೆಪಿಸಿಸಿ ಅಧ್ಯಕ್ಷರೊಟ್ಟಿಗೆ ಬಂದು ಚುನಾವಣಾ ಪ್ರಚಾರ ಕೂಡ ಮಾಡಿದ್ದರು.
ಶೇ. 60 ಕ್ಕೂ ಹೆಚ್ಚು ಅಹಿಂದ ವರ್ಗದ ಮತಗಳು ಇರುವುದರಿಂದ ಈ ಕ್ಷೇತ್ರ ಕಾಂಗ್ರೆಸ್ ಗೆಲ್ಲಬೇಕಾಗಿದೆ. ಅಲ್ಲದೇ ಹಳೇ ಮೈಸೂರು ಪ್ರಾಂತ್ಯದಲ್ಲಿ ಅತ್ಯಂತ ಶಕ್ತಿಶಾಲಿಯಾಗಿರುವ ಜೆಡಿಎಸ್ನ ಭದ್ರಕೋಟೆಯನ್ನು ಛಿದ್ರ ಮಾಡಬೇಕಾದ ಅನಿವಾರ್ಯತೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಮೇಲಿತ್ತು. ಹೀಗಾಗಿ ಇದೊಂದು ಪ್ರತಿಷ್ಠೆಯ ಕಣವಾಗಿತ್ತು. ಇನ್ನು ಬಿಜೆಪಿಗೆ ಬಂದರೆ ಹಾಲಿ ಅಭ್ಯರ್ಥಿ ಬಸವರಾಜುಗೆ ಟಿಕೆಟ್ ಕೊಡಲೇಬಾರದೆಂದು ಬಿಜೆಪಿ ಒಂದು ಬಣ ಹೈಕಮಾಂಡ್ಗೆ ಆಗ್ರಹಿಸಿತ್ತು. ಕಡೆಗೆ ಎಲ್ಲರ ಲೆಕ್ಕಾಚಾರ ಸುಳ್ಳು ಮಾಡಿ ಜಿ.ಎಸ್. ಬಸವರಾಜು ಟಿಕೆಟ್ ತಂದದ್ದೂ ಆಯ್ತು. ಒಂದು ವೇಳೆ ಬಿಜೆಪಿ ಈ ಕ್ಷೇತ್ರವನ್ನು ಸೋತರೆ ಪಕ್ಷದವರಿಂದಲೇ ನಿಂದನೆ ಅನುಭವಿಸಬೇಕು. ಹೀಗಾಗಿ ಬಸವರಾಜು ಅವರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಮೂರು ಪ್ರಮುಖ ಪಕ್ಷಗಳಿಗೆ ತುಮಕೂರು ಕ್ಷೇತ್ರವನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ. ಈಗ ಚುನಾವಣೆ ಮುಗಿದಿದೆ. ಈಗ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಮುಳುಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

