ಸಿಬ್ಬಂದಿಯಿಂದಲೇ ನಕಲಿ ಮತದಾನ
ತುರುವೇಕೆರೆ: ತಾಲ್ಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿದ್ದ ಲೋಕಸಭಾ ಚುನಾವಣೆಯಲ್ಲಿ ಸಿಬ್ಬಂದಿಯೇ ನಕಲಿ ಮತದಾನ ಮಾಡಿ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ.
ಕೋಳಘಟ್ಟ ಗ್ರಾಮದ ಮತಗಟ್ಟೆ ಸಂಖ್ಯೆ 8 ರಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿತ್ತು. ಸಾಯಂಕಾಲ 5 ರ ಸುಮಾರಿಗೆ ಮತಗಟ್ಟೆಯಲ್ಲಿ ಕುಳಿತಿದ್ದ ಪಕ್ಷಗಳ ಏಜಂಟರುಗಳು ಕೊಠಡಿಯಿಂದ ಹೊರಬಂದಿದ್ದಾರೆ.
ಕೆಲ ಹೊತ್ತಿನ ನಂತರ ಕೊಠಡಿಯಲ್ಲಿ ಯಾವೊಬ್ಬ ಮತದಾರನೂ ಇಲ್ಲದಿದ್ದರೂ ಸಹ ಮತಯಂತ್ರ ಶಬ್ದ ಮಾಡುತ್ತಿತ್ತು. ಇದನ್ನು ಮತಕಟ್ಟೆ ಸಮೀಪದ ಕುಳಿತಿದ್ದ ಯುವಕರು ಗಮನಿಸಿ ಕೊಠಡಿಯೊಳಗೆ ಹೋಗಿ ಪ್ರಶ್ನಿಸಿದಾಗ ಕೆಲವು ಮತಗಳನ್ನು ತಾವೇ ಹಾಕಿರುವುದಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಕೃಷ್ಣಮೂರ್ತಿ ಎಂಬುವವರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಮತ ಚಲಾವಣೆಯಾದ ಮತಗಳು ಯಾವುವು ಎಂದು ನೋಡಲಾಗಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ನಾಯಕನಘಟ್ಟ ಗ್ರಾಮದ ಕೆಲವರು ಬೆಂಗಳೂರಿನಲ್ಲಿದ್ದು ಅವರು ಗ್ರಾಮಕ್ಕೆ ಬಾರದಿದ್ದರೂ ಸಹ ಅವರ ಮತ ಚಲಾವಣೆಯಾಗಿರುವುದು ಬೆಳಕಿಗೆ ಬಂದಿತ್ತು.
ಸಿಬ್ಬಂದಿಯೇ ನಕಲಿ ಮತದಾನ ಮಾಡಿರುವ ಸಂಗತಿ ಹರಡುತ್ತಿದ್ದಂತೆ ಗ್ರಾಮದ ಬಹುತೇಕ ಮಂದಿ ಮತಕೇಂದ್ರದ ಬಳಿ ಜಮಾಯಿಸಿ ಸಿಬ್ಬಂದಿಯನ್ನು ಕೊಠಡಿಯಿಂದ ಹೊರಬರದಂತೆ ಕೂಡಿ ಹಾಕಿದರು. ಸಿಬ್ಬಂದಿ ಕೃಷ್ಣಮೂರ್ತಿ ತಾವೇ ನಕಲಿ ಮತದಾನ ಮಾಡಿದ್ದು ತಪ್ಪಾಗಿದೆ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಸಹಾಯಕ ಚುನಾವಣಾಧಿಕಾರಿ ಚಂದ್ರ ನಕಲಿ ಮತದಾನ ಮಾಡಿದ ಸಿಬ್ಬಂದಿಯಿಂದ ವಿವರಣೆ ಪಡೆದರು. ತನಗಿಂತ ಹಿರಿಯ ಅಧಿಕಾರಿಗಳು ಇದ್ದು ಅವರು ಹೊರಹೋಗಿದ್ದ ವೇಳೆ ತಾವೇ ಪಕ್ಷವೊಂದರ ಪರವಾಗಿ ಮತ ಚಲಾವಣೆ ಮಾಡಿರುವುದಾಗಿ ತಿಳಿಸಿದರು ಎನ್ನಲಾಗಿದೆ.
ಹೆಚ್ಚು ನಕಲಿ ಮತದಾನ ಆಗಿರುವ ಶಂಕೆ: ಮತಕಟ್ಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲದ್ದರಿಂದ ಪಕ್ಷಗಳ ಏಜೆಂಟರುಗಳು ಸಹ ಕೊಠಡಿಯಲ್ಲಿ ಸರಿಯಾಗಿ ಇರಲಿಲ್ಲ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

