ಕೈಕೊಟ್ಟ ಮಳೆ: ಬೆಂಕಿಯಿಂದ ಬಾಣಲೆಗೆ ರೈತ
ತಿಪಟೂರು: ಕಲ್ಪತರು ನಾಡಿನಲ್ಲಿ ಕೆಂಡದಂತಹ ಉರಿಬಿಸಿಲು ಕಾರುತ್ತಿದ್ದು ಈವರೆಗೂ ಮಳೆ ಇಲ್ಲದೆ ರೈತರು ಕಂಗಾಲಾಗಿ ಆಕಾಶದೆಡೆಗೆ ಹತಾಶಭಾವದಿಂದ ನೋಡುತ್ತಾ ಮಳೆರಾಯ ಯಾವಾಗ ಕೃಪೆ ತೋರುವನೋ ಎಂಬ ಚಿಂತೆಯ ಚಿತೆಗೆ ಬಿದ್ದಿದ್ದು, ಆತಂಕದಲ್ಲಿಯೇ ರೈತರು ಕಾಲ ಕಳೆಯುವಂತಾಗಿದೆ.
ಇತ್ತೀಚಿನ ಹಲವಾರು ವರ್ಷಗಳಲ್ಲಿ ಈ ವೇಳೆಗೆ ಪೂರ್ವ ಮುಂಗಾರು ಮಳೆಗಳು ಬೀಳುತ್ತಿದ್ದು ಹೆಸರು, ಉದ್ದು ಮತ್ತು ಜೋಳವನ್ನು ಬಿತ್ತುವ ಮೂಲಕ ಹೊಸ ವರ್ಷದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ತಾಲೂಕಿಗೆ ಸುರಿಯುತ್ತಿರುವ ಮಳೆ ಪ್ರಮಾಣ ಲೆಕ್ಕಹಾಕಿ ನೋಡಿದರೆ ವರ್ಷ ವರ್ಷವೂ ಇಳಿಕೆಯಾಗುವ ಮೂಲಕ ನಿರಂತರವಾಗಿ ಭೀಕರ ಬರಗಾಲ ಎದುರಾಗಿದ್ದು ಈ ವರ್ಷವೂ ಭಯಾನಕ ವಾತಾವರಣ ಸೃಷ್ಟಿಯಾಗಿದೆ.
ಕೇವಲ ಆಸೆ : ಕಳೆದ ವಾರದಿಂದ ತಾಲೂಕಿನಾದ್ಯಂತ ಸೆಖೆ ತೀವ್ರವಾಗಿದ್ದು, ಗುಡುಗು ಸಹಿತ ಮಳೆ ಮೋಡವೂ ಇನ್ನೇನು ಬೀಳುವ ಲಕ್ಷಣಗಳನ್ನು ತೋರುತ್ತಿರುವುದು ಬಿಟ್ಟರೆ ಮಳೆರಾಯ ಕೃಪೆ ತೋರುತ್ತಿಲ್ಲ. ಅಕ್ಕ-ಪಕ್ಕದ ತಾಲೂಕುಗಳಿಗೆ ಅಷ್ಟಿಷ್ಟು ಮಳೆ ಬರುತ್ತಿದ್ದು, ತಿಪಟೂರು ತಾಲೂಕಿಗೆ ಬರೀ ಗುಡುಗು, ಮಿಂಚಿನ ಆಸೆಯನ್ನೇ ಮಳೆರಾಯ ತೋರುತ್ತಿರುವುದು ತಾಲೂಕಿನ ಜನತೆಗೆ ತೀವ್ರ ನಿರಾಸೆ ತಂದೊಡ್ಡಿದೆ.
ಮೇವಿಗೆ ಬರ: ತಾಲೂಕಿನಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ, ಇಲ್ಲಿನ ರೈತರ ಪ್ರಮುಖ ಉಪಕಸುಬೆಂದರೆ ಪಶುಸಂಗೋಪನೆ. ಆದರೆ ಪಶುಸಂಗೊಪನೆಗೆ ಪ್ರಮುಖವಾಗಿ ಮೇವು ಮತ್ತು ನೀರು ಅಗತ್ಯವಾಗಿದೆ. ಮಳೆರಾಯನ ಮುನಿಸಿನಿಂದ ಈ ಬಾರಿಯಂತೆ ಈ ವರ್ಷವೂ ದನಕರುಗಳಿಗೂ ಹಸಿರು ಮೇವಿಲ್ಲದಂತಾಗಿದ್ದು, ರೈತರು ಗಾಬರಿ ಬೀಳುವಂತಾಗಿದೆ. ಈಗಾಗಲೆ ದನಕರುಗಳು,ಕುರಿ ಮೇಕೆಗಳನ್ನು ಮೇಯಿಸಲು ಬದುಗಳಲ್ಲಾಗಲಿ, ಕೆರೆ ಅಂಗಳಗಳಲ್ಲಾಗಲಿ ಹಸಿರು ಮೇವು ಬಾರದೆ ಭೀಕರ ಬರಗಾಲ ಎದುರಿಸುವಂತಾಗಿದೆ.
ವಿನಾಶದಂಚಿನಲ್ಲಿ ತೆಂಗು: ಹತ್ತಾರು ವರ್ಷಗಳಿಂದ ಬರದ ಛಾಯೆಗೆ ಸಿಲುಕಿರುವ ತೆಂಗು ಬೆಳೆ, ಕಳೆದ ವರ್ಷದಿಂದ ಶೇ. 50ಕ್ಕೂ ಹೆಚ್ಚು ತೆಂಗಿನಮರಗಳು ಒಣಗಿದ್ದು, ಉಳಿದವು ನಾನಾ ರೋಗಗಳಿಗೆ ತುತ್ತಾಗಿದ್ದು ತೆಂಗು
ಬೆಳೆಗಾರರು ದಿಕ್ಕೆಡುವಂತೆ ಮಾಡಿದೆ. ತಾಲೂಕಿನ ನೂರಾರು ಗ್ರಾಮಗಳಲ್ಲಿ ಸಾವಿರಾರು ತೆಂಗಿನ ಮರಗಳು, ಅಡಕೆ ಮರಗಳು ಈಗಾಗಲೆ ಒಣಗಿ ಸುಳಿ ಬಿದ್ದು ಹೋಗಿದ್ದು ಬೆಳೆಗಾರರು ಆತಂಕದಲ್ಲಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರ ಇವರ ನೆರವಿಗೆ ಮುಂದಾಗದೆ ನಿರ್ಲಕ್ಷಿಸಿರುವುದು ತೆಂಗು ಬೆಳೆಗಾರರ ಬದುಕು ಬೀದಿಗೆ ಬೀಳುವಂತಾಗಿದೆ.
ನೀರಿಗೂ ಸಂಚಕಾರ
ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಸಹಜವಾಗಿಯೇ ಅಂತರ್ಜಲದ ಕೊರತೆ ಎದುರಾಗಿದೆ. ಹಲವಾರು ಬೋರುಗಳಲ್ಲಿ ನೀರಿಲ್ಲದೆ ನಿಂತು ಹೋಗಿವೆ. ಕಳೆದ ಹತ್ತಾರು ವರ್ಷಗಳಿಂದ ತಾಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಏಕೈಕ ಆಸರೆ ಎಂದರೆ ಬೋರ್ವೆಲ್ಗಳು ಮಾತ್ರ. ಮುಂದಿನ ಕೆಲವೇ ದಿನಗಳಲ್ಲಿ ಮಳೆರಾಯ ಕೃಪೆ ತೋರದಿದ್ದರೆ ಬಹುತೇಕ ಗ್ರಾಮಗಳ ಬೋರ್ವೆಲ್ಗಳಲ್ಲಿ ಅಂತರ್ಜಲದ ಕೊರತೆ ಎದುರಾಗುವುದಲ್ಲದೆ ಗ್ರಾಮೀಣ ಜನರ ಬದುಕು ಬೆಂಕಿಯಿಂದ ಬಾಣಲೆಗೆ ಎಸೆದಂತಾಗುವುದು ನಿಶ್ಚಿತ ಎಂಬುದು ರೈತರದಲ್ಲಿ ದುಗುಡ ಹುಟ್ಟಿಸಿದೆ.
-ಬಿ.ರಂಗಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

