ಡಿಕ್ಕಿ: ಚಾಲಕ, ನಿರ್ವಾಹಕ, ಪ್ರಯಾಣಿಕ ಸ್ಥಳದಲ್ಲೇ ಸಾವು
ಕುಣಿಗಲ್: ರಸ್ತೆಯಲ್ಲಿ ಕೆಟ್ಟು ನಿಂತ ಸಾರಿಗೆ ಸಂಸ್ಥೆ ಬಸ್ಸಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕನೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ರಾಹೆ 75ರ ಬೈಪಾಸ್ ರಸ್ತೆ, ಹೇರೂರು ಗ್ರಾಮದ ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ಸು, ಪಟ್ಟಣದ ಬೈಪಾಸ್ ರಸ್ತೆಯ ಹೇರೂರು ಗ್ರಾಮದ ಬಳಿ ಶನಿವಾರ ರಾತ್ರಿ 1 ಗಂಟೆ ಸುಮಾರಿಗೆ, ಬಸ್ಸಿನ ಮುಂಬದಿ ಚಕ್ರ ಪಂಕ್ಚರ್ ಆಗಿ, ಬಸ್ಸು ಕೆಟ್ಟು ನಿಂತಿತು. ಚಾಲಕ, ನಿರ್ವಾಹಕನ ಸಹಾಯದಿಂದ ಚಕ್ರ ಬದಲಿಸಲು ಮುಂದಾಗಿದ್ದಾಗ ಅಪರಿಚಿತ ವಾಹವನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಘಟನೆಯಲ್ಲಿ ಚಾಲಕ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕಿನ ಹಿರೆಮ್ಯಾಗರಿ ಗ್ರಾಮದ ಕನಕಪ್ಪ(42) ಮತ್ತು ನಿರ್ವಾಹಕ ತುಮಕೂರು ಜಿಲ್ಲೆಯ ಕೋರಾ ಹೋಬಳಿಯ ಹನುಮಂತಗಿರಿ ಗ್ರಾಮದ ನಾಗರಾಜು (34) ಸ್ಥಳದಲ್ಲೆ ಮೃತಪಟ್ಟರು.
ಈ ಮಧ್ಯೆ ಅದೇ ಸಮಯದಲ್ಲಿ ಪ್ರಯಾಣಿಕರೊಬ್ಬರು ಬಹಿರ್ದೆಸೆಗೆಂದು ತೆರಳಿದ್ದಾಗ ಅವರಿಗೂ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಕಾರಣ, ಹೆದ್ದಾರಿಯಲ್ಲಿನ ಸೇತುವೆ ಮೇಲಿಂದ ಪಕ್ಕದ ಸರ್ವಿಸ್ ರಸ್ತೆಗೆ ಅವರು ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟುರು. ಶನಿವಾರ ಬೆಳಗಿನ ಜಾವ ಉರ್ಕಹಳ್ಳಿ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು. ಪರಿಶೀಲಿಸಿದಾಗ ಅವರ ಜೇಬಿನಲ್ಲಿ ಸಿಕ್ಕ ಬಸ್ಸಿನ ಚೀಟಿಯಿಂದಾಗಿ ಅವರು ಹಾಸನಕ್ಕೆ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂತು. ಮೃತರನ್ನು ಹಾಸನದ ಖಾಸಗಿ ಶಾಲಾ ವಾಹನದ ಚಾಲಕ ನಾರಾಯಣ (35) ಎಂದು ಗುರುತಿಸಲಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಕುಣಿಗಲ್ ಪೊಲೀಸರು, ಅಪರಿಚಿತ ವಾಹನ ಪತ್ತೆ ಹಚ್ಚಲು, ಘಟನಾ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಾಹನದ ನಂಬರ್ ಪ್ಲೇಟ್ ತುಂಡುಗಳನ್ನು ಸಂಗ್ರಹಿಸಿ ಜೋಡಿಸಿದಾಗ, ವಾಹನದ ಸಂಖ್ಯೆ ಕೆಎ13ಎ6465 ಎಂದು ಗುರುತಿಸಲಾಗಿದೆ. ವಾಹನದ ಪತ್ತೆಗೆ ಪೊಲಿಸರು ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

