ಸಂಸ್ಕಾರ ಪಡೆದುಕೊಳ್ಳುವ ಪ್ರಕ್ರಿಯೆಯೇ ಶಿಕ್ಷಣ
ಕ.ಪ್ರ. ವಾರ್ತೆ, ತುಮಕೂರು, ಏ.26
ವ್ಯಕ್ತಿ ಸಂಸ್ಕಾರ ಪಡೆದುಕೊಳ್ಳುವ ಪ್ರಕ್ರಿಯೆಯೇ ಶಿಕ್ಷಣ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಶಂಭು ವಿ. ಬಳಿಗಾರ್ ಅಭಿಪ್ರಾಯಪಟ್ಟರು.
ತುಮಕೂರು ವಿ.ವಿ. ಬಯಲು ರಂಗಮಂದಿರದಲ್ಲಿ ಶುಕ್ರವಾರ ಜರುಗಿದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಕೇವಲ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಯಶಸ್ಸಿನ ಸಂಕೇತ ಅಲ್ಲ, ವ್ಯಕ್ತಿ ಸಂಸ್ಕಾರವಂತನಾಗುವುದೇ ನಿಜವಾದ ಯಶಸ್ಸು ಎಂದರು.
ಒಬ್ಬ ವ್ಯಕ್ತಿ ಪಠ್ಯಪುಸ್ತಕದಿಂದ ಪಡೆದುಕೊಳ್ಳುವುದು ಶೇ. 20 ಜ್ಞಾನ ಮಾತ್ರ. ಉಳಿದ ಶೇ. 80ಅನ್ನೂ ಅವನು ಸುತ್ತಲಿನ ಸಮಾಜದಿಂದ ಹಾಗೂ ಬದುಕಿನ ಅನುಭವಗಳಿಂದ ಪಡೆದುಕೊಳ್ಳುತ್ತಾನೆ. ಪಠ್ಯಪುಸ್ತಕದ ಹೊರಗಿನ ಜ್ಞಾನಕ್ಕೂ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಮಾತು ಹಾಗೂ ನಡವಳಿಕೆ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಸಂಸ್ಕೃತಿ ಮತ್ತು ವಿಕೃತಿಯ ನಡುವಿನ ಗೋಡೆ ತುಂಬ ತೆಳುವಾದದ್ದು. ಹಾಲಿನಂತಹ ಬದುಕಿಗೆ ಹೆಪ್ಪೂ ಹಾಕಬಹುದು, ಉಪ್ಪೂ ಹಾಕಬಹುದು. ಅದು ವ್ಯಕ್ತಿಯ ಒಟ್ಟಾರೆ ಗುಣವನ್ನು ಪ್ರತಿಫಲಿಸುತ್ತದೆ ಎಂದರು. ಕಠಿಣ ಶ್ರಮ ಹಾಗೂ ಶ್ರದ್ಧೆಗಳೇ ವ್ಯಕ್ತಿಯ ಭವ್ಯ ಭವಿಷ್ಯದೆಡೆಗಿನ ಹಾದಿ. ಇದರೊಂದಿಗೆ ವಿನಯವಂತಿಕೆಯೂ ಸೇರಿಕೊಂಡರೆ ಯಶಸ್ಸಿಗೆ ಹೆಚ್ಚಿನ ಅರ್ಥ ಲಭಿಸುತ್ತದೆ. ವಿನಯವಂತಿಕೆ ಎಂದರೆ ಹೇಡಿತನ ಅಲ್ಲ ಎಂದು ಪ್ರೊ. ಬಳಿಗಾರ್ ಪ್ರತಿಪಾದಿಸಿದರು. ಉದ್ಘಾಟನಾ ಭಾಷಣ ಮಾಡಿದ ತುಮಕೂರು ವಿ. ವಿ. ಕುಲಪತಿ ಪ್ರೊ. ಎ.ಎಚ್. ರಾಜಾಸಾಬ್, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಕೋರ್ಸುಗಳ ಸೀಟುಗಳ ಸಂಖ್ಯೆಯನ್ನು 32 ರಿಂದ 40 ಕ್ಕೆ ಹೆಚ್ಚಿಸುವುದಾಗಿ ತಿಳಿಸಿದರು. ಯಾವ ವಿಷಯದಲ್ಲಿ ತುಮಕೂರು ವಿ.ವಿ. ಸ್ನಾತಕೋತ್ತರ ವಿಭಾಗ ಹೊಂದಿಲ್ಲವೋ, ಅದಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಬೆಂಗಳೂರು ವಿ.ವಿ.ಯಲ್ಲಿ ಐದು ಹೆಚ್ಚುವರಿ ಸೀಟು ಮೀಸಲಿರಿಸುವಂತೆ ಒಪ್ಪಂದ ನಡೆದಿದೆ ಎಂದೂ ತಿಳಿಸಿದರು.
ಸನ್ಮಾನ: ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯರಾಮು ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಳಿಗಾರ್ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ರವಿಕುಮಾರ್ ಟಿ. ಡಿ. ಅವರನ್ನು ಸನ್ಮಾನಿಸಲಾಯಿತು. ಪಿಎಚ್.ಡಿ ಪದವಿ ಪಡೆದ ಅಧ್ಯಾಪಕರು, ವಿಶೇಷ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಬಹುಮಾನ ವಿಜೇತರನ್ನು ಅಭಿನಂದಿಸಲಾಯಿತು.
ಉಪಪ್ರಾಂಶುಪಾಲ ಬಿ. ಕರಿಯಣ್ಣ, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಸುದೀಪ್ ಕುಮಾರ್ ಆರ್. ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಡಾ. ರೇಣುಕ ಎಚ್. ಆರ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

