ಪ್ರತಿ ಪ್ರಜೆಗೂ ಸಮಾನ ಹಕ್ಕಿದೆ
ಕನ್ನಡಪ್ರಭ ವಾರ್ತೆ ತುಮಕೂರು ಏ.29
ಸಂವಿಧಾನದ ಪರಿಚ್ಛೇದ 4 ರಲ್ಲಿ ದೇಶದಲ್ಲಿರುವ ಎಲ್ಲಾ ಪ್ರಜೆಗಳಿಗೂ ಸಮಾನತೆಯಿಂದ ಬದುಕುವ ಖಾತ್ರಿ ನೀಡಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಸಿದ್ದಲಿಂಗಪ್ರಭು ಅಭಿಪ್ರಾಯಪಟ್ಟರು.
ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತ ರಕ್ಷಣಾ ಸಮಿತಿಯಿಂದ ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಿದ್ದ ಸಂಘಟನೆ ಕಾರ್ಯಕರ್ತರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಕುರಿತ ಅರಿವಿನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪರಿಚ್ಛೇದ 17 ರಲ್ಲಿ ಅಸ್ಪೃಶ್ಯತೆ ನಿಷೇಧಿಸಲಾಗಿದೆ. ಪರಿಚ್ಛೇದ 21 ರಲ್ಲಿ ಎಲ್ಲ ನಾಗರಿಕರಿಗೆ ಜೀವಿಸುವ ಹಕ್ಕು ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯನ್ನು 1989 ರಲ್ಲಿ ಜಾರಿಗೊಳಿಸಲಾಯಿತು, ಪ್ರಮುಖವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಮಾರಣಾಂತಿಕ ಹಲ್ಲೆ ತಡೆಯಲು ತಪ್ಪಿತಸ್ಥರಿಗೆ ದಂಡ ವಿಧಿಸಿ ಶಿಕ್ಷಿಸಲು ಕಾಯಿದೆಯಲ್ಲಿ ಅವಕಾಶವಿದೆ ಎಂದರು.
ಸಮಾನತೆ ಇಂದಿಗೂ ಇಲ್ಲ: ದಲಿತರು ಸಮಾನವಾಗಿ ಬದುಕಲು ಇಂದಿಗೂ ಸಹ ಸಾಧ್ಯವಾಗಿಲ್ಲ, ಇದಕ್ಕೆ ಸಾಮಾಜಿಕ ವ್ಯವಸ್ಥೆ ಕಾರಣವಾಗಿದ್ದರು ನಮ್ಮಲ್ಲಿರುವ ಕೀಳರಿಮೆಯು ಸಹಾ ಕಾರಣವಾಗಿರುತ್ತದೆ, ಸಂವಿಧಾನದಲ್ಲಿರುವ ಈ ಕಾನೂನುಗಳ ಬಗ್ಗೆ ತಿಳಿದುಕೊಂಡು ಅನುಷ್ಠಾನಕ್ಕಾಗಿ ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಈ ಮುಖೇನಾ ಸಮ-ಸಮಾಜಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯನ್ನು ಜಾರಿಗೊಳಿಸಿದ್ದು ತುಳಿತಕ್ಕೆ ಒಳಗಾದ ಅಥವಾ ದೌರ್ಜನ್ಯಕ್ಕೊಳಗಾಗಿರುವ ದಲಿತ ಸಮುದಾಯಗಳಿಗೆ ಕಾನೂನು ಸೇವಾ ಪ್ರಾಧಿಕಾರ ನೆರವು ನೀಡಲು ಬದ್ಧವಾಗಿದೆ ಎಂದು ತಿಳಿಸಿ ಈ ಕಾಯಿದೆ ಅನುಷ್ಠಾನಕ್ಕೆ ದಲಿತ ಸಮುದಾಯ ಶಿಕ್ಷಣ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದರು.
ವಿಷಯ ಮಂಡಿಸಿ ಮಾತನಾಡಿದ ವಕೀಲ ರಮೇಶ್, ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ದೇಶದಲ್ಲಿರುವ ಅಸ್ಪೃಶ್ಯತೆ ಮತ್ತು ಶೋಷಣೆಯನ್ನು ತಡೆಯುವ ನಿಟ್ಟಿನಲ್ಲಿ ಸಂವಿಧಾನ ರಚನಾ ಸಮಿತಿಯ ಸಭೆಗಳಲ್ಲಿ ಚರ್ಚಿಸಿ ಪರಿಚ್ಛೇದ 14,15, 17 ಮತ್ತು 21 ಹಾಗೂ 46 ರಲ್ಲಿ ಸಮಾನತೆಯಿಂದ ಬದುಕುವ ಹಕ್ಕು ಸಾಮಾಜಿಕ ಅನ್ಯಾಯದಿಂದ ರಕ್ಷಿಸುವ ಹಕ್ಕುಗಳನ್ನು ಖಾತ್ರಿಗೊಳಿಸಿದೆ. ಇಂದು ಈ ಕಾಯಿದೆ ಜೀವಂತವಾಗಿದ್ದರು ಶೇ 50 ರಷ್ಟು ಬಳಕೆಯಾಗುತ್ತಿದೆ, ದಲಿತರಲ್ಲೇ ಅಸ್ಪೃಶ್ಯ ಜಾತಿಗಳು ಈ ಕಾಯಿದೆ ಬಳಸಿಕೊಳ್ಳಿತ್ತಿಲ್ಲ, ಆದರೆ ದಲಿತರಲ್ಲಿರುವ ಸ್ಪರ್ಶ ಜಾತಿಗಳು ಕಾಯ್ದೆಯನ್ನು ಬಳಸಿಕೊಂಡು ಅದಕ್ಕೆ ಮಸಿ ಬಳಿಯುತ್ತಿದೆ ಎಂದರು. ಜಾತಿ ವ್ಯವಸ್ಥೆ ಹಳ್ಳಿಗರಲ್ಲಿ ನೇರವಾಗಿ ಇಂದೂ ಸಹ ಗೋಚರಿಸುತ್ತಿದೆ ಆದರೆ ನಗರ ಪ್ರದೇಶದಲ್ಲಿ ಅಗೋಚರವಾಗಿದೆ ಎಂದು ವಿಶ್ಲೇಷಿಸಿದರು.
ಮಂಗಳಮುಖಿಯರು ಮನುಷ್ಯರಲ್ಲವೇ...?
ವಿಷಯ ಮಂಡನೆಗೆ ಪ್ರಕ್ರಿಯಿಸಿ ಮಾತನಾಡಿದ ಮಂಗಳಮುಖಿಯರ ಸಂಘದ ಅಧ್ಯಕ್ಷೆ ದೀಪಿಕಾ ಮಾತನಾಡಿ, ನಾವು ಸಹ ಭಾರತದ ಪ್ರಜೆಗಳು. ಮಂಗಳಮುಖಿಯರು ಮನುಷ್ಯರೇ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಂಗಳ ಮುಖಿಯರನ್ನು ತೃತೀಯ ಲಿಂಗಿಗಳೆಂದು ಘೋಷಿಸಿರುವುದು ಸ್ವಾಗತಾರ್ಹ. ಪ್ರಕೃತಿಯಿಂದ ಆಗುವ ಬದಲಾವಣೆಗೆ ನಾವೂ ಸಹಾ ಒಳಗಾಗುತ್ತಿದ್ದು ಮನೆಯವರಿಂದಲೂ ದೂರವಾಗುತ್ತಿದ್ದೇವೆ. ಸಮಾಜವೂ ಸಹ ನಮ್ಮನ್ನು ಕೀಳಾಗಿ ನೋಡುತ್ತದೆ, ನಾವು ಸಣ್ಣ ವ್ಯಾಪಾರ ಮಾಡಿಕೊಂಡಿದ್ದರೂ ಚಕ್ಕ ಮತ್ತು ಕೋಜಾಗಳೆಂದು ವ್ಯಾಪಾರಕ್ಕೆ ಬರುವುದಿಲ್ಲ. ಭಿಕ್ಷೆ ಬೇಡಲು ಪೊಲೀಸರು ಬಿಡುವುದಿಲ್ಲ ಆದ್ದರಿಂದ ನಾವೂ ಸಂಘಟಿತರಾಗಲು ಮುಂದಾಗಬೇಕು. ನಮ್ಮ ಪರವಾದ ಕಾನೂನುಗಳನ್ನು ತಿಳಿದುಕೊಂಡು ಸಂಘ ಸಂಸ್ಥೆಗಳ ಬೆಂಬಲವನ್ನು ಪಡೆದುಕೊಳ್ಳಬೇಕು ಎಂದರು.
ಪತ್ರಕರ್ತ ಉಗಮ ಶ್ರೀನಿವಾಸ್, ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸಂಚಾಲಕ ಓಬಳೇಶ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಪಾರ್ವತಮ್ಮ ಉಪಸ್ಥಿತರಿದ್ದರು, ಅಧ್ಯಕ್ಷತೆಯನ್ನು ಸ್ಲಂ ಜನಾಂದೋಲನ-ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ವಹಿಸಿದ್ದರು. ನಿರೂಪಣೆಯನ್ನು ಸೈಯದ್ ಅಲ್ತಾಫ್ ಸ್ವಾಗತವನ್ನು ಅರುಣ್, ವಂದನಾರ್ಪಣೆಯನ್ನು ಶೃತಿ ನೆರವೇರಿಸಿದರು, ಯುವಜನ ಸಂಪನ್ಮೂಲ ಕೇಂದ್ರದ ಅನುಪಮ, ಗಾಯಿತ್ರಿ, ಶೆಟ್ಟಾಳಯ್ಯ, ಕೋಮಲ, ಲತಾ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

