ತುಮಕೂರು

ಶಾಸಕರ ಅನುದಾನದಲ್ಲಿ 30 ಲಕ್ಷ ಬಿಡುಗಡೆ

Published On :

ತುಮಕೂರು: ಗುಣಮಟ್ಟದ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯ 5 ನೇ ಕಂತಿನಲ್ಲಿ 30 ಲಕ್ಷ ಅನುದಾನ ಬಿಡುಗಡೆ ಮಾಡಿರುವುದಾಗಿ ಶಾಸಕ ಬಿ ಸುರೇಶ್ ಗೌಡ ತಿಳಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯ ಕಾಮಗಾರಿಗಳಿಗೆ ಗುದ್ದಲಿಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕರ ನಿಧಿಯಲ್ಲಿ ಮಣ್ಣು ತೆಗೆಯುವ ಜಂಗಲ್ ತೆಗೆಯುವ ಅಥವಾ ಜಲ್ಲಿ ರಸ್ತೆ ಮಾಡುವ ಇಂತಹ ತಾತ್ಕಾಲಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಕಾರಣ ಈ ದೇಶದ ಪ್ರತಿ ಭಾರತೀಯನೂ ಸರ್ಕಾರಕ್ಕೆ ನೀಡುವ ಕಂದಾಯದ ಹಣದಲ್ಲಿ ಶಾಸಕರಿಗೆ ಆಗಲಿ ಸಂಸತ್ ಸದಸ್ಯರಿಗೇ ಆಗಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಹಣ ಎಂದು ನೀಡುತ್ತಾರೆ ಇದರಲ್ಲಿ ಸಮರ್ಪಕ ಮತ್ತು ಜನೋಪೋಯೋಗಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
10-15 ವರ್ಷ ಕಾಲ ಬಳಕೆ ಮಾಡುವಂತ ಕೆಲಸಕ್ಕೆ ಹಣ ಬಿಡುಗಡೆ ಮಾಡಿದ್ದೇನೆ. ಗ್ರಾಮಗಳ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಹಂತ ಹಂತವಾಗಿ ಕ್ಷೇತ್ರದಲ್ಲಿ ಗುಣಮಟ್ಟದ ಸಿಮೆಂಟ್ ರಸ್ತೆ ಸಿಮೆಂಟ್ ಚರಂಡಿ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಿರುವುದಾಗಿ ಸುರೇಶ್ ಗೌಡ ತಿಳಿಸಿದರು.
ನಾಗವಲ್ಲಿ ಮತ್ತು ಬಳ್ಳಗೆರೆ ಮತ್ತು 48 ಗ್ರಾಮಗಳಿಗೆ ಅಂದಾಜು 15 ಕೋಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದ ಅವರು ಈ ಯೋಜನೆಯಿಂದ 41520 ಜನರಿಗೆ ಉಪಯೋಗವಾಗಲಿದ್ದು ಹೇಮಾವತಿ ನೀರನ್ನು ಶುದ್ದೀಕರಿಸಿ ನೈಟ್ರೇಟ್ ಫ್ಲೋರೈಡ್ ಕಬ್ಬಿಣಾಂಶ ಹಾಗು ಗಡಸುಮುಕ್ತ ನೀರನ್ನು ದಿನದ 24 ಗಂಟೆಯೂ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಯಾವುದೆ ಯೋಜನೆ ಯಶಸ್ವಿಯಾಗಬೇಕಾದರೆ ಅದು ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಅಭಿವೃದ್ಧ್ದಿಯಾಗುವ ಎಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಗುಣಮಟ್ಟದ ಕಾಮಗಾರಿ ಅಗುವಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಅನೇಕ ಜನಪರ ಯೋಜನೆಗಳು ಜಾರಿಯಾಗುವುದೇ ಇಲ್ಲ ಎಲ್ಲವೂ ಪಂಚಾಯ್ತಿ ಕಾರ್ಯದರ್ಶಿ ಇಲ್ಲ ಪಿ,ಡಿ,ಓ ಗಳ ಕಪಿಮುಷ್ಟಿಯಲ್ಲಿ ಇರುತ್ತದೆ. ಗ್ರಾಪಂ ಮಟ್ಟದಲ್ಲಿ ಉತ್ತಮವಾಗಿ ದಾಖಲೆ ಇರುವುದಿಲ್ಲ ಗ್ರಾಮದ ಯಾವುದೇ ಮಾಹಿತಿ ಪಂಚಾಯ್ತಿಯಲ್ಲಿ ಲಭ್ಯ ಇರುವುದಿಲ್ಲ ಇದನ್ನು ಸಮರ್ಪಕವಾಗಿ ಲೆಕ್ಕ ಪರಿಶೋಧನೆ ಮಾಡಿ ದಾಖಲೆಗಳ ನಿರ್ವಹಣೆ ಮಾಡುವಂತೆ ಶಾಸಕರು ಕಾರ್ಯನಿರ್ವಹಣಾಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮಾಂತರ ಷೇತ್ರದಲ್ಲಿ ಉತ್ತಮವಾಗಿ ಶೌಚಾಲಯಗಳ ನಿರ್ಮಾಣ ಆಗಿದ್ದು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯಗಳ ನಿರ್ಮಾಣ ಮಾಡಿಕೊಂಡು ಬಯಲು ಮುಕ್ತ ಶೌಚವನ್ನು ರೂಡಿಸಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಿದರು.
ಪಡಿತರ ಚೀಟಿಯ ಸಮಸ್ಯೆಯನ್ನು ಬಗೆಹರಿಸಲಾಗದೆ ಪ್ರತಿ ತಿಂಗಳು ಅಕ್ಕಿ ಪೂರೈಸಲಾಗದೆ ದಿನಕ್ಕೊಂದು ಕಾನೂನನ್ನು  ಹೊರ ತರುತ್ತಿದೆ. ಇದರಿಂದ ಸಾಮಾನ್ಯ ನಾಗರೀಕನ ಬದುಕಿನಲ್ಲಿ  ಸರ್ಕಾರ ಅಟ ಆಡುತ್ತಿದೆ ಎಂದ ಅವರು ಇದೇ ರೀತಿ ಮುಂದುವರಿದರೆ ಹೋರಾಟದ ಹಾದಿಯನ್ನು ಕೈಗೆತ್ತಕೊಳ್ಳಬೇಕಾಗುತ್ತದೆ ಎಂದರು.
ಹೇಮಾವತಿ ನಾಲಾ ಅಚ್ಚುಕಟ್ಟದಾರರಲ್ಲಿ ಸಮನ್ವಯತೆ ಸೌಹಾರ್ಧತೆ ಮೂಡಿಸಿದಾಗ ನಾಲೆ ಹೊಡೆಯುವಂತ ಕ್ಷುಲ್ಲಕ ಕೆಲಸ ನಡೆಯುವುದಿಲ್ಲ. ತುಮಕೂರು ಜಿಲ್ಲೆಯ ಜನತೆಯೂ ನಮ್ಮದೇ ಜನ ಎಂದು ಭಾವಿಸಿದಾಗ ಮಾತ್ರ ಇಂತಹ ಕೆಲಸಗಳು ಮರುಕಳಿಸವುದಿಲ್ಲ. ಈ ನಿಟ್ಟಿನಲ್ಲಿ ಸೌಹಾರ್ಧತೆ ಮತ್ತು ಸಮನ್ವಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅರಿವು ಮೂಡಿಸುವ ಕೆಲಸ ಮಾಡಬೇಕು. ಪದೇ ಪದೇ ಈ ರೀತಿ ನಾಲೆ ಒಡೆಯುವುದರಿಂದ ಯಾರಿಗೂ ಶೋಭೆ ಬರುವಂತ ಕೆಲಸ ಇದಲ್ಲ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ನಾಗಣ್ಣ, ಹನುಮಂತರಾಜು, ರಂಗಮ್ಮ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.