ತುಮಕೂರು

ಅಕ್ಷರ ವಂಚಿತರ ಬರಹದಲ್ಲಿ ಅನುಭವದ ಸೆಲೆ

Published On :

ಕ.ಪ್ರ.ವಾರ್ತೆ    ತುಮಕೂರು    ಫೆ.2
ಅಕ್ಷರ ವಂಚಿತ ತಳಸಮುದಾಯದವರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ. ಇವರ ಬರಹಗಳಲ್ಲಿ ಅನುಭವಗಳ ಸೆಲೆ ಇರುತ್ತದೆ ಎಂದು ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ನುಡಿದರು.
ನಗರದ ಎಂಪ್ರೆಸ್ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ತಿಪಟೂರಿನ ಉಪನ್ಯಾಸಕರು ಹಾಗೂ ಕವಿಗಳಾದ ಎಲ್. ಮಹಲಿಂಗಪ್ಪ ಅವರ ಗೂಡು ಮಿಡಿದ ಹಾಡು  ಸಾಂಸ್ಕೃತಿಕ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು. ಅಕ್ಷರ ವಂಚಿತರಾದವರು ಬಹಳ ಹಿಂದಿನಿಂದಲೂ ಬರೆಯುತ್ತಾ ಬಂದಿದ್ದಾರೆ. ಇಂದು ಆ ಸಂಖ್ಯೆ ಹೆಚ್ಚಿದೆ. ತಮ್ಮ ಸುತ್ತಮುತ್ತ ನಡೆಯುವ ನೈಜತೆ ಹಾಗೂ ಬದುಕಿನ ಚಿತ್ರಣವನ್ನು ಮುಂದಿಡುತ್ತಿರುವುದರಿಂದ ಅವು ಸತ್ವಯುತವಾಗಿ ಹೊರಬರಲು ಕಾರಣವಾಗಿವೆ ಎಂದರು.
ಯಾವುದೇ ಒಂದು ಸಾಹಿತ್ಯ ಶ್ರೇಷ್ಠ ಎನ್ನಿಸಿಕೊಳ್ಳಬೇಕಾದರೆ ಅದರಲ್ಲಿ ಮೂಲ ದ್ರವ್ಯ ಇರಬೇಕು. ಕೇವಲ ಪಾಂಡಿತ್ಯದ ಬರಹಗಳಿಂದ ಏನನ್ನೂ ಸಾಧಿಸಲಾಗದು. ಆದರೆ ಪಾಂಡಿತ್ಯಕ್ಕೆ ಹೆದರಿ ಬರೆದರೆ ಅದು ಒಳ್ಳೆಯ ಸಾಹಿತ್ಯವಾಗಲು ಸಾಧ್ಯವಿಲ್ಲ. ಇಂದಿಗೂ ಸಹ ಕುವೆಂಪು, ದೇವನೂರು ಮಹಾದೇವ ಅವರಂತಹವರ ಕೃತಿಗಳು ಶ್ರೇಷ್ಠ ಎಂದೆನಿಸಲು ಅವರ ನೈಜತೆ ಹಾಗೂ ಅನುಭವ ಸತ್ವ ಅದರಲ್ಲಿರುವುದೇ ಕಾರಣ. ಆದ್ದರಿಂದ ಕೆಳವರ್ಗದ ಬರಹಗಾರರು ಅಕ್ಷರದ ಪಾಂಡಿತ್ಯಕ್ಕೆ ಮಾರುಹೋಗುವ ಅವಶ್ಯಕತೆ ಬೇಡ ಎಂದರು.
ನೈಜತೆ ಕಾಣುವುದಿಲ್ಲ: ಲೇಖಕನಾದವನು ದೂರದ ಯಾವುದೋ ದೇಶದ ಅನುಭವಗಳನ್ನು ಅಭಿವ್ಯಕ್ತಿಸಿದರೆ ಅದರಲ್ಲಿ ನೈಜತೆ ಕಾಣುವುದಿಲ್ಲ. ಬದಲಾಗಿ ತನ್ನೊಳಗಿನ ಹಾಗೂ ಸುತ್ತಮುತ್ತಲಿನ ಬದುಕಿನ ಬಗ್ಗೆ ಬೆಳಕು ಚೆಲ್ಲಬೇಕು. ಮನಸ್ಸು ಶುದ್ಧಿಯಿಂದ ಕೂಡಿದ್ದರೆ ಉತ್ತಮ ಸಾಹಿತ್ಯ ಸಾಧ್ಯ ಎಂದ ಅವರು, ನಮ್ಮ ಜಾನಪದದಲ್ಲಿ ಎಷ್ಟು ಹೆಕ್ಕಿದರೂ ಮುಗಿಯದಂತಹ ಸಂಪತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬುಡಕಟ್ಟಿನ ಆಯಾಮಗಳನ್ನೊಳಗೊಂಡ ಎಲ್. ಮಹಾಲಿಂಗಪ್ಪ ಅವರ ಸಂಕಲನದಲ್ಲಿ ಹೆಚ್ಚಿನದಾಗಿ ಆ ಸಂಸ್ಕೃತಿ ಬಿಂಬಿತವಾಗಿದ್ದು, ಅದನ್ನು ದಾಟಿ ಹೊರಬರುವ ಪ್ರಯತ್ನ ಮಾಡಿದರೆ ಇನ್ನೂ ಶ್ರೇಷ್ಠ ಕವಿಯಾಗಲು ಸಾಧ್ಯವಿದೆ ಎಂದರು.
ಪೊರಕೆಗಿಂದು ಉತ್ತಮ ಬೆಲೆ: ಹಿಂದೆ ಪೊರಕೆಯನ್ನು ತುಚ್ಛವಾಗಿ ಕಾಣುತ್ತಿದ್ದರು. ಇಂದು ಆಮ್ ಆದ್ಮಿ ಪಕ್ಷ ತನ್ನ ಗುರುತನ್ನಾಗಿ ಮಾರ್ಪಡಿಸಿರುವುದರಿಂದ ಅದಕ್ಕೀಗ ಉತ್ತಮ ಬೆಲೆ ಸಿಕ್ಕಿದೆ. ತಳಸಮುದಾಯದವರೇ ಬಳಸುತ್ತಿದ್ದ ವಾದ್ಯ ಪರಿಕರಗಳು ಇಂದು ಬೇರೆ ಮುಖಂಡರೂ ಸಹ ಅದನ್ನು ಬಡಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವ ಶ್ರೇಷ್ಠತೆಯತ್ತ ಈ ಪರಿಕರಗಳು ಬೆಳೆದುಬಿಟ್ಟಿವೆ ಎಂದು ಕಾಲದ ಸೂಕ್ಷ್ಮತೆಯನ್ನು ಅವರು ವಿವರಿಸಿದರು.
ದೃಢತೆ ಇರಲಿ: ಹೆಸರುಘಟ್ಟ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎಲ್. ಶಂಕರಲಿಂಗಪ್ಪ ಮುಖ್ಯ ಅತಿಥಗಳಾಗಿ ಮಾತನಾಡಿ ಇಂದು ಇಡೀ ಸಾಹಿತ್ಯವನ್ನು ವಿಮರ್ಶಿಸಬೇಕಾದ ಅಗತ್ಯವಿದೆ ಎಂದರು. ಬರಹಗಾರರಲ್ಲಿ ದೃಢತೆ ಇರಬೇಕು. ಬದುಕು ಕಲ್ಮಶಗೊಂಡಾಗ, ನಡೆ-ನುಡಿ ವಿಕೃತಗೊಂಡರೆ ಬರಹ ಉತ್ತಮವಾಗಿರಲು ಸಾಧ್ಯವಿಲ್ಲ ಎಂದ ಅವರು, ತಾವು ಬರೆಯುವ ಯಾವುದೇ ಪ್ರಾಕಾರ ಇರಬಹುದು. ಅದನ್ನು ಸಮರ್ಥಿಸಿಕೊಳ್ಳುವ ಮಟ್ಟಿಗೆ ಲೇಖಕ ಸಿದ್ಧನಿರಬೇಕು. ಒಮ್ಮೆ ಬರೆದದ್ದನ್ನು ಸ್ವೀಕರಿಸುವುದು ಅಥವಾ ಬಿಡುವುದು ಜನತೆಗೆ ಬಿಟ್ಟ ವಿಷಯ. ಆದರೆ ಅದರ ಬಗ್ಗೆ ಕೃತಿಕರ್ತನಿಗೆ ಸಮರ್ಥನೀಯ ಗುಣ ಇದ್ದೇ ಇರಬೇಕು ಎಂದರು.
ಇಡೀ ದಕ್ಷಿಣ ಭಾರತದಲ್ಲಿ ವಚನಕಾರರ ಪ್ರಭಾವ ಇಂದಿಗೂ ಸಹ ಅಚ್ಚಳಿಯದೆ ಇರಲು ವಚನಕಾರರಲ್ಲಿದ್ದ ಅನುಭವದ ನುಡಿಗಳೇ ಕಾರಣ ಎಂದರು.
ಪ್ರಾಂಶುಪಾಲ, ಸಾಹಿತಿ ಎನ್. ನಾಗಪ್ಪ ಮಾತನಾಡಿ ಕವಿಯಾದವರಲ್ಲಿ ಸಾಮಾಜಿಕ ಪ್ರಜ್ಞೆ ಇರಬೇಕು. ಮಾತು ಅನುಭವ ಆಗಬಾರದು.
 ಅನುಭವ ಮಾತಾದಾಗ ಅದಕ್ಕೆ ಹೆಚ್ಚಿನ ಅರ್ಥ ಇರುತ್ತದೆ. ವಚನಕಾರರಲ್ಲಿ ಇಂತಹ ಅನುಭವ ಮಾತುಗಳು ಇದ್ದುದರಿಂದಲೇ ಅವು ಶ್ರೇಷ್ಠತೆ ಪಡೆದುಕೊಂಡಿದೆ ಎಂದರು.
ರಾಮನಗರ ಸಹಾಯಕ ಅಭಿಯಂತರ ಷಣ್ಮುಖಪ್ಪ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್  ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಭೂ ಮಾಪನಾ ಇಲಾಖೆ ಉಪನಿರ್ದೇಶಕ ಬಿ.ರಾಜಣ್ಣ ಉಪಲೀಕನಹಳ್ಳಿ, ಶಿರಾ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಬಿ.ವಿ. ಜನಾರ್ದನಯ್ಯ ಮತ್ತಿತರರು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಶಿವಣ್ಣ ಸ್ವಾಗತಿಸಿದರು. ಕಂಟಲಗೆರೆ ಸಣ್ಣಹೊನ್ನಯ್ಯ ನಿರೂಪಿಸಿದರು.



ಯಾವುದೇ ಒಂದು ಸಾಹಿತ್ಯ ಶ್ರೇಷ್ಠ ಎನ್ನಿಸಿಕೊಳ್ಳಬೇಕಾದರೆ ಅದರಲ್ಲಿ ಮೂಲ ದ್ರವ್ಯ ಇರಬೇಕು. ಕೇವಲ ಪಾಂಡಿತ್ಯದ ಬರಹಗಳಿಂದ ಏನನ್ನೂ ಸಾಧಿಸಲಾಗದು. ಆದರೆ ಪಾಂಡಿತ್ಯಕ್ಕೆ ಹೆದರಿ ಬರೆದರೆ ಅದು ಒಳ್ಳೆಯ ಸಾಹಿತ್ಯವಾಗಲು ಸಾಧ್ಯವಿಲ್ಲ. ಇಂದಿಗೂ ಸಹ ಕುವೆಂಪು, ದೇವನೂರು ಮಹಾದೇವ ಅವರಂತಹವರ ಕೃತಿಗಳು ಶ್ರೇಷ್ಠ ಎಂದೆನಿಸಲು ಅವರ ನೈಜತೆ ಹಾಗೂ ಅನುಭವ ಸತ್ವ ಅದರಲ್ಲಿರುವುದೇ ಕಾರಣ.
ಟಿ  ಡಾ.ಬಂಜಗೆರೆ ಜಯಪ್ರಕಾಶ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.