ಶೇ.100 ರಷ್ಟು ಆರ್ಥಿಕ ಪ್ರಗತಿ ಸಾಧಿಸಿ
ತುಮಕೂರು: ವಿವಿಧ ಇಲಾಖೆಗಳಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಎಲ್ಲಾ ಯೋಜನೆಗಳು ತ್ವರಿತಗತಿಯಲ್ಲಿ ಸಾಗಿ, ಮಾರ್ಚ್ 31 ರೊಳಗಾಗಿ ಶೇ.100 ರಷ್ಟು ಆರ್ಥಿಕ ಹಾಗೂ ಭೌತಿಕ ಪ್ರಗತಿಯಾಗಬೇಕಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಅವರಿಂದು ಜಿ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಥಿಕ ವರ್ಷದ ಕೊನೆಯಲ್ಲಿ ಜಿಲ್ಲೆಯ ಅಭಿವೃದ್ದಿ ಎಷ್ಟರ ಮಟ್ಟಿಗೆ ಸಾಗಿದೆ ಎಂಬುದು ಚರ್ಚೆ ವಿಷಯವಾಗಲಿದ್ದು, ವಿಳಂಬಧೋರಣೆಗೆ ಅಧಿಕಾರಿಗಳು ಅವಕಾಶ ನೀಡದಂತೆ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ವಸಂತನರಸಾಪುರ ಪ್ರದೇಶದಲ್ಲಿ ಕೆ.ಎ.ಐ.ಡಿ.ಬಿ. ವತಿಯಿಂದ ವಶಪಡಿಸಿಕೊಳ್ಳಲಾದ ರೈತರ ಭೂಮಿಗೆ ಪರಿಹಾರ ನೀಡುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಜಮೀನಿನಲ್ಲಿನ ಬೆಲೆಬಾಳುವ ಮರ ಗಿಡಗಳಿಗೆ ಪರಿಹಾರ ನೀಡಲಾಗಿಲ್ಲ ಎಂದು ಶಾಸಕ ಸುಧಾಕರ್ ಲಾಲ್ ಅವರ ಆರೋಪಕ್ಕೆ ಉತ್ತರಿಸಿದ ಸಚಿವರು, ಸದ್ಯ ಬೆಂಗಳೂರಿನ ಕೆ.ಎ.ಐ.ಡಿ.ಬಿ. ಅಧಿಕಾರಿ ತುಮಕೂರು ಜಿಲ್ಲೆಯ ಭೂಸ್ವಾಧೀನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ವಾರಕ್ಕೆ ಎರಡು ಬಾರಿ ಸದರಿ ಅಧಿಕಾರಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಕಾರ್ಯದ ಪ್ರಗತಿ ಪರಿಶೀಲಿಸುವಂತೆ ಸೂಚಿಸಿದರು.
ಎಚ್ಚರಿಕೆ ವಹಿಸಿ: ಕುಡಿಯುವ ನೀರಿನ ವಿಷಯದಲ್ಲಿ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಬೇಕು. ನೀರು ಪೋಲಾಗಲು ಅವಕಾಶ ನೀಡಬಾರದು. ಹಿತಮಿತವಾಗಿ ನೀರನ್ನು ಬಳಸಬೇಕು. ಈ ನಿಟ್ಟಿನಲ್ಲಿ ಪಂಚಾಯತ್ ರಾಜ್ ಕಾರ್ಯಪಾಲಕ ಅಭಿಯಂತರರು ಎಚ್ಚರ ವಹಿಸಬೇಕು. 4ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಯ ತುಮಕೂರು ಮಧುಗಿರಿ ಎರಡೂ ವಿಭಾಗಗಳಲ್ಲಿ 38 ಮತ್ತು 23 ಲಕ್ಷ ಖರ್ಚಾಗಿದ್ದು, 4 ಕೋಟಿ ಬಾಕಿ ಇದೆ. 10 ದಿನದೊಳಗಾಗಿ ಎರಡೂ ವಿಭಾಗದ ಇ.ಇ.ಗಳು ಪ್ರಗತಿ ತೋರಿಸಬೇಕು ಎಂದು ಸಚಿವರು ಸೂಚಿಸಿದರು.
ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಅನರ್ಹರಿಗೆ ಬಿ.ಪಿ.ಎಲ್. ಕಾರ್ಡ್ ಮತ್ತು ಅರ್ಹರಿಗೆ ಎ.ಪಿ.ಎಲ್. ಕಾರ್ಡ್ ದೊರಕಿರುವ ಕುರಿತು ವ್ಯಾಪಕ ಪರಿಶೀಲನೆ ನಡೆಸುವಂತೆ ಮತ್ತು ಬೋಗಸ್ ಕಾರ್ಡ್ ನೀಡುವಿಕೆಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿಗೆ 10 ಪ್ರಕರಣಗಳನ್ನು ದಾಖಲಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ರಾತ್ರಿ ವೇಳೆ ನಿರಂತರವಾಗಿ ಲಾರಿಗಳ ಮೂಲಕ ಗಣಿಗಾರಿಕೆ ಮಾಡಲ್ಪಟ್ಟ ಮಾಲನ್ನು ಸಾಗಿಸಲಾಗುತ್ತಿದೆ ಎಂದು ಶಾಸಕ ಕೃಷ್ಣಪ್ಪ ಅವರ ದೂರಿಗೆ ಸ್ಪಂದಿಸಿದ ಸಚಿವರು, ಆರ್.ಟಿ.ಓ. ಹಾಗೂ ಗಣಿಗಾರಿಕೆ ಉಪನಿರ್ದೇಶಕರು ಈ ನಿಟ್ಟಿನಲ್ಲಿ ಪರಿಶೀಲಿಸುವಂತೆ ಸೂಚಿಸಿದರು. ಪರವಾನಗಿ ಹೊಂದಿರುವ ಮಾಲನ್ನು ಸಂಜೆ 6 ಗಂಟೆಯ ನಂತರ ಸಾಗಿಸಬಾರದು. ಹಾಗೆ ಸಾಗಾಣಿಕೆಯಾಗುತ್ತಿದ್ದಲ್ಲಿ ಅದು ಪರವಾನಗಿ ಹೊಂದಿದ ಮಾಲು ಎಂಬುದನ್ನು ಗಣಿ ಅಧಿಕಾರಿಗಳು ಸ್ಪೆಷಲ್ ಸ್ವ್ಕಾಡ್ ಮೂಲಕ ತಪಾಸಣೆ ಮಾಡಬೇಕು ಮತ್ತು 10 ಟನ್ಗಿಂತ ಹೆಚ್ಚಿನ ಭಾರದ ಮಾಲನ್ನು ಸಾಗಿಸುತ್ತಿರುವ ವಾಹನಗಳಿಗೆ ಆರ್.ಟಿ.ಓ. ಅಧಿಕಾರಿಗಳು ಪರ್ಮಿಟ್ ನೀಡಬಾರದು ಎಂದರು.
ಓವರ್ ಲೋಡ್ ವಾಹನ ಸಾಗಾಣಿಕೆಯಿಂದ ರಸ್ತೆ ಹಾಳಾಗುತ್ತವೆ. ಆರ್.ಟಿ.ಓ. ಅಧಿಕಾರಿಗಳು ಈ ನಿಟ್ಟಿನಲ್ಲಿ ತಪಾಸಣೆ ನಡೆಸುವಂತೆ ಸಚಿವರು ಸೂಚಿಸಿದರು.
ಆನೆ ಹಾವಳಿ: ತುಮಕೂರು ನಗರದಲ್ಲಿ ಆನೆಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಮಿತಿಮೀರುತ್ತಿದ್ದು, ಅರಣ್ಯ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಶಾಸಕ ರಫಿಕ್ ಅಹಮದ್ ಅವರ ದೂರಿಗೆ ಉತ್ತರಿಸಿದ ಸಚಿವರು, ನಾಗರಹೊಳೆ ಅಭಯಾರಣ್ಯದಿಂದ ಸಾಕಿದ ಆನೆಗಳನ್ನು ಜಿಲ್ಲೆಗೆ ತರಿಸಿ, ಕಾಡಾನೆಗಳನ್ನು ಓಡಿಸುವ ಕೆಲಸ ಇಂದು ಸಂಜೆಯಿಂದಲೇ ಆರಂಭವಾಗುತ್ತಿದೆ ಎಂದು ತಿಳಿಸಿದರು.
ಭಾಗ್ಯಲಕ್ಷ್ಮಿ ಬಾಂಡ್ ವಿತರಣೆಯಲ್ಲಿ ಅಧಿಕಾರಿಗಳ ಲೋಪದಿಂದಾಗಿ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಬಾಂಡ್ ದೊರಕುತ್ತಿಲ್ಲವೆಂಬ ಶಾಸಕ ಷಡಕ್ಷರಿ ಅವರ ಆರೋಪಕ್ಕೆ ಉತ್ತರಿಸಿದ ಸಚಿವರು, ಅರ್ಹ ಫಲಾನುಭವಿಗೆ ಬಾಂಡ್ ನೀಡುವಿಕೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಂದ ಲೋಪವಾಗಿದ್ದಲ್ಲಿ, ಸದರಿ ಅಧಿಕಾರಿಗಳು ಕ್ರಮ ವಹಿಸಿ, ಬಾಂಡ್ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇನ್ನುಮುಂದೆ ಇಂತಹ ದೂರಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

