ವಿದ್ಯಾರ್ಥಿಗೆ ಗ್ರಹಣ ಶಕ್ತಿ ಮುಖ್ಯ
ತುಮಕೂರು: ನೆನಪಿನ ಶಕ್ತಿಗಿಂತ ವಿಷಯ ಗ್ರಹಣ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡಿ ನಿಮ್ಮ ಜ್ಞಾನಾರ್ಜನೆ ಮಟ್ಟ ಹೆಚ್ಚಿಸಿಕೊಳ್ಳಿ ಎಂದು ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ನೂತನ ಪ್ರಾಂಶುಪಾಲೆ ಪ್ರೊ. ವಿ. ನಳಿನಾಕ್ಷಿ ವಿದ್ಯಾರ್ಥಿ ವೃಂದಕ್ಕೆ ಕಿವಿಮಾತು ಹೇಳಿದರು.
ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಪ್ರಯುಕ್ತ ವಿದ್ಯಾರ್ಥಿ ಮತ್ತು ಶಿಕ್ಷಕ ಸಮುದಾಯ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೆನಪಿನ ಶಕ್ತಿಯ ಆಧಾರದ ಮೇಲೆ ಒಬ್ಬ ವಿದ್ಯಾರ್ಥಿ ಬೌದ್ಧಿಕ ಮಟ್ಟ ಅಳೆದು ಪ್ರಮಾಣಪತ್ರ ವಿತರಿಸುವ ಶಿಕ್ಷಣ ಪದ್ದತಿ ಜಾಗತೀಕರಣದ ಇಂದಿನ ದಿನಗಳಲ್ಲಿ ಪ್ರಯೋಜನಕ್ಕೆ ಬಾರದು ಎಂದರು.
ಕಾಲಕ್ಕೆ ತಕ್ಕಂತೆ ನಡೆಯಬೇಕು: ಇಂದು ಎಲ್ಲ ಉದ್ಯೋಗ ಕ್ಷೇತ್ರಗಳಲ್ಲಿ ಏಳು-ಬೀಳು ಸಹಜ. ಇದು ಸಾಮಾನ್ಯ ವಿದ್ಯಾರ್ಥಿಗೆ ಮಾತ್ರ ತಾತ್ಕಾಲಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆಯೇ ಹೊರತು ವಿಶೇಷ ಯೋಗ್ಯತೆಯ ವಿದ್ಯಾರ್ಥಿಗಳಿಗಲ್ಲ ಎಂದು ಅಭಿಪ್ರಾಯಪಟ್ಟ ಅವರು, ಕಾಲಕಾಲಕ್ಕೆ ಬದಲಾಗುವ ಉದ್ಯೋಗವಕಾಶಗಳ ಬಗ್ಗೆ ಚಿಂತಿಸದೆ ನಿಮ್ಮ ಆಸಕ್ತಿಯ ವಿಷಯದಲ್ಲಿ ಅಧ್ಯಯನ ಮುಂದುವರಿಸಿ ಎಂದರು.
ಲಿಂಗ ತಾರತಮ್ಯ ಸಲ್ಲ: ಸಮಾಜದಲ್ಲಿ ಇಂದು ಲಿಂಗ ತಾರತಮ್ಯ ಹೆಚ್ಚಾಗುತ್ತಿದೆ. ಅದನ್ನು ಹೋಗಲಾಡಿಸಲು ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯ ಸೂಕ್ಷ್ಮತೆಯನ್ನು ಸಮಾಜದಲ್ಲಿ ಬೆಳೆಸುವುದು ಗುರಿಯಾಗಬೇಕು. ಅದಕ್ಕಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಇದರ ಕಡೆಗೆ ಶಿಕ್ಷಕ ವೃಂದ ಗಮನಹರಿಸಬೇಕು ಎಂದು ನುಡಿದರು.
ನಿಕಟಪೂರ್ವ ಪ್ರಾಂಶುಪಾಲ ಡಾ. ನಾಗಭೂಷಣ್ ರವರು ಸ್ಪರ್ಧಾತ್ಮಕ ಯುಗವಾದ ಇಂದಿನ ದಿನಗಳಲ್ಲಿ ನಿಶ್ಚಿತ ಗುರಿಯನ್ನಿಟ್ಟುಕೊಂಡು ಅಭ್ಯಾಸ ಮಾಡಿದರೆ ಮಾತ್ರ ಯಶಸ್ಸು ಸಾಮರ್ಥ್ಯವುಳ್ಳ ಶಿಕ್ಷಕರ ಕೊರತೆಯನ್ನು ಶಿಕ್ಷಣ ಕ್ಷೇತ್ರ ಇಂದು ಎದುರಿಸುತ್ತಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಎಸ್. ರೇಣುಕಪ್ಪನವರು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ರೂಪಿತಗೊಂಡಿರುವ ಈ ವಿದ್ಯಾಸಂಸ್ಥೆಯ ಗುರಿ ವಿದ್ಯಾರ್ಥಿಗಳ ಸಬಲೀಕರಣವಾಗಿದೆ. ಅಲ್ಪ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಈ ಕಾಲೇಜಿಗೆ ನ್ಯಾಕ್ ಸಂಸ್ಥೆಯವರು ಎ ಗ್ರೇಡ್ ಶ್ರೇಣಿಯನ್ನು ನೀಡಿರುವುದು ಶಿಕ್ಷಕ ಮತ್ತು ವಿದ್ಯಾರ್ಥಿನಿಯರ ಪರಿಶ್ರಮದಿಂದ ಸಾಧ್ಯವಾಯಿತೆಂದು ನುಡಿದರು.
ಇದೇ ವೇಳೆ ನಿವೃತ್ತರಾದ ಪ್ರಾಂಶುಪಾಲ ಡಾ.ನಾಗಭೂಷಣ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಡಿ.ಆರ್. ಮೋಹನ್ಕುಮಾರ್, ಡಾ.ಕೆ.ಸಿ.ಜಯಸ್ವಾಮಿ, ಪ್ರೊ.ಐ.ಎಂ.ಶಿವಕುಮಾರ್ ಪ್ರೊ. ಎಲ್. ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು. ಸೌಮ್ಯಶ್ರೀ ನಿರೂಪಿಸಿದರು. ಡಾ.ಸಣ್ಣಸ್ವಾಮಿ ವಂದಿಸಿದರು. ಮೋಹನ್ಕುಮಾರ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

