ತುಮಕೂರು

ವೃದ್ಧೆ ಮೇಲೆ ಹಲ್ಲೆ; ಗ್ರಾಮಸ್ಥರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,   ಕುಣಿಗಲ್ ,  ಫೆ.4
ಜಮೀನಿನಲ್ಲಿ ಬೆಳೆದಿದ್ದ ಸರ್ವೆ ಮರ ಕಡಿಯುವ ವಿಷಯದಲ್ಲಿ ಮಹಿಳಾ ಎಎಸ್‌ಐಯೊಬ್ಬರು ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಏಕಪಕ್ಷೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು,
ಮಾನವ ಹಕ್ಕು ಸಂಘಟನೆ ಪದಾಧಿಕಾರಿಗಳು, ಮಹಿಳೆಯರು, ಎಎಸೈ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದ ಪಟ್ಟಣ ಪೊಲೀಸ್ ಠಾಣೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಹಿಳಾ ಸಹಾಯಕ ಸಬ್ ಇನ್ಸೆಪೆಕ್ಟರ್ (ಕುಮಾರಿ) ಎಂಬಾಕೆ  ವೃದ್ಧೆ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವುದರ ವಿರುದ್ದ ಘೋಷಣೆ ಕೂಗಿ, ಕೂಡಲೇ ಎಎಸ್‌ಐ ಅವರನ್ನು ಅಮಾನತುಗೊಳಿಸಿ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಲ್ಲೆಗೊಳಗಾದ ವೃದ್ಧೆ ಸೇನಮ್ಮ, ತಾಲೂಕಿನ ಕೊತ್ತಗೆರೆ ಹೋಬಳಿಯ ತರೇದಕುಪ್ಪೆ ಗ್ರಾಮದಲ್ಲಿ ತಮ್ಮ ಪುತ್ರಿ ಪ್ರಮೀಳಾರ ಜಮೀನಿನಲ್ಲಿ ಸರ್ವೆಮರಗಳನ್ನು ಬೆಳೆಸಿದ್ದಾರೆ. ಒಣಗಿ ಹೋಗಿದ್ದ ಮರಗಳನ್ನು ಕತ್ತರಿಸಿ ಸಾಗಿಸಲು, ತಮ್ಮ ಗಂಡ ಮೂಡ್ಲಿಗಿರಿಯಪ್ಪ ಅವರೊಂದಿಗೆ ಸೋಮವಾರ ಸಿದ್ದತೆ ನಡೆಸಿದ್ದಾಗ, ಖಾಸಗಿ ವ್ಯಕ್ತಿಗಳೊಂದಿಗೆ ಕಾರಿನಲ್ಲಿ ಸ್ಥಳಕ್ಕಾಗಮಿಸಿದ ಮಹಿಳಾ ಎಎಸ್‌ಐ ತಮಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಾವು ಕಟಾವು ಮಾಡಿದ್ದ ಮರಗಳನ್ನು, ಇದಕ್ಕೆ ಸಂಬಂಧಪಡದವರಿಗೆ ಸಾಗಿಸಲು ಸಹಕರಿಸಿದರು. ಇದನ್ನು ಪ್ರಶ್ನಿಸಿದ ತನ್ನ ಮೇಲೆ ವೃದ್ಧೆ ಎಂಬುದನ್ನು ನೋಡದೆ ಹಲ್ಲೆ ನಡೆಸಿದರು ಎಂದು ಆರೋಪಿಸಿದರು. ಸೇನಮ್ಮನವರ ಮೇಲಿನ ಹಲ್ಲೆಯನ್ನು ಖಂಡಿಸಿದ ಜೆಡಿಎಸ್ ಮುಖಂಡೆ ಅಯಿಶಾಬೀ, ಮಹಿಳಾ ಅಧಿಕಾರಿಯಾಗಿ ಮಹಿಳೆಯರಿಗೆ ನ್ಯಾಯ ಕೊಡಿಸದೆ,ಏಕಾಏಕಿದೌರ್ಜನ್ಯ ನಡೆಸಿ, ಹಲ್ಲೆ ನಡೆಸಿರುವುದು ಖಂಡನೀಯ ಕೂಡಲೇ  ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಮಾನವಹಕ್ಕು ತಾಲೂಕು ಸಂಸ್ಥೆ ಪದಾಧಿಕಾರಿ ಸತೀಶ್ ಇತರರು,  ವೃದ್ದೆಯಮೇಲೆ ಎಎಸೈ ದರ್ಪ ನಿಜಕ್ಕೂ ಖಂಡನೀಯ,ಜಮೀನಿನ ವ್ಯಾಜ್ಯ ಸಂಬಂಧಿಸಿದ ಕಡೆ ಬಗೆಹರಿಸಿಕೊಳ್ಳಲಿ, ಎಎಸೈ ಅವರು ಹಲ್ಲೆ ನಡೆಸಿರುವುದರಿಂದ ಅಮಾನತ್ತುಗೊಳಿಸುವಂತೆ ಪಟ್ಟುಹಿಡಿದು ಕ್ರಮಕ್ಕೆ ಆಗ್ರಹಿಸಿದರು,ಪಿಎಸೈ ಗುರುಪ್ರಸಾದ್, ಸಿಪಿಐ ಧಮೇಂದ್ರ ಪ್ರತಿಭಟನಾಕಾರರ ಮನಒಲಿಸಿ, ಸಿಪಿಐ ಸಮಕ್ಷಮದಲ್ಲಿ ವಿಚಾರಣೆ ನಡೆಸಿದರು.
ಎಎಸೈ ಕುಮಾರಿ, ತಾವು ಸ್ಥಳಕ್ಕೆ ತೆರಳಿ ಯಾವುದೇ ಗಲಾಟೆಯಾಗದಂತೆ ನೋಡಿಕೊಂಡಿದ್ದು, ಹಲ್ಲೆ ನಡೆಸಿಲ್ಲ ಎಂದರೇ, ಸೇನಮ್ಮ ಈ ಎಎಸೈ ಅವರೆ ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಇಲ್ಲಿಯೇ ಕ್ರಮ ಕೈಗೊಳ್ಳಿ ಎಂದರು. ಆರೋಪ, ಪ್ರತ್ಯಾರೋಪ ಆಲಿಸಿದ ಸಿಪಿಐ, ಸದರಿ ಪ್ರಕರಣದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ತಪ್ಪಿತಸ್ಶರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಮಹಿಳಾ ಪ್ರಮುಖರಾದ ಕೆಂಪಮ್ಮ,ನಂಜಮ್ಮ, ಆಯಿಶಾಬೀ, ನಜೀಮುನ್ನಿಸಾ, ಶಹಜಾನ್ ಹಾಗೂ ಮುಖಂಡರಾದ ಗುರುಪ್ರಸಾದ್, ಹರೀಶ, ಜಿಪಂ ಮಾಜಿ ಸದಸ್ಯ ಬೋಜಯ್ಯ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.