ಖಾಸಗಿ ವಿಮಾ ಕಂಪನಿಯಿಂದ ವಂಚನೆ ಆರೋಪ
ಕ ಪ್ರ ವಾರ್ತೆ , ಕುಣಿಗಲ್ , ಫೆ.5
ಹೆಸರಾಂತ ಖಾಸಗಿ ವಿಮಾ ಕಂಪನಿಯ ನಾಮಫಲಕ ಹಾಕಿಕೊಂಡ ಖಾಸಗಿ ಹಣಕಾಸು ಸಂಸ್ಥೆಯು ಗ್ರಾಹಕರಿಗೆ ವಿವಿಧ ರೀತಿಯಲ್ಲಿ ವಂಚಿಸುತ್ತಿದೆ ಎಂದು ಆರೋಪಿಸಿದ ಕರವೇ ಕಾರ್ಯಕರ್ತರು, ಛಾಯಗ್ರಾಹಕರ ಸಂಘದ ಅಧ್ಯಕ್ಷರು ವಿಮಾಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಸಿಬ್ಬಂದಿಗಳನ್ನು ಪೊಲೀಸರ ವಶಕ್ಕೆ ನೀಡಿದ ಘಟನೆ ಬುಧವಾರ ನಡೆದಿದೆ.
ಪಟ್ಟಣದ ತುಮಕೂರು ರಸ್ತೆಯಲ್ಲಿನ ಖಾಸಗಿ ವಿಮಾ ಕಂಪನಿ (ಇಂಡಿಯಾ ಇನ್ಫೋಲೈನ್
ಮಾರ್ಕೆಂಟಿಗ್ ಕಂಪನಿ) ತಾಲೂಕಿನ ವಿವಿಧೆಡೆಯಲ್ಲಿ ಗ್ರಾಹಕರಿಗೆ ಮೊಬೈಲ್ ಮೂಲಕ ಕರೆಮಾಡಿ ಹೆಸರಾಂತ ಖಾಸಗಿವಿಮಾ ಕಂಪನಿಗಳ ಬಾಂಡ್ಗೆ ಗ್ರಾಹಕರಾಗುವಂತೆ ಪುಸಲಾಯಿಸಿ, ಜಾರಿಯಲ್ಲಿಲ್ಲದ ಆಕರ್ಷಕ ಸ್ಕೀಂಗಳನ್ನು ಗ್ರಾಹಕರಿಗೆ ಮರಳು ಮಾಡುವ ಮೂಲಕ ಪಾಲಿಸಿದಾರರನ್ನಾಗುವಂತೆ
ಮಾಡುತ್ತಿತ್ತು. ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಜನತೆಯನ್ನೆ ಗುರಿಯಾಗಿಸಿ ಅವರ ಮನೆಬಾಗಿಲಿಗೆ ತೆರಳಿ ಅಂಗೈಯಲ್ಲಿ ಅರಮನೆತೋರಿಸಿ, ಮುಗ್ಧ ಜನರನ್ನು ಪಾಲಿಸಿದಾರರನ್ನಾಗಿಸುವ ಜೊತೆಯಲ್ಲಿ ಕಚೇರಿಗೆ ಬಂದವರಿಗೆಲ್ಲಾ ಉಚಿತವಾಗಿ 1ಲಕ್ಷಗಳ ಅಪಘಾತ ವಿಮೆಯ ಪಾಲಿಸಿಯನ್ನು ನೀಡಿತ್ತು.
ದೋಷಪೂರಿತ ಬಾಂಡ್: ಈ ರೀತಿ ವಿಮಾಪಾಲಿಸಿ ಪಡೆದವರ ಪೈಕಿ ನೀಲತ್ತಹಳ್ಳಿಯ ನಾರಾಯಣಪ್ಪ 8-7-13, ಅರಳೀಮರದಪಾಳ್ಯದ ರಂಗಸ್ವಾಮಿ ಎಂಬುವವರು 15-5-13ರಲ್ಲಿ ಮರಣಹೊಂದಿದರು. ಇವರ ಮನೆಯವರು ಪಾಲಿಸಿಯ ಹಣ ಪಡೆಯಲು ಮನವಿ ಸಲ್ಲಿಸಿ ಹಲವಾರುಬಾರಿ ಕಚೇರಿಗೆ ಅಲೆದರೂ ಉದ್ಧಟತನದಿಂದ, ಬೇಜವಾಬ್ದಾರಿ ಉತ್ತರ ನೀಡಿ ಕಳಿಸುತ್ತಿದ್ದರು.ಇವರಲ್ಲದೆ ಕುರುಪಾಳ್ಯದ ಶಾಂತಮ್ಮ, ಮಾಗಡಿಯ ಸರಸ್ವತಿ, ಶಿವಕುಮಾರ್ ಇತರರು ಈಗಾಗಲೆ ವಿಮಾ ಕಂತಿನ ಹಣವನ್ನು ಪಾವತಿಸಿದ್ದರೂ ಕೆಲವರಿಗೆ ಬಾಂಡ್ ನೀಡದೆ ಮತ್ತೆ ಕೆಲವರಿಗೆ ಸಮರ್ಪಕ ದಾಖಲೆ ನೀಡಿದ್ದರೂ, ತಪ್ಪುಹೆಸರು, ಹುಟ್ಟಿದ ದಿನಾಂಕ ನಮೂದಿಸಿ ದೋಷಪೂರಿತ ಬಾಂಡ್ ನೀಡಿದ್ದರು.
ರೋಸಿಹೋದರು: ವಿಮಾಕಂಪನಿಗೆ ಅಲೆದು, ಅಲೆದು ರೋಸಿಹೋದ ಗ್ರಾಹಕರು, ವಿಷಯವನ್ನು ಕರವೇ ಅಧ್ಯಕ್ಷ ಮಂಜುನಾಥ, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶಿವಕುಮಾರ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕರವೇ ಪದಾಧಿಕಾರಿಗಳು, ಗ್ರಾಹಕರೊಂದಿಗೆ ಖಾಸಗಿ ವಿಮಾಕಂಪನಿಯ ಕಚೇರಿಗೆ ಆಗಮಿಸಿದಾಗ, ಅಲ್ಲಿದ್ದ ಸಿಬ್ಬಂದಿ ಸೂಕ್ತ ಉತ್ತರನೀಡಲು ತಡಬಡಾಯಿಸಿದರು. ಮುಖ್ಯಸ್ಥರ ಬಗ್ಗೆ ಯಾವುದೇ ಮಾಹಿತಿ ನೀಡದ ಕಾರಣ ಕಾರ್ಯಕರ್ತರು ಖಾಸಗಿ ವಿಮಾಕಂಪನಿಯ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ ಮೇರೆಗೆ, ಸ್ಥಳಕ್ಕಾಗಮಿಸಿದ ಪೊಲೀಸರು ಕಚೇರಿಯಲ್ಲಿದ್ದ ರಾಮಕೃಷ್ಣ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ದಿಗಾರರೊಂದಿಗೆಮಾತನಾಡಿದ ಕುಮಾರ್ ಹಾಗೂ ಮಂಜುನಾಥ, ಸದರಿ ಕಂಪನಿಯವರು ವಿತರಿಸಿರುವ ಬಹುತೇಕ ಪಾಲಿಸಿ ಬಾಂಡ್ಗಳಲ್ಲಿ ಗ್ರಾಹಕರು ಸ್ಪಷ್ಟ ದಾಖಲೆಗಳನ್ನು ಲಗತ್ತಿಸಿದ್ದರೂ ಬೇಕೆಂದೆ ತಪ್ಪು ಹೆಸರು, ಜನ್ಮದಿನಾಂಕ, ಗ್ರಾಮ, ಊರಿನ ಹೆಸರು ನಮೂದಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ವಿಮಾಹಣಡೆಯಲು ಸಮಸ್ಯೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಜನತೆ ಖಾಸಗಿ ವಿಮಾಕಂಪನಿಗಳ ಆಮಿಷಕ್ಕೆ ಬಲಿಯಾಗದೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಂತ ವಿಮಾಕಂಪನಿಗಳಲ್ಲಿ ಪಾಲಿಸಿ ಪಡೆಯುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

