ತುಮಕೂರು

ಮಧುಗಿರಿ ತಾಪಂಗೆ ಕ್ರಿಯಾಯೋಜನೆ ಸಿದ್ಧ

Published On :

ಕ ಪ್ರ ವಾರ್ತೆ ,   ಮಧುಗಿರಿ ,  ಫೆ.5
ಮಧುಗಿರಿ ತಾಲೂಕು ಪಂಚಾಯಿತಿಗೆ 13ನೇ ಹಣಕಾಸು ಯೋಜನೆಯಡಿ  33 ಲಕ್ಷ 80 ಸಾವಿರ ರು.ಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಯಿತು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುನಂದ ಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ  ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ 33 ಲಕ್ಷ 80 ಸಾವಿರ ರು.ಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಈ ಪೈಕಿ ಪ.ಜಾತಿ,  ಪ.ಪಂಗಡ  ಶೇ. 22.75,  ಕ್ರೀಡೆಗೆ ಶೇ.1, ಅಂಗವಿಕಲರಿಗೆ ಶೇ.3 ಕಾಯ್ದಿರಿಸಿ ಉಳಿದ ಹಣದಲ್ಲಿ ತಾಲೂಕಿನ 24 ಪಂಚಾಯಿತಿ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ  ತಯಾರಿಸುವಂತೆ ಸಭೆ ತೀರ್ಮಾನಿಸಿತು.
 2013-14ನೇ ಸಾಲಿನ ಅನಿರ್ಬಂಧಿತ ಅನುದಾನದಲ್ಲಿ 1ಕೋಟಿ ರು. ಮಂಜೂರಾಗಿದ್ದು ಶಿರಾ ಗೇಟಿನ ತಾ.ಪಂ.ವಸತಿ ಪ್ರದೇಶದಲ್ಲಿ ತಾ.ಪಂ.ನೂತನ ಕಟ್ಟಡ ಕಟ್ಟಲು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಯಿತು. ಸಭೆನೋಟಿಸ್, ಅನುಪಾಲನ ವರದಿ ಮತ್ತು ಸಭಾ ಸೂಚನ ಪತ್ರ ತಲುಪಿಲ್ಲ ಎಂದು ಸದಸ್ಯರಾದ ಯಶೋಧ ರಾಜಣ್ಣ, ಮಂಜುಳಾ, ನಾಗಮ್ಮ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ದೂರಿದರೆ, ಸದಸ್ಯ ರಂಗಪ್ಪ ಕ್ರಿಯಾ ಯೋಜನೆ ತಯಾರಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು. 6 ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು 6. 50ಲಕ್ಷ ರು. ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ ಎಂದು ಎಸಿಡಿಪಿಓ ತಿಳಿಸಿದಾಗ ಈ ವಿಚಾರವನ್ನು  ಸಭೆಯ ಗಮನಕ್ಕೆ ತರದೇ ಕಾಮಗಾರಿ ಪ್ರಾರಂಭಿಸಿದ್ದೀರಾ ಎಂದು ಸದಸ್ಯ ನರಸಿಂಹರಾಜು, ಜಯಣ್ಣ ಪ್ರಶ್ನಿಸಿದರು. ಅಂಗನವಾಡಿ ಕೇಂದ್ರಕ್ಕೆ ಪಾಠೋಪಕರಣ, ಪೀಠೋಪಕರಣ ಮತ್ತು ತಕ್ಕಡಿ ಖರೀದಿಗೆ ಅನುಮೋದನೆ ನೀಡಿದರು.
ಹೆಣ್ಣುಮಕ್ಕಳಿಗೆ ತೊಂದರೆ: ಚಿಕ್ಕಮಾಲೂರು 8 ಹಳ್ಳಿ ಹೊಂದಿರುವ ಕೇಂದ್ರ ಸ್ಥಾನ. ಇಲ್ಲಿಗೆ  ಆರೋಗ್ಯ ಇಲಾಖೆ ನರ್ಸ್ ಬರುತ್ತಿಲ್ಲ. ಇದರಿಂದ ಹೆಣ್ಣುಮಕ್ಕಳಿಗೆ ತುಂಬಾ ತೊಂದರೆಯಾಗಿದೆ ಎಂದು ಮಂಜುಳಾ ಅವರು ಆರೋಗ್ಯ ಅಧಿಕಾರಿ ಪ್ರಶ್ನಿಸಿ, ಅತಿ ಶೀಘ್ರ ನರ್ಸ್ ನಿಯೋಜನೆ ಮಾಡುವುದಾಗಿ, ಕೊಟಗಾರ್ಲಹಳ್ಳಿ, ಡಿವಿಹಳ್ಳಿಯಲ್ಲಿ ನರ್ಸ್ ಇಲ್ಲ ಎಂದಾಗ ನಿಯೋಜನೇ ಮೇರೆಗೆ ನರ್ಸ್ ಕಳಿಸುವ ವ್ಯವಸ್ಥೆ ಮಾಡುವುದಾಗಿ ಆರೋಗ್ಯ ಅಧಿಕಾರಿ ಸಭೆಗೆ ತಿಳಿಸಿದರು. ಶಿಕ್ಷಣ, ಕೃಷಿ, ಪಶು ಸಂಗೋಪನಾ, ಜಲಾನಯನ, ಜಿ.ಪಂ. ಬೆಸ್ಕಾಂ, ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಅಧಿಕಾರಿಗಳು ಅಂಥವರ ಬಗ್ಗೆ ಎಚ್ಚರ ವಹಿಸಿ ಅರ್ಹ ಫಲಾನುಭವಿಗಳಿಗೆ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ವಿತರಿಸಬೇಕು ಎಂದು ಸದಸ್ಯ ಜಯಣ್ಣ ಎಚ್ಚರಿಸಿದರು. ತಾ.ಪಂ.ಸೇರಿದ ಅಂಗಡಿ ಮಳಿಗೆಗಳ ಬಾಡಿಗೆ ಬಾಕಿ ಹಣ 5 ಲಕ್ಷ ರು. ಇದ್ದು ಎಷ್ಟು ವಸೂಲಿ ಮಾಡಿದ್ದೀರಾ ಎಂದು ಇಓ ಅವರನ್ನು ಪ್ರಶ್ನಿಸಿದಾಗ, 90 ಸಾವಿರ ರು.ವಸೂಲಿ ಮಾಡಲಾಗಿದೆ ಎಂದರು. ಈಗ 15 ವರ್ಷಗಳಿಂದ ಅಂಗಡಿಗಳಿಗೆ ಟೆಂಡರ್ ಕರೆದಿಲ್ಲ. ಬಾಡಿಗೆ ಕೂಡ ಸರಿಯಾಗಿ ಕಟ್ಟಲ್ಲ. ಹಾಗಾಗಿ ರೀ ಟೆಂಡರ್ ಕರೆದು ಅರ್ಹರಿಗೆ ಅಂಗಡಿ
ಬಾಡಿಗೆ ನೀಡುವಂತೆ ಸದಸ್ಯರು ಒಕ್ಕೂರಲಿನಿಂದ ಇಓ ಅವರನ್ನು ಒತ್ತಾಯಿಸಿದರು. ಸದಸ್ಯರು ಸ್ಥಳಕ್ಕೆ ಆಗಮಿಸಿ ಅಂಗಡಿ ಖಾಲಿ ಮಾಡಿಸಲು ಸಹಕರಿಸುವಂತೆ ಇಓ ಮನವಿ ಮಾಡಿದರು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದು ವಿತರಿಸಿ ಎಂದು ಸದಸ್ಯ ಜಯಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಇಓ ಮಹಾಲಿಂಗಯ್ಯ ಸ್ವಾಗತಿಸಿ ವಂದಿಸಿದರು.
ಅಧಿಕಾರಿ ತರಾಟೆಗೆ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್ ವಾರ್ಡ್‌ನ್‌ಗಳೇ ಅಧಿಕಾರಿಗಳಾಗಿದ್ದಾರೆ.ಅಧಿಕಾರಿಯಾಗಿ ನೀವು ಏನು ಮಾಡುತ್ತಿದ್ದೀರಾ ಎಂದು ಸದಸ್ಯೆ ಮಂಜುಳಾ, ನರಸಿಂಹರಾಜು, ಜಯಣ್ಣ  ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಿಸಿಎಂ ಹಾಸ್ಟೆಲ್‌ನಲ್ಲಿ ಸದಸ್ಯರು ಹೇಳಿದ ಬಡ ವಿದ್ಯಾರ್ಥಿಗೆ ಊಟ ಕೊಡಲಿಲ್ಲ ಎಂದಾದರೆ ನಮ್ಮ ಪಂಚಾಯಿತಿ ವತಿಯಿಂದ ಅನುದಾನ ಏಕೆ ಕೊಡಬೇಕು ಎಂದು ಸದಸ್ಯ ನರಸಿಂರಾಜು ಅಧಿಕಾರಿ ವಿರುದ್ಧ ಹರಿಹಾಯ್ದಾಗ ಇಓ ಮಧ್ಯಪ್ರವೇಶಿಸಿ ಈ ವಿದ್ಯಾರ್ಥಿ ಸೇರಿಸಿ ಊಟ ಕೊಡುತ್ತಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.