ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ
ಕ.ಪ್ರ. ವಾರ್ತೆ , ತುಮಕೂರು , ಫೆ 7
ಬಿಜೆಪಿ ರೈತ ಮೋರ್ಚಾದಿಂದ ಹತ್ತು ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೇಲ್ವೆ ಸ್ಟೇಷನ್ ಮುಂಭಾಗ ಧರಣಿ ನಡೆಸಲಾಯಿತು.
ಪ್ರೊ. ಎಂ.ಎಸ್. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ರೈತರ ರಾಷ್ಟ್ರೀಯ ಸಮತಿಯು ಐದು ವರದಿಗಳನ್ನು ಸಲ್ಲಿಸಿದ್ದು ಮೊದಲ ನಾಲ್ಕು ವರದಿಗಳಿಗೆ ಪೂರಕವಾಗಿ ಕೊನೆಯ ವರದಿಯು ರೈತರ ಸಂಕಷ್ಟಗಳ ಹಾಗೂ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಲ್ಲದೆ ರಾಷ್ಟ್ರೀಯ ಪಾಲಿಸಿಯನ್ನು ರೈತರಿಗಾಗಿ ಶಿಪಾರಸು ಮಾಡಿದೆ. ಈ ಆಯೋಗದ ವರದಿಯನ್ನು ಈ ಕೂಡಲೇ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರದಲ್ಲಿ ಕರ್ನಾಟಕ ಎರಡನೇ ಅತಿಹೆಚ್ಚು ಕಬ್ಬು ಬೆಳೆಯುವ ರಾಜ್ಯವಾಗಿದೆ. ಕಾರ್ಖಾನೆಗಳ ಮಾಲೀಕರ ದಬ್ಬಾಳಿಕೆ ಕಬ್ಬು ಬೆಳೆಗಾರರ ಮೇಲೆ ನಿರಂತರವಾಗಿ ಹೆಚ್ಚುತ್ತದೆ. ಉತ್ಪಾದನೆ ವೆಚ್ಚ ನಿರಂತರವಾಗಿ
ಮೇಲೇರುತ್ತಾ ಧಾರಣೆ ಕುಸಿಯುತ್ತಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರ ರೈತರಿಗೆ ಸರಿಯಾದ ಸಮಯದಲ್ಲಿ ಕಬ್ಬು ಕಟಾವು ಮಾಡಲು ಅನುಮತಿ ನೀಡುತ್ತಿಲ್ಲ. ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿಗೆ ರೈತರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡುತ್ತಿಲ್ಲ. ಸಹ ಉತ್ಪಾದನೆಗಳಾದ ಎಥನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಲು ವಿಫಲವಾಗಿದೆ ಎಂದಿದ್ದಾರೆ.
ಅನುಮತಿ ಪಡೆತಿತ್ತು: ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವಿದ್ದಾಗ, ರೈತರ ಹಿತ ದೃಷ್ಟಿಯಿಂದ ಕೇಂದ್ರದ ಮೇಲೆ ಒತ್ತಡ ತಂದು, ಸರ್ಕಾರಿ ಸ್ವಾಮ್ಯದ ಬಸ್ಸುಗಳ ಇಂಧನದಲ್ಲಿ 5 ಎಥನಾಲ್ ಬಳಕೆ ಮಾಡಲು ಅನುಮತಿ ಪಡೆದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕೂಡಲೇ ಕಬ್ಬು ಬೆಳೆಗಾರರು ಮೂಲ ಸಮಸ್ಯೆಗೆ ಸ್ಪಂದಿಸಬೇಕು. ತಕ್ಷಣದಲ್ಲಿ ಪ್ರತಿ ಟನ್ ಕಬ್ಬಿಗೆ 3 ಸಾವಿರ ರು. ಸಿಗುವಂತೆ ನಿರ್ಣಯಿಸಬೇಕು. ರಾಜ್ಯ ಸರ್ಕಾರ ಸುಮಾರು 85 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ಈ ಘೋಷಣೆಗೆ ಸರಿಯಾಗಿ ಮಾನದಂಡ ಇರುವುದಿಲ್ಲ. ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲ್ಪಟ್ಟ ತಾಲೂಕಿನಲ್ಲಿ ಪಂಚಾಯ್ತಿ ಮತ್ತು ಹೋಬಳಿಗಳನ್ನು ಆಯ್ಕೆ ಮಾಡಿಕೊಂಡು ಕೇವಲ ರಾಜಕೀಯ ಹಿತದೃಷ್ಟಿಯಿಂದ ಘೋಷಿಸಲ್ಪಟ್ಟಿದೆ. ಇದೂವರೆಗೂ ಇದರ ಅಡಿಯಲ್ಲಿ ರೈತರಿಗೆ ಸರಿಯಾದ ಪರಿಹಾರ ಸಿಗಲೇ ಇಲ್ಲ. ಈ ತಕ್ಷಣದಲ್ಲಿ ರಾಜ್ಯ ಸರ್ಕಾರವು ಮಹಾರಾಷ್ಟ್ರ ರಾಜ್ಯದ ವಿದರ್ಭ ಮಾದರಿಯಲ್ಲಿ ಪರಿಹಾರ ಕೈಗೊಳ್ಳಬೇಕು ಎಂದರು.
ಬಿಜಾಪುರ ಜಿಲ್ಲೆಯಲ್ಲಿ ಅತ್ಯಂತ ಹೇರಳವಾಗಿ ತೊಗರಿ ಬೆಳೆಯನ್ನು ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೊಗರಿ ಮಂಡಳಿಯಿಂದ ರೈತರ ತೊಗರಿಯನ್ನು ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ವಿಜಾಪುರ ಜಿಲ್ಲೆಯ ಸಿಂಧಗಿ, ಇಂಡಿ, ಬ.ಬಾಗೇವಾಡಿ, ಮುದ್ದೆಬಿಹಾಳ, ಬಿಜಾಪುರದಲ್ಲಿ ತೆರೆಯಲಾಗಿದ್ದು, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಖರೀದಿ ಪ್ರಾರಂಭಿಸಿದ್ದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಲಿದೆ ಎಂದರು.
ಆಕ್ರೋಶ: ರಾಜ್ಯ ಸರ್ಕಾರ ರಾಯದುರ್ಗ - ತುಮಕೂರು, ದಾವಣಗೆರೆ ತುಮಕೂರು ರೇಲ್ವೆ ಮಾರ್ಗಗಳಿಗೆ ರೈತರ ಭೂಸ್ವಾಧೀನ ಮಾಡುವ ಕ್ರಮದಲ್ಲಿ ರೈತರ ಜಮೀನಿಗೆ ಸ್ಥಳೀಯ ಮಾರುಕಟ್ಟೆ ದರವನ್ನ ನಿಗದಿಪಡಿಸಲು ಈ ಭಾಗದ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು ರೈತರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ತಕ್ಷಣ ಸರ್ಕಾರ ರೈತರೊಂದಿಗೆ ಚರ್ಚಿಸಿ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಸ್. ಶಿವಪ್ರಸಾದ್, ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ, ರೈತಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ, ರಾಜ್ಯ ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಮಂಗಳಗೌರಮ್ಮ, ಬಿ.ಜಯರಾಜ್, ಬೋರೇಗೌಡ, ಬಿ.ಕೆ.ಮಂಜುನಾಥ್, ಚಂದ್ರನಾಯ್ಕ, ಲಕ್ಷ್ಮೀಶ್, ಕೆ.ಪಿ.ಮಹೇಶ್, ನಂದೀಶ್ (ಸ್ನೇಕ್), ತಿಮ್ಮಜ್ಜ, ಸುಜಾತ ಚಂದ್ರಶೇಖರ್, ಪ್ರೇಮಾಹೆಗಡೆ, ಹಾಗೂ ಎಲ್ಲಾ ಮಂಡಲದ ರೈತಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

