ನೆಪ ಮಾತ್ರಕ್ಕೆ ಕನ್ನಡ, ವ್ಯಾಪಾರಕ್ಕೆ ಇಂಗ್ಲಿಷ್, ಹಣ ಮಾಡುವ ದಂಧೆ
-ಎಸ್.ನಾಗಭೂಷಣ
ನಾಟಕ ರತ್ನ ಡಾ.ಗುಬ್ಬಿ ವೀರಣ್ಣ ವೇದಿಕೆ
ಕನ್ನಡಪ್ರಭವಾರ್ತೆ, ತುರುವೇಕೆರೆ, ಫೆ,10
ಯಾಕೋ ಕನ್ನಡಿಗರಿಗೆ ಇಂಗ್ಲಿಷ್ ವ್ಯಾಹೋಹ ಇನ್ನೂ ಬತ್ತಿಲ್ಲ. ಇದಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಸವಲತ್ತುಗಳನ್ನು ಪಡೆದುಕೊಳ್ಳಲು ಕನ್ನಡ ಶಾಲೆ ತೆರೆಯುವ ನಾಟಕವಾಡುತ್ತಾರೆ. ಆದರೆ ಅದು ಸರ್ಕಾರದ ಲೆಕ್ಕದಲ್ಲಿ ಮಾತ್ರ. ನೆಪ ಮಾತ್ರಕ್ಕೆ ಕನ್ನಡ ಎನ್ನುವ ಶಿಕ್ಷಣ ಸಂಸ್ಥೆಗಳು ಯಾರದೇ ಎಗ್ಗಿಲ್ಲದೇ ಇಂಗ್ಲಿಷ್ ಶಾಲೆಯನ್ನು ಪ್ರಾರಂಭಿಸಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಇದನ್ನು ತಡೆಯುವ ಶಕ್ತಿಯೂ ಯಾವ ಸರ್ಕಾರಗಳಿಗೂ ಬಂದಿಲ್ಲದಿರುವುದು ವಿಷಾದನೀಯ ಎಂದು ಜಿಲ್ಲಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ. ದೊಡ್ಡರಂಗೇಗೌಡ ಹೇಳಿದರು.
ಪಟ್ಟಣದಲ್ಲಿ ನಡೆದ 10 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅಲಂಕರಿಸಿ ಅವರು ಮಾತನಾಡುತ್ತಿದ್ದರು. ಕನ್ನಡವನ್ನು ಪ್ರೀತಿಸುವ ಮನಸ್ಸು ಎಲ್ಲಾ ಕನ್ನಡಿಗರಲ್ಲಿ ಮೂಡಬೇಕು. ಕೇವಲ ಸಾಹಿತಿಗಳು ಕನ್ನಡ ಸಾಹಿತ್ಯಗಳನ್ನು ಬರೆದರೆ ಸಾಲದು. ಜನರು ಅದನ್ನು ಓದಿ ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಇಂಗ್ಲಿಷ್ ವ್ಯಾಮೋಹವನ್ನು ದೂರ ಮಾಡಬೇಕು. ಇಂಗ್ಲೀಷ್ ಕಲಿತರೆ ಮಾತ್ರ ಮುಂದೆ ಭವಿಷ್ಯ ಇದೆ ಎಂಬ ಭ್ರಮೆಯನ್ನು ಜನರೂ ಕೈಬಿಡಬೇಕು. ಜನರ ಭಾವನೆಯನ್ನು ದೂರ ಮಾಡಲು ಸರ್ಕಾರಗಳೂ ಶ್ರಮಿಸಬೇಕು. ಕನ್ನಡ ಕಲಿತವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಪ್ರಸ್ತಾಪವನ್ನು ಮುಂದಿಡಬೇಕು. ಹಾಗಾದಾಗ ಮಾತ್ರ ಜನರಿಗೂ ಕನ್ನಡದ ವ್ಯಾಮೋಹ ಬರಲು ಸಾಧ್ಯವಾಗಲಿದೆ ಎಂದರು.
ಸಂಸ್ಕೃತಿ ಕೊಚ್ಚಿಹೋಗುತ್ತಿದೆ
ಈ ಜಾಗತೀಕರಣದ
ಪ್ರಭಾವದಿಂದ ರಾಜ್ಯದ ಸಂಸ್ಕೃತಿ ಗಾಳಿಯಲ್ಲಿ ಕೊಚ್ಚಿ ಹೋಗುತ್ತಿದೆ. ಓ ಕನ್ನಡಿಗರೇ ನಿಮ್ಮ ನಿಲುವುಗಳನ್ನು ಒಮ್ಮೆ ಪರಾಮರ್ಶಿಸಿ, ಮೊದಲು ನಿಮಗೆ ನಿಮ್ಮ ಅಮ್ಮ ಬೇಕೋ, ನಿಮ್ಮ ಮನೆಯ ಪಕ್ಕದ ಚಿಕ್ಕಮ್ಮ ಬೇಕೋ ಎಂದು. ಕೇವಲ ಇಂಗ್ಲಿಷ್ ಮಾತ್ರವೇ ಜೀವನ ಕೊಡಲು ಸಾಧ್ಯವೇ. ಹಾಗಾದರೆ ಈ ವಿಶ್ವದಲ್ಲಿ ಕನ್ನಡಕ್ಕೆ ಕಿಮ್ಮತ್ತಿಲ್ಲವೇ. ಕನ್ನಡ ಅಭ್ಯಾಸ ಮಾಡುವುದರಿಂದ ಜೀವಕ್ಕೆ ಅಪಾಯವೇ, ಹೆತ್ತಮ್ಮನನ್ನು ಕಾಲ ಕಸಕ್ಕಿಂತ ಕೀಳಾಗಿ ನೋಡುವ ಕೀಳು ಮನೋಭಾವ ನಿಮ್ಮದಾಗದಿರಲಿ ಎಂದು ಸಾಹಿತಿ ಡಾ. ದೊಡ್ಡರಂಗೇಗೌಡ ಹೇಳಿದರು.
ಸ್ಮರಣ ಸಂಚಿಕೆ ಬಿಡುಗಡೆ
ಕೆಂಡ ಸಂಪಿಗೆ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ರಾಜ್ಯ ಸಭಾ ಸದಸ್ಯೆ ಜಯಶ್ರೀ ಮಾತನಾಡಿ ಕನ್ನಡ ಎಂದಿಗೂ ಸಾಯೋಲ್ಲ. ಬದುಕುತ್ತದೆ. ಕನ್ನಡಾಂಭೆಯನ್ನು ಸಾಕುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕನ್ನಡಿಗರು ಮನಸ್ಸು ಮಾಡಿದರೆ ಕನ್ನಡ ಭಾಷೆ ಇನ್ನೂ ಸಾವಿರಾರು ವರ್ಷಗಳು ಬಾಳಿ ಬದುಕುತ್ತದೆ ಎಂದರು. ಕನ್ನಡಾಭಿಮಾನಿಗಳ ಒತ್ತಾಯಕ್ಕೆ ಮಣಿದ ಜಯಶ್ರೀಯವರು ತಮ್ಮ ಕಂಚಿನ ಕಂಠದಿಂದ ಶರಣು ಶರಣು ಎಂಬ ಭಾವಗೀತೆಯನ್ನು ಹಾಡಿ ರಂಜಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ, ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ನಿಕಟ ಪೂರ್ವ ಅಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು. ಸಮ್ಮೇಳನಾ ಸಂಚಾಲಕ ಕೊಂಡಜ್ಜಿ ವಿಶ್ವನಾಥ್, ಬಿಜೆಪಿ ಮುಖಂಡ ಮಸಾಲಾ ಜಯರಾಂ, ಕಡೇಹಳ್ಳಿ ಸಿದ್ದೇಗೌಡ ಹಿರಿಯ ಕಾಂಗ್ರೆಸ್ ಮುಖಂಡ ಚೌದ್ರಿ ರಂಗಪ್ಪ, ಎಪಿಎಂಸಿ ಅಧ್ಯಕ್ಷ ಮಂಗೀಕುಪ್ಪೆ ಬಸವರಾಜು ಮೊದಲಾದವರು ಇದ್ದರು.
ನ್ಯಾಯ ದೊರಕಿಸಿ ಕೊಡಬೇಕು: ಹಾಲಂಬಿ
ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಕನ್ನಡ ಸಾಹಿತ್ಯದ ಪ್ರಚಾರದ ಸಾಧನವಾಗದೇ ಆಯಾ ಪ್ರಾಂತ್ಯಗಳಲ್ಲಿ ಹುದಿಗಿರುವ ಸಮಸ್ಯೆಗಳನ್ನು ಹೆಕ್ಕಿ ತೆಗೆದು ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಸಮ್ಮೇಳನವಾಗಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು. ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಸರ್ಕಾರಗಳು ಕನ್ನಡ ಭಾಷಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಶೇಕಡಾ 50 ರಷ್ಟು ಉದ್ಯೋಗ ನೀಡುವ ಖಾತರಿ ನೀಡಬೇಕು. ಆಗ ಮಾತ್ರ ಜನರಲ್ಲಿ ಭಾಷಾಭಿಮಾನ ಬಂದು ತಮ್ಮ ಜೀವನವೂ ಭಧ್ರತೆ ಕಾಣಲಿದೆ ಎಂದರು.
ಸಮ್ಮಳನಾಧ್ಯಕ್ಷರ ಮೆರವಣಿಗೆ
ಸಮ್ಮಳನಾಧ್ಯಕ್ಷರ ಮೆರವಣಿಗೆ ವೇಳೆ ಸಮ್ಮೇಳನಾಧ್ಯಕ್ಷರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕಲಾ ಸಮಿತಿಯ ಅಧ್ಯಕ್ಷ ಟಿ.ಎಸ್. ಬೋರೇಗೌಡ ಹಾಗೂ ಕಾರ್ಯದರ್ಶಿ ಅಮಾನಿಕೆರೆ ಮಂಜುನಾಥ್ ಅವರ ನೇತೃತ್ವದಲ್ಲಿ ನಗಾರಿ ವಾದ್ಯ, ನಾದಸ್ವರ, ಚಿಟ್ಟಿ ಮೇಳ, ವೀರಗಾಸೆ, ಲಿಂಗದ ವೀರರ ಕುಣಿತ, ಸೋಮನಕುಣಿತ, ತಮಟೆ ಮಾದನ, ಕಹಳೆ, ನಾಸಿಕ್ ಡೋಲ್, ಕೋಲಾಟ, ಭಾಗವಂತಿಕೆ, ಚೌಡಿಕೆ, ಯಕ್ಷಗಾನ ಮೇಳ, ಸಾಹಿತಗಳ ಸ್ತಬ್ಧ ಚಿತ್ರಗಳ ಪ್ರದರ್ಶನ ಹಾಗೂ ಇತರೆ ವಿವಿಧ ಕಲಾವಿದರಿಂದ ವಿವಿಧ ಛದ್ಮ ವೇಷಗಳನ್ನು ಏರ್ಪಡಿಸಲಾಗಿತ್ತು. ಟಿ.ಹೆಚ್.ಸುರೇಶ್ ಹಾಗೂ ಮಲ್ಲಿಕಾರ್ಜುನ್ ಕೆಂಕರೆ ತಂಡದಿಂದ ಕಾವ್ಯ-ಸುಗಮ ಸಂಗೀತ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಸಹ ನೀಡಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಸವರಾಜು ಹಾಗೂ ಮಂಜುನಾಥ್ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಸಾವಿರಾರು ಮಂದಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಗಿತ್ತು.
ಪುಸ್ತಕ ಮಳಿಗೆ
ಹಲವಾರು ಪುಸ್ತಕ ಮಳಿಗೆಗಳು, ನೊಣವಿನಕೆರೆ ಆಯುರ್ವೇದ ಆಸ್ಪತ್ರೆಯ ಸೇವಾ ಚಟುವಟಿಕೆ ಕುರಿತಾದ ಪ್ರದರ್ಶನ ಮೆಚ್ಚುಗೆ ಗಳಿಸಿತು. 2 ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೆಳಗ್ಗೆ 8 ಕ್ಕೆ ರಾಷ್ಟ್ರಧ್ವಜಾರೋಹಣ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ನಾಡಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು. ಭಾಸ್ಕರಾಚಾರ್ ಪರಿಷತ್ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಆಕಾಶವಾಣಿ ಕಲಾವಿದೆ ಲೀಲಾವತಿ ಗಿಡ್ಡಯ್ಯ ಪ್ರಾರ್ಥಿಸಿದರು. ತಾಲೂಕು ಕಸಾಪ ಅಧ್ಯಕ್ಷ ದೇವರಾಜು ಸ್ವಾಗತಿಸಿದರು. ಭಾನುಮತಿ ನಿರೂಪಿಸಿದರು. ಖಜಾಂಚಿ ಬಿ.ಎಸ್.ದೇವರಾಜು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

