ತುಮಕೂರು

'ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ'

Published On :

ತುಮಕೂರು: ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಲಕ್ ಪಾರ್ಕ್ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಆರ್. ರಾಘವೇಂದ್ರ ಅಭಿಪ್ರಾಯಪಟ್ಟರು. ಅವರು ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ ಬಡಾವಣೆಯಲ್ಲಿ ಏರ್ಪಾಟಾಗಿದ್ದ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯೊಂದರಿಂದಲೇ ಸಾಧ್ಯವಿಲ್ಲ. ಪೊಲೀಸರೊಂದಿಗೆ ಸಾರ್ವಜನಿಕರೂ ಸಹಕರಿಸಬೇಕು. ಆಗ ಮಾತ್ರ ಅಪರಾಧ ಮುಕ್ತ ಸಮಾಜ ಸಾಧ್ಯ ಎಂದರು.
ಜಯನಗರ ಬಡಾವಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹಗಲು, ರಾತ್ರಿ ಗಸ್ತಿಗೆ ನಿಯೋಜಿಸಲಾಗುವುದು. ಅಗತ್ಯವಿದ್ದೆಡೆ ಅಲ್ಲಲ್ಲಿ, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು. ಪ್ರಮುಖ ವೃತ್ತಗಳಲ್ಲಿ ನಗರಪಾಲಿಕೆ ವತಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹೊಸ ಬಡಾವಣೆ ಪೊಲೀಸ್ ಠಾಣೆ ಎಸ್‌ಐ ಅಮರೇಶ್‌ಗೌಡ ಮಾತನಾಡಿ, ನಾಗರಿಕರು ಊರಿಗೆ ಹೋಗುವ ಸಂದರ್ಭದಲ್ಲಿ ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಬೇಕು. ಸಾಧ್ಯವಾದಲ್ಲಿ ಸಂಬಂಧಿಕರೊಬ್ಬರನ್ನು ಮನೆಯಲ್ಲಿ ಇರುವಂತೆ ಏರ್ಪಾಟು ಮಾಡಬೇಕು. ಇಲ್ಲದಿದ್ದಲ್ಲಿ, ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಸದಾ ಎಚ್ಚರ ಅಗತ್ಯ: ಮಹಿಳೆಯರು ರಸ್ತೆಯಲ್ಲಿ ಓಡಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ನಿಂತಿರುವಾಗ ಅವರ ಗಮನವನ್ನು ಬೇರೆಡೆ ಸೆಳೆದು ಅವರ ಬಳಿಯಿರುವ ಒಡವೆ ಹಾಗೂ ಹಣವನ್ನು ದೋಚುವ ಸಾಧ್ಯತೆಯಿರುತ್ತದೆ. ಆದ್ದರಿಂದ ಮನೆಯಿಂದ ಹೊರಗೆ ಬಂದ ಮೇಲೆ ಸದಾ ಎಚ್ಚರಿಕೆಯಿಂದಿರಬೇಕು. ಜತೆಗೆ ಚಿನ್ನದ ಒಡವೆಗಳನ್ನು ಪಾಲಿಷ್ ಮಾಡಿಕೊಡುವ ನೆಪದಲ್ಲಿ ವಂಚಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಮನೆ ಬಳಿ ಚಿನ್ನದ ಒಡವೆ ಪಾಲಿಷ್ ಮಾಡುವ ಮಂದಿ ಬಂದಲ್ಲಿ ಅವರಿಗೆ  ಒಡವೆಗಳನ್ನು ಕೊಡಬಾರದು ಎಂದು ಮನವಿ ಮಾಡಿದರು. ಜನಸಂಪರ್ಕ ಸಭೆಯಲ್ಲಿ ಎಎಸ್‌ಐ ನಾಗರಾಜು, ಅನಂತನಾರಾಯಣ್, ಲಕ್ಷ್ಮಮ್ಮ, ಶ್ರೀನಿವಾಸ್, ಜಯನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಾಸಪ್ಪ, ಪ್ರಧಾನ ಕಾರ್ಯದರ್ಶಿ ವೀರಪ್ಪ ದೇವರು, ಮಹೇಶ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.