ತುಮಕೂರು

ಕುದುರೆಮುಖಕ್ಕೆ ಖಾಸಗಿ ಲಾಬಿ ಮಂಗಳಾರತಿ!

Published On :

ಚಿಕ್ಕನಾಯಕನಹಳ್ಳಿ: ಕುದುರೆಮುಖ ಅದಿರು ಕಂಪನಿ ಇತಿಹಾಸದ ಪುಟ ಸೇರಿದ್ದು ಹಳೆಯ ವಿಚಾರ. ಅಲ್ಲಿನ ನೌಕರರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ತಾಲೂಕಿನ ಮೂಡಲಗುಡ್ಡದಲ್ಲಿ ಕುದುರೆಮುಖ ಅದಿರು ಕಂಪನಿ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಜನಪ್ರತಿನಿಧಿಗಳ ಹಾಗೂ ಖಾಸಗಿ ಗಣಿಗಾರಿಕೆ ಲಾಬಿ ಹಿತಾಸಕ್ತಿಯಿಂದಾಗಿ ಜ.31ಕ್ಕೆ ಇಲ್ಲಿನ ಕುದುರೆಮುಖವೂ ಮರೆಯಾಗಿದೆ.
ನಾಲ್ಕು ವರ್ಷದ ಹಿಂದೆ ಕೇಂದ್ರ ಸರ್ಕಾರ ಕುದುರೆಮುಖ ಸಂಸ್ಥೆಗೆ ತಾಲೂಕಿನ ಗಣಿ ಪ್ರದೇಶದಲ್ಲಿ 115.5 ಹೆಕ್ಟೇರ್ ವಿಸ್ತೀರ್ಣದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿತ್ತು. ಗಣಿಗಾರಿಕೆ ನಡೆಸಲು 30 ಮಂದಿ ಕಾರ್ಮಿಕರು ಆರಂಭದಲ್ಲಿ ಇಲ್ಲಿಗೆ ವರ್ಗಾವಣೆಗೊಂಡರು. ಅದರಲ್ಲಿ ಕೆಲವರು ನಿವೃತ್ತಿಯಾಗಿದ್ದರೆ, ಕೆಲವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಉಳಿದವರು ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಕೇಂದ್ರ ಸರ್ಕಾರ ಸ್ವಾಮ್ಯದ ಈ ಕಂಪನಿ ಗಣಿಗಾರಿಕೆ ನಡೆಸಿದರೆ ಉನ್ನತ ಮಟ್ಟದ, ತಂತ್ರಜ್ಞಾನದಿಂದ ಕೂಡಿದ ಉಪಕರಣಗಳನ್ನು ಬಳಸುತ್ತಿತ್ತು. ಅದಿರು ಸಂಸ್ಕರಣೆಯಿಂದ ಬಂದ ಲಾಭಾಂಶವನ್ನು ಗಣಿಗಾರಿಕೆ ನಡೆಯುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸರ ಅಭಿವೃದ್ಧಿಗೆ ಬಳಸುವುದು, ಗಣಿಗಾರಿಕೆಯಿಂದ ನಾಶವಾದ ಅರಣ್ಯ ಸಂಪತ್ತನ್ನು ಮರುಸೃಷ್ಟಿ ಮಾಡುವುದು ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮ ಕೈಗೊಂಡಿತ್ತು.
ಆಡಳಿತ ಕಚೇರಿ ಇತ್ತು: ಅಕ್ರಮ ಗಣಿಗಾರಿಕೆಗೆ ಮಣಿದ ಸರ್ಕಾರ ಈ ಭಾಗದಲ್ಲಿ ಗಣಿಗಾರಿಕೆ ನಡೆಸಲು ಬೇಕಿರುವ ಭೂಮಿ, ಅನುಮತಿ, ಕಂಪನಿ ಹೆಸರಿಗೆ ದಾಖಲಾತಿಗಳ ವರ್ಗಾವಣೆ, ಅರಣ್ಯ, ಗಣಿ ಮತ್ತು ಭೂಮಾಪನ, ಪರಿಸರ ಇಲಾಖೆ ಪರವಾನಗಿಯಂಥ ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸುವ ಉದ್ದೇಶದಿಂದ ಕಂಪನಿ ಇಲ್ಲಿ ತನ್ನ ಆಡಳಿತ ಕಚೇರಿ ತೆರೆದು ಕಾರ್ಯ ನಿರ್ವಹಿಸುತ್ತಿತ್ತು. ಸಿಬ್ಬಂದಿಯನ್ನು ನಿಯೋಜಿಸಲ್ಪಟ್ಟ  ಸಮಯದಲ್ಲಿ ರಾಜ್ಯದಲ್ಲಿ ಗಣಿ ಅಕ್ರಮ ತಾರಕ್ಕೇರಿತ್ತು. ಗಣಿ ಅಕ್ರಮಗಳು ಇಲ್ಲಿಯೂ ಬೆಳಕಿಗೆ ಬಂದ ಕಾರಣ ಗಣಿಗಾರಿಕೆ ಸ್ಥಗಿತಗೊಂಡಿತು. ಗಣಿ ಪ್ರದೇಶದಲ್ಲಿ ಸಿಇಸಿ ತನಿಖಾ ತಂಡಗಳಿಂದ ಪರಿಶೀಲನೆಗಳು ನಡೆಯುತ್ತಿದ್ದುದರಿಂದ ಆರಂಭದಲ್ಲಿಯೇ ಕಂಪನಿಗೆ ಹಿನ್ನೆಡೆಯುಂಟಾಯಿತು. ಸರ್ಕಾರ ಸಿಇಸಿ ವರದಿ ಆಧಾರದ ಮೇಲೆ ಹೊಸದಾಗಿ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಘೋಷಿಸಿದ ಪರಿಣಾಮ ಕಂಪನಿಯ ಗಣಿ ಚಟುವಟಿಕೆ ಮತ್ತೆ ತಟಸ್ಥಗೊಂಡಿತು.
ಕಂಪನಿಗೆ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ನಿರೀಕ್ಷಿತ ಬೆಂಬಲ ನೀಡಲಿಲ್ಲ. ಗಣಿಗಾರಿಕೆ ನಡೆಸುತ್ತಿರುವ ಕುದುರೆಮಖ ಕಂಪನಿಗೆ ಸೂಕ್ತ ಕಾಲಕ್ಕೆ ಸರ್ಕಾರದ ನೆರವು ದಕ್ಕಲಿಲ್ಲ. ಇದರಿಂದಾಗಿ ಕಂಪನಿ ದಿನದಿಂದ ದಿನಕ್ಕೆ ಸೊರಗುತ್ತಾ ತನ್ನ ನಡೆಯನ್ನು ನಿಧಾನಗೊಳಿಸಿತು. ಅಭಿವೃದ್ಧಿ ಕಾರ್ಯ ಕುಂಠಿತಗೊಂಡವು. ಆದಾಯದಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.
ಸಾಮಾಜಿಕ ನೆರವಿಗೆ ಸ್ಪಂದನೆ: ಸಾಮಾಜಿಕ ನೆರವಿಗೆ ಸ್ಪಂದಿಸುತ್ತಿದ್ದ ಕುದುರೆಮುಖ ಕಂಪನಿ ಲಾಭದಲ್ಲಿದ್ದ ಸಂದರ್ಭದಲ್ಲಿ ತನ್ನ ಆದಾಯದ ಸ್ವಲ್ಪ ಅಂಶವನ್ನು ಸಾರ್ವಜನಿಕರ ಹಿತಕ್ಕಾಗಿ ಬಳಸುತ್ತಿತ್ತು. ಗಣಿಗಾರಿಕೆ ನಡೆಸುವ ಗ್ರಾಮಗಳ ಸುತ್ತ ಸಂತ್ರಸ್ತ ಜನರಿಗೆ ನೆರವು ನೀಡುವುದು, ಪರಿಸರ ಅಭಿವೃದ್ಧಿ ಮಾಡುವುದು, ಸಮಾಜದ ದುರ್ಬಲ ವರ್ಗದವರಿಗಾಗಿ ನಡೆಸುವ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಾ ಬಂದಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಉಚಿತ ಆಂಬುಲೆನ್ಸ್, 1 ಲಕ್ಷ ಮೌಲ್ಯದ ಆಕ್ಸಿಜನ್ ಕಂಟೈನರ್ ಕೊಡುಗೆಯಾಗಿ ನೀಡಿತ್ತು.
ಖಾಸಗಿ ಕಂಪನೆಗಳ ಮಸಲತ್ತು: ಇಲ್ಲಿ ಖಾಸಗಿ ಕಂಪನಿಗಳಿಗೆ ತಾಲೂಕಿನ ಗಣಿ ಪ್ರದೇಶದಲ್ಲಿ ಈಗಲೂ ಮಂತ್ರಿ-ಮಹೋದಯರ ಹಿಡಿತದಲ್ಲಿರುವ, ಕೆಲವು ಉತ್ತಮ ಗುಣಮಟ್ಟದ ಅದಿರು ನಿಕ್ಷೇಪ ಹೊಂದಿರುವ ಗಣಿ ಪ್ರದೇಶಗಳಿವೆ. ಇವರೆಲ್ಲರೂ ಸರ್ಕಾರದ ಅನುಮತಿಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತಿದ್ದಾರೆ. ರಾಜ್ಯ ಸರ್ಕಾರದಿಂದ ಗಣಿಗಾರಿಕೆಯ ಅನುಮತಿಗಾಗಿ ಕೇಂದ್ರ ಸರ್ಕಾರದ ಮೇಲೆ ಉನ್ನತ ಮಟ್ಟದಲ್ಲಿ ಒತ್ತಡ ಹಾಕುವ ನಿರಂತರ ಪ್ರಯತ್ನ ನಡೆದಿದೆ. ಸರ್ಕಾರಗಳೂ ಬಂಡವಾಳಶಾಹಿಗಳ ಒತ್ತಡಕ್ಕೆ ಬಲಿಯಾಗಿ ಅನುಮತಿ ನೀಡಲು ತುದಿಗಾಲಲ್ಲಿವೆ. ಆದರೆ ಸಾರ್ವಜನಿಕ ಕಂಪನಿಗೆ ಸಹಕಾರ ನೀಡದೆ ಸಮಾಜಕ್ಕೆ ಉಪಕರಿಸುತ್ತಿದ್ದ ಸರ್ಕಾರಿ ಸ್ವಾಮ್ಯದ ಕಂಪನಿಯ ಕತ್ತು ಹಿಸುಕುವಲ್ಲಿ ಖಾಸಗಿ ಲಾಬಿ ಸಂಪೂರ್ಣ ಯಶಸ್ವಿಯಾಗಿದೆ.


-ಅಣೇಕಟ್ಟೆ ಸಿದ್ದರಾಮಣ್ಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.