ತುಮಕೂರು

ತಿಪಟೂರು ಬರಪ್ರದೇಶ ಘೋಷಣೆಗೆ ಒತ್ತಾಯ

Published On :

ತಿಪಟೂರು:  ತಿಪಟೂರು ತಾಲೂಕನ್ನು ಸರ್ಕಾರ ಈ ಕೂಡಲೆ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಬಿಜೆಪಿ ಮುಖಂಡ ಲೋಕೇಶ್ವರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ತಾಲೂಕಿನಲ್ಲಿ ಮಳೆಯ ಅಭಾವದಿಂದ ಮತ್ತು ತೆಂಗಿನ ಮರಗಳಿಗೆ ಕೀಟ ಬಾಧೆಯಿಂದ ತೆಂಗು ಉತ್ಪನ್ನವಿಲ್ಲದೆ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಅಲ್ಲದೆ ಹೇಮಾವತಿ ನದಿ ನೀರನ್ನು ತಾಲೂಕಿನ ಕೆರೆ ಕಟ್ಟೆಗಳಿಗೆ ಕಾಲು ಭಾಗದಷ್ಟು ತುಂಬಿಸಿಲ್ಲ.
ಜನ ಜಾನುವಾರುಗಳಿಗೆ ಕುಡಿಯುವ ನೀರಲ್ಲದಂತಾಗಿ ಪರಿತಪಿಸಬೇಕಾಗಿದೆ ಎಂದರು.
ನಗರಸಭೆ ನಿರ್ಲಕ್ಷ್ಯ: ನಗರದಲ್ಲಿ ಮೂಲಭೂತ ಸೌಕರ್ಯ ನೀಡಲು ನಗರಸಭೆ ವಿಫಲವಾಗಿದೆ ಎಂದು ಆರೋಪಿಸಿದ ಅವರು ನಗರದ 31 ವಾರ್ಡ್‌ಗಳಲ್ಲಿ ಬೀದಿ ದೀಪದ ಸಮಸ್ಯೆ ಹೆಚ್ಚಾಗಿದ್ದು, ರಾತ್ರಿ ಸಮಯದಲ್ಲಿ ನಾಗರಿಕರು ರಸ್ತೆಗಳಲ್ಲಿ ಓಡಾಡಲು ಸಮಸ್ಯೆ ಉಂಟಾಗಿದೆ. ಅಲ್ಲದೆ ಬೀದಿ ದೀಪ ಇಲ್ಲದೆ ಮನೆ ಕಳ್ಳತನ ಹೆಚ್ಚಾಗಿದೆ. ರಸ್ತೆಗಳು ಅಲ್ಲಲ್ಲಿ ಗುಂಡಿ ಬಿದ್ದಿದ್ದು, ನಗರಸಭೆ ಅತ್ತ ಗಮನಹರಿಸುತ್ತಿಲ್ಲ. ಚರಂಡಿಗಳಲ್ಲಿ ಕಸ ಸೇರಿಕೊಂಡು ಸ್ವಚ್ಛಗೊಳಿಸದೇ ವರ್ಷಗಳೇ ಆಗಿದೆ.  ನೀರಿನ ಪೈಪುಗಳು ಎಲ್ಲೆಂದರಲ್ಲಿ ಒಡೆದು ಹೋಗಿದ್ದು, ನೀರು ಅನ್ಯಾಯವಾಗಿ ವ್ಯರ್ಥವಾಗುತ್ತಿದೆ. ಈ ಎಲ್ಲಾ ಬಗ್ಗೆ ಪೌರಾಯುಕ್ತರು ಮತ್ತು ನಗರಸಭೆ
ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ನಗರದ ಸರ್ಕಾರಿ ಕಚೇರಿಗಳಲ್ಲಿ ಲಂಚ ತಾಂಡವವಾಡುತ್ತಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ಮತ್ತು ರೈತ ವರ್ಗಕ್ಕೆ ಸ್ಪಂದಿಸದೆ ಅಲೆದಾಡಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಕೂಡ ನಿಷ್ಕ್ರಿಯಗೊಂಡಿದೆ. ಶಾಸಕ ಕೆ. ಷಡಕ್ಷರಿಯವರು ಈ ಸಮಸ್ಯೆಗಳ ಬಗ್ಗೆ ತುರ್ತು ಗಮನಹರಿಸಿ ಎಲ್ಲರ ನೆರವಿಗೆ ಬರಬೇಕು ಎಂದು ಲೋಕೇಶ್ವರ ಒತ್ತಾಯಿಸಿದರು.
ಕೆಜೆಪಿ ಕಾರ್ಯಕರ್ತರಿಗೆ ಸ್ಥಾನ ನೀಡಿ: ಬಿಜೆಪಿಯಲ್ಲಿ ಕೆಜೆಪಿ ವಿಲೀನವಾಗಿ ತಿಂಗಳು ಕಳೆದರೂ ಕೆಜೆಪಿ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಬಿಜೆಪಿಗೆ ಬಂದಿರುವ ಕೆಜೆಪಿ ಮುಖಂಡರು, ಕಾರ್ಯಕರ್ತರಿಗೆ ಸೂಕ್ತ ಪ್ರಾತಿನಿಧ್ಯ ಅಗತ್ಯವಾಗಿದ್ದು, ಇದನ್ನು ನೀಡಿದರೆ ಲೋಕಸಭೆಯಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲಲು ಸಹಕಾರಿಯಾಗುತ್ತದೆ ಎಂದು ಬಿಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.
 ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಬಿಜೆಪಿ ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ಕೆಜೆಪಿಯವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಇದರಿಂದ ಬಿಜೆಪಿ ಶಕ್ತಿ ಸಹಜವಾಗಿಯೇ ದುಪ್ಪಟ್ಟಾಗಲಿದೆ. ಇದರಿಂದ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮಾಡಬೇಕೆಂಬ ಕಾರಣದಿಂದ ಬಿಜೆಪಿಗೆ ಬಂದಿರುವ ಬಿ.ಎಸ್.ಯಡಿಯೂರಪ್ಪನವರ ಮತ್ತು ನಮ್ಮೆಲ್ಲರ ಆಸೆ ಈಡೇರಿದಂತಾಗಲಿದೆ. ಈ ಆಸೆ ಈಡೇರಬೇಕೆಂಬ ಏಕೈಕ ಕಾರಣದಿಂದ ಬಿಜೆಪಿಗೆ ಬಂದಿರುವ ಕೆಜೆಪಿ ಮುಖಂಡರು ಮತ್ತು ಕಾರ್ಯಕರ್ತರುಗಳಿಗೆ ಸೂಕ್ತ ಸ್ಥಾನಮಾನ ನೀಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂಬುದು ನನ್ನ ಅಭಿಪ್ರಾಯವಾಗಿದ್ದು, ಇದಕ್ಕಾಗಿ ನಾನು ಈ ಒತ್ತಾಯವನ್ನು ಮಾಡುತ್ತಿದ್ದೇನೆಂದು ಲೋಕೇಶ್ವರ ಸ್ಪಷ್ಪಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಮಾದಿಹಳ್ಳಿ ಪ್ರಕಾಶ್, ನಗರಸಭೆ ಸದಸ್ಯ ನಿಜಗುಣ, ಗಂಗಮ್ಮ, ಯದುನಂದನ್, ಸುಧಾಕರ್, ಬಿಜೆಪಿ ಅಲ್ಪಸಂಖ್ಯಾತರ ಘಟಕದ ಮುಖಂಡ ಮುನ್ನ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.