ತುಮಕೂರು

ಗದ್ದಲದ ಗೂಡಾದ ಪುರಸಭೆ ಸಾಮಾನ್ಯ ಸಭೆ

Published On :

ಕ,ಪ್ರ,ವಾರ್ತೆ , ಚಿಕ್ಕನಾಯಕನಹಳ್ಳಿ , ಫೆ.14
ಪಟ್ಟಣದಲ್ಲಿ ಕುಡಿಯುವ ನೀರಿನ  ಸಮಸ್ಯೆ ಬೆಟ್ಟದಷ್ಟಿದ್ದರೂ ಸದಸ್ಯರು ತಮ್ಮ ಜವಾಬ್ದಾರಿಯನ್ನರಿಯದೆ  ಕ್ಷುಲ್ಲಕ ವಷಯಕ್ಕೆ ಸಭೆಯ ಅಮೂಲ್ಯ ಸಮಯವನ್ನು ಹಾಳುಮಾಡಿತು.
ಪುರಸಭಾಧ್ಯಕ್ಷೆ ಗೀತಾರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ  ಪ್ರಾರಂಭದಲ್ಲಿ ಸದಸ್ಯರಾದ ಸಿ.ಪಿ. ಮಹೇಶ್ ಅವರು ಸ್ಥಾಯಿಸಮಿತಿ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್ ಅವರು ನಾಗರಿಕರೊಬ್ಬರಿಗೆ ಪುರಸಭೆಯ ಆಸ್ತಿಯನ್ನು ಹಾಳುಗೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2.75 ಲಕ್ಷ ರು.ಗಳನ್ನು ದಂಡ ಕಟ್ಟಿಸಿಕೊಳ್ಳಿ ಎಂದು ನೊಟೀಸ್ ನೀಡುವ ಅಧಿಕಾರವನ್ನು ಯಾರು ನೀಡಿದರು ಎಂಬ ಪ್ರಶ್ನೆಯನ್ನೆತ್ತಿದರು. ಸದರಿ ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ್ ಅವರು ನಾನು  ದಂಡ ಕಟ್ಟಿಸಿಕೊಳ್ಳಿ ಎಂದು ನೊಟೀಸ್ ನೀಡಿಲ್ಲ. ನಿಮ್ಮ ವೈಯ್ಯಕ್ತಿಕ ಹಿತಾಸಕ್ತಿಯಿಂದ ಈ ರೀತಿ ಆರೋಪ ಮಾಡುತ್ತಿದ್ದೀರಿ. ನನಗೆ ನನ್ನ ಅಧಿಕಾರದ ಇತಿಮಿತಿಯ ಅರಿವಿದೆ.
ನಾನೊಬ್ಬ ಸಾಮಾನ್ಯ ಸದಸ್ಯನಾಗಿ ಮುಖ್ಯಾಧಿಕಾರಿಗೆ ಪತ್ರಮುಖೇನ ಪುರಸಭೆ ಆಸ್ತಿಯ ಹಾನಿಯ ಬಗ್ಗೆ ತಿಳಿಸಿದ್ದೇನೆ ಎಂದು ಉತ್ತರಿಸಿದರು.
ಈ ಉತ್ತರದಿಂದ ತೃಪ್ತರಾಗದ ಸಿ.ಪಿ. ಮಹೇಶ್ ಅವರು ನೀವು ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದೀರಿ. ಜನಸಾಮಾನ್ಯರು ಮನೆ ಕಟ್ಟಿಕೊಳ್ಳಲು ಕಿರುಕುಳ ನೀಡುವ ಸಲುವಾಗಿ ಈರೀತಿ ನೊಟೀಸ್ ನೀಡಲಾಗಿದೆ ಎಂದು ಏರುಧ್ವನಿಯಲ್ಲಿ ಮಾತನಾಡಿದಾಗ ಆಡಳಿತ ಪಕ್ಷದ ಎಚ್.ಬಿ. ಪ್ರಕಾಶ್ ಮತ್ತು ರಾಜಶೇಖರ್ ತಮ್ಮ ದನಿಗೂಡಿಸಿದರು. ಆಗ ಸಭೆಯಲ್ಲಿ ಸಂಪೂರ್ಣ ಗದ್ದಲವುಂಟಾಗಿ ಯಾರು ಏನು ಮಾತನಾಡುತ್ತಿದ್ದಾರೆಂಬುದೇ ಸಭೆಗೆ ತಿಳಿಯದಂತಾಯಿತು.
ಅವಕಾಶವಿದೆಯೇ: ನಂತರ ಮುಂದುವರೆದ ಚರ್ಚೆಯಲ್ಲಿ ದಂಡದ ವಿಷಯನ್ನು ಕೈಬಿಟ್ಟು, ದೇವಾಲಯದ  ಗೋಡೆ ಕೆಡವಿದ ಮಣ್ಣನ್ನು ಪುರಸಭೆಯ ಟ್ರ್ಯಾಕ್ಟರ್‌ನಲ್ಲಿ ಸಾಗಿಸಲಾಗಿದೆ. ಇದಕ್ಕೆ ಕಾನೂನಿನಲ್ಲಿಲ್ಲ ಅವಕಾಶವಿದೆಯೆ ಎಂಬ ಪ್ರಶ್ನೆಯನ್ನು ಮಹೇಶ್, ರೇಣುಕಮ್ಮನವರು ಸಭೆಯ ಮುಂದಿಟ್ಟರು. ಆಗ ಚಂದ್ರಶೇಖರ್ ಅವರು ಇದು ಸ್ವಾತಂತ್ರ್ಯಾನಂತರದ ಪುರಸಭೆಯ ಕಾಲದಿಂದಲು ನಡೆದು ಬಂದಿದೆ. ಇಷ್ಟಕ್ಕು ಸದರಿ ವಾರ್ಡಿನ. ನಿಮಗಿದು ಗೊತ್ತಿಲ್ಲವೆ ಎಂದು ಚಂದ್ರಶೇಖರ್ ಅಧ್ಯಕ್ಷರನ್ನು ಕೇಳಿದಾಗ ಸ್ವಪಕ್ಷೀಯರೇ ಆದ ಅಧ್ಯಕ್ಷರು ನನಗಿದು ಗೊತ್ತಿಲ್ಲವೆಂದು ಹೇಳಿಕೆ ನೀಡಿದರು. ಇದರಿಂದ ಗಲಿಬಿಲಿಗೊಂಡ ಚಂದ್ರಶೇಖರ್ ನೀವು ಸಂಬಂಧಗಳಿಗೆ ಬೆಲೆ ಕೊಟ್ಟು ವಿರೋಧಿ ಸದಸ್ಯರು ತಮ್ಮ ಸಂಬಂಧಿಕರೆಂದು  ಜಾರಿಕೊಳ್ಳಬೇಡಿ ಎಂದು ಛೇಡಿಸಿದರು. ಆಗ ಕಾಂಗ್ರೆಸ್ ಸದಸ್ಯೆ ರೇಣುಕಮ್ಮ ಸಮಸ್ಯೆಯಿಂದ ಪಾರಾಗಲು ನೀವು ಇಲ್ಲಿ ಸಂಬಂಧದ ಪ್ರಸ್ತಾಪ ಮಾಡಬೇಡಿ, ನಮ್ಮ ಆರೋಪಕ್ಕೆ ಸರಿಯಾದ ಉತ್ತರ ನೀಡಿ ಎಂದು ಆಗ್ರಹಿಸಿದರು. ಆಡಳಿತ ಪಕ್ಷದ ರೇಣುಕಮ್ಮನವರು  ಸದರಿ ವಿಷಯದ ಮೇಲಿನ ಚರ್ಚೆಯಿಂದ ರೋಸಿಹೋಗಿ ಎದ್ದುನಿಂತು ಕಾಂಗ್ರೆಸ್ ಸದಸ್ಯರೆಡೆಗೆ ತೋಳೇರಿಸಿ ಇದೇನು ಸಾಮಾನ್ಯ ಸಭೆಯೋ ಅಥವಾ ಮೀನು ಮಾರುಕಟ್ಟೆಯೋ ಎಂದು ಮಾತಿನ ದಾಳಿ ನಡೆಸಿದರು.
ತಿಳಿಯುತ್ತಿಲ್ಲ: ನಂತರ ಸಿ.ಪಿ.ಮಹೇಶ್ ಅವರು ಪುರಸಭೆಯಲ್ಲಿ ಯಾವ ನೌಕರ ಯಾವ ಕೆಲಸ ಮಾಡುತ್ತಾನೆಂಬುದೇ ತಿಳಿಯುತ್ತಿಲ್ಲ. ಅಧ್ಯಕ್ಷರಿಗೆ ನೌಕರರ ಮೇಲೆ ಹಿಡಿತವಿಲ್ಲ.
  ಆರು ತಿಂಗಳಿಗೊಬ್ಬ, ಮೂರು ತಿಂಗಳಿಗೊಬ್ಬರು ಅಧ್ಯಕ್ಷರಾದರೆ ಪುರಸಭೆಯ ಆಡಳಿತ ಹಾಳಾಗದಿರುತ್ತದೆಯೇ ಎಂದು ಟೀಕಿಸಿದರು. ಅದುವರೆಗೂ
ಗಂಭೀರವಾಗಿ ಕುಳಿತಿದ್ದ ಹಿರಿಯ ಸದಸ್ಯರಾದ ಸಿ.ಎಂ. ರಂಗಸ್ವಾಮಿ ನಾವು  ದಿನಕ್ಕೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆ.
 ಅದು ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ ಇದನ್ನು ಕೇಳಲು ನಿಮಗೇನು ಹಕ್ಕಿದೆ ಎಂದಾಗ ಆಡಳಿತ ಪಕ್ಷದ ಸದಸ್ಯರೆಲ್ಲರು ಅವರ ಮೇಲೆ ಮುಗಿಬಿದ್ದರು.
 ಸಭೆಯಲ್ಲಿ ಮಲ್ಲಿಕಾರ್ಜುನಯ್ಯ, ಟಿಂಬರ್ ಮಲ್ಲೇಶ್, ಎಂ.ಕೆ.ರವಿಚಂದ್ರ, ಮುಖ್ಯಾಧಿಕಾರಿ ಟಿ.ಆರ್. ವೆಂಕಟೇಶ ಶೆಟ್ಟಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.