ತುಮಕೂರು

'ಶಿಕ್ಷೆ ಇಲ್ಲದ ಶಿಕ್ಷಣ ಫಲ ನೀಡದು'

Published On :

ಮಧುಗಿರಿ: ಇಂದಿನ  ಸ್ಪರ್ಧಾತ್ಮಕ ಜಗತ್ತಿನಲ್ಲಿ  ಶಿಕ್ಷೆ ಇಲ್ಲದ ಶಿಕ್ಷಣ ವಿದ್ಯಾರ್ಥಿಗಳಿಗೆ ಫಲ ನೀಡುವುದಿಲ್ಲ ಎಂದು ನಿವೃತ್ತ ಶಿಕ್ಷಕ ಎಚ್.ಡಿ. ದೊಡ್ಡರಾಮಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಸಿದ್ಧಾರ್ಥ ಸನಿವಾಸ ಪ್ರೌಢಶಾಲೆಯಲ್ಲಿ  ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಶುಭ ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳನ್ನು ದಂಡಿಸಿ ಶಿಕ್ಷಣ ಕಲಿಸುವುದು ಅಪರಾಧವಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವಾಗ ಶಿಕ್ಷೆ ಅಗತ್ಯ, ಆದರೆ ಮಕ್ಕಳನ್ನು ದಂಡಿಸಿ ಕಲಿಸುವ ಪರಿಪಾಠ ಇಲ್ಲದಿದ್ದರೆ ಶಿಕ್ಷೆ ಇಲ್ಲದ ಶಿಕ್ಷಣ ಫಲಕಾರಿಯಾಗದು ಎಂದು ವಿಷಾದಿಸಿದ ಅವರು,ಇಂತಹ ಚಿಂತನಾ ಶೀಲಾ ಕ್ರಾಯಕ್ರಮಗಳು ಒಂದು ದಿನ ಒಂದು ಶಾಲೆಗೆ ಸೀಮಿತವಾಗದೇ ಸದಾ ಸಮಾಜಮುಖಿ ವಿಚಾರಧಾರೆಗಳು  ವಿದ್ಯಾವಂತ ಯುವಕರಲ್ಲಿ ಬರಬೇಕು. ಈ ಕಾರ್ಯಕ್ರಮ ರೂಪಿಸಿ ನಮ್ಮನ್ನು ಇಲ್ಲಿಗೆ ಕರೆದು ಗೌರವಿಸಿದ್ದಕ್ಕೆ ನಾವು ಆಭಾರಿ ಎಂದು ಸಂತಸಪಟ್ಟರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ. ಮೂರ್ತಿ ತಾವು ಹೊರ ತಂದಿರುವ ಸ್ನೇಹದೀವಿಗೆ ಸಂಚಿಕೆ ಗಮನಿಸಿದಾಗ ಸಮಾಜಮುಖಿ ಕಾರ್ಯ ಕಲ್ಪನೆ ನಿಮ್ಮಲ್ಲಿದೆ ಎಂದರು.
ಸಂಸತ: ಸಹ ಶಿಕ್ಷಕ ಎಂ.ವಿ. ನಂಜಯ್ಯ ಗುರುವಂದನೆ ಸ್ವೀಕರಿಸಿ ವಿದ್ಯಾರ್ಥಿ ಪ್ರತಿಭಾವಂತನಾದರೆ ಗುರುಗಳಿಗೆ ಸಂತಸ,ದಂಡಿಸಿ ಕಲಿಸುವ ಕಾಲ ದೂರ ಸರಿದಿದ್ದು, ಮಕ್ಕಳಲ್ಲಿ ಪ್ರೀತಿ, ವಿಶ್ವಾಸ ತುಂಬಿ ಶಿಕ್ಷಣ ಕಲಿಸಬೇಕಿದೆ. ಕಲಿತವರು ಇತರರ ಏಳಿಗೆಗೂ ಶ್ರಮಿಸಬೇಕು ಎಂದ ಅವರು, ಇಂದಿನ ರಾಜಕೀಯ ವ್ಯವಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟು ಶಿಕ್ಷಕರಲ್ಲಿ ಭಯದ ವಾತಾವರಣ ಕಾಡುತ್ತಿದೆ. ಶಿಕ್ಷಕರು ಪ್ರಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಮುಂದಾದರೆ ಬದ್ಧತೆಗೆ ಧಕ್ಕೆ ತರುವ ಘಟನೆಗಳು ಎದುರಾಗುತ್ತವೆ ಎಂದು ವಿಷಾದಿಸಿದರು.
ಆತ್ಮವಿಶ್ವಾಸ ತುಂಬಿ: ವಿದ್ಯಾರ್ಥಿ ಎನ್.ಬಿ.ಗಂಗಾಧರ ಪ್ರಾಸ್ತಾವಿಕ ನುಡಿಗಳನ್ನಾಡಿ ಹಳೇ ಗೆಳೆಯರನ್ನು ಒಂದೇ ಕಡೆ ನೋಡುವ ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜಮುಖಿ ಕಾರ್ಯ ಕೈಗೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಲಿದ್ದು, ತಾಲೂಕಿನ ಶಾಲೆಯ ವಿವರ, ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಮತ್ತು ಸ್ನೇಹಿತರ ವಿವರ, ರಕ್ತದ ಗುಂಪು, ಮತ್ತಿತರೆ ಮಾಹಿತಿ ಒಳಗೊಂಡ ಸ್ನೇಹದೀವಿಗೆ ಶೀರ್ಷಿಕೆಯಡಿ ಕಿರು ಹೊತ್ತಿಗೆ ಮುದ್ರಿಸಿ ರಕ್ತದಾನ ಮತ್ತು ನೇತ್ರದಾನ ಮಾಡುವುದರಿಂದ ಜೀವ ಉಳಿಸುವ ಬಗ್ಗೆ ಅರಿವು ಮೂಡಿಸುವ ಯತ್ನ ಮಾಡಲಾಗಿದೆ. ಹಾಗಾಗಿ ಬೆಳೆಯೋಣ - ಬೆರೆಯೋಣ - ಬೆಳಸೋಣ ಕೂಡಿ ಬಾಳೋಣ ಎಂಬ ಘೋಷ ವಾಕ್ಯವೇ ಈ ಶುಭ ಮಿಲನದ ಉದ್ದೇಶ ಎಂದರು.
70ಕ್ಕೂ ಅಧಿಕ ಹಳೇ ವಿದ್ಯಾರ್ಥಿಗಳು ಪಾಲ್ಗೊಂಡು ಪರಸ್ಪರ ಶಾಲಾ ದಿನಗಳನ್ನು ಮೆಲುಕು ಹಾಕಿ ಶುಭ ಕೋರಿದರು. ಶಿಕ್ಷಕ ಕೆ.ವಿ. ಗಂಗಯ್ಯ, ನಂಜುಂಡಪ್ರಸಾದ್, ಹುಲ್ಸಾದ್ ಉನ್ನಿಸಾ, ಕೆ.ಸಿ.ರಂಗನಾಥ್, ಪುಟ್ಟರುದ್ರಪ್ಪ, ಕೆ.ಮುನಿಯಪ್ಪ ಅವರಿಗೆ ಗುರುವಂದನೆ ಸಲ್ಲಿಸಿದರು. ಸತೀಶ್‌ಕುಮಾರ್ ಪ್ರಾರ್ಥಿಸಿ ಜೈನ್ ಸ್ವಾಗತಿಸಿ ಅಜಯ್ ಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.