ಮಹಿಳೆಯಿಂದ ಕಿರುಕುಳ ಖಂಡಿಸಿ ಧರಣಿ
ಕನ್ನಡಪ್ರಭ ವಾರ್ತೆ ಕುಣಿಗಲ್ ಫೆ.18
ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿದ್ದ ನಿವೇಶನ ವಿಷಯದಲ್ಲಿ, ಮಹಿಳೆಯೊಬ್ಬರು ವಿನಾಕಾರಣ ಗ್ರಾಮದ ಯುವಕರ ಮೇಲೆ ವಿವಿಧ ರೀತಿಯ ದೂರು ನೀಡಿ ಕಿರುಕುಳ ನೀಡುತ್ತಿದ್ದು, ಮಹಿಳೆಯ ಶೋಷಣೆಯಿಂದ ಪಾರುಮಾಡುವಂತೆ ಮತ್ತು ಸಾರ್ವಜನಿಕ ನಿವೇಶನ ದಾಖಲೆ ಸರಿಪಡಿಸುವಂತೆ ಆಗ್ರಹಿಸಿ ಕೆಂಪನಹಳ್ಳಿ ಗ್ರಾಮಸ್ಥರು ಮಂಗಳವಾರ ಪೊಲೀಸ್ ಠಾಣೆ ಮತ್ತು ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪೊಲೀಸ್ ಠಾಣೆ ಮುಂಭಾಗದಲ್ಲಿ ಗ್ರಾಮದ ಮುಖಂಡರಾದ ನಾಗರಾಜ, ನಾರಾಯಣ,ಬಸವೇಗೌಡ, ರಂಗಸ್ವಾಮಿ ಇತರರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಘಟಿತರಾಗಿ, ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುಶೀಲಮ್ಮ, ಗ್ರಾಮದ ಮಹಿಳೆಯೊಬ್ಬರು ಸಾರ್ವಜನಿಕ ನಿವೇಶನ ವಿಷಯದಲ್ಲಿ ಗ್ರಾಮದ ಪುರುಷರು, ಯುವಕರ ಮೇಲೆ ಅತ್ಯಾಚಾರ ಯತ್ನ ಸೇರಿದಂತೆ ಮನಬಂದಂತೆ ದೂರು ನೀಡಿ, ಗ್ರಾಮಸ್ಥರ ಶೋಷಣೆ ಮಾಡುತ್ತಿದ್ದಾರೆ. ಈಗಾಗಲೆ ಅತ್ಯಾಚಾರ ಯತ್ನ ದೂರು ನೀಡಿದ ಪ್ರಕರಣ ದಾಖಲಾಗಿ ಗ್ರಾಮಸ್ಥರು, ಯುವಕರು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಪುನಃ ಸೋಮವಾರ ಸಂಜೆ ಗ್ರಾಮದ ಯುವಕರ ಮೇಲೆ ಸುಳ್ಳು ದೂರು ನೀಡಿದ್ದರಿಂದ, ಪೊಲೀಸರು ಗ್ರಾಮಕ್ಕೆ ಆಗಮಿಸಿ ವಿಚಾರಣೆ ನೆಪದಲ್ಲಿ ತೊಂದರೆ ನೀಡಿದ್ದಾರೆ.
ಸ್ಪಂದಿಸುತ್ತಿಲ್ಲ: ಮಹಿಳೆ ನೀಡುವ ದೂರನ್ನು ದಾಖಲಿಸುವ ಪೊಲೀಸರು, ಗ್ರಾಮಸ್ಥರ ದೂರಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರಲ್ಲದೆ, ಮಹಿಳೆಯು ಸಾರ್ವಜನಿಕ ನಿವೇಶನ ಕಬಳಿಸಲು ಗ್ರಾಮಸ್ಥರ ವಿರುದ್ಧ ಸುಳ್ಳು ದೂರು ದಾಖಲಿಸಿ ಕಿರುಕುಳ ನೀಡುತ್ತಿದ್ದು, ಸ್ಥಳೀಯ ಪೊಲೀಸರು ಸ್ಪಂದಿಸದಿದ್ದಲ್ಲಿ ನೇರವಾಗಿ ಎಸ್ಪಿ ಕಚೇರಿಗೆ ಭೇಟಿ ನೀಡಿ ಗ್ರಾಮದ ಯುವಕರನ್ನು ಸುಳ್ಳು ದೂರಿನ ಮೇಲೆ ಬಂಧಿಸುವಂತೆ ಒತ್ತಡ ತರುತ್ತಾ, ಗ್ರಾಮದಲ್ಲಿ ಅಶಾಂತವಾತವರಣಕ್ಕೆ ಕಾರಣವಾಗಿದ್ದಾರೆ. ಮಹಿಳೆಯ ಕಿರುಕುಳದಿಂದ ಗ್ರಾಮದ ಪುರುಷರು, ಯುವಕರನ್ನು ರಕ್ಷಿಸುವಂತೆ ಆಗ್ರಹಿಸಿದರು. ಡಿವೈಎಸ್ಪಿ ಗಣೇಶ್, ಸಿಪಿಐ ಧರ್ಮೇಂದ್ರ, ಪಿಎಸೈ ಗುರುಪ್ರಸಾದ್, ಗ್ರಾಮಸ್ಥರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ, ಪ್ರತಿಭಟನೆ ಅಂತ್ಯಗೊಳಿಸಿ, ಸಮೀಪದ ತಾಲೂಕು ಕಚೇರಿ ಮುಂಭಾಗದಲ್ಲಿ ನಿವೇಶನ ದಾಖಲೆ ಸರಿಪಡಿಸುವಂತೆ ಧರಣಿ ಪ್ರಾರಂಭಿಸಿದರು.
ಧರಣಿ ನಿರತರನ್ನು ಕುರಿತು ಮಾತನಾಡಿದ ಮುಖಂಡ ನಾರಾಯಣ, ಕೆಂಪನಹಳ್ಳಿಗ್ರಾಮದ ಹೃದಯಭಾಗದ ಮೂರುಗುಂಟೆ ಜಮೀನು 45 ವರ್ಷದ ಹಿಂದೆಯೆ ಮುಸ್ಲಿಂ ವ್ಯಕ್ತಿಯೊಬ್ಬರಿಂದ ಗ್ರಾಪಂ ಖರೀದಿಸಿ, 2008ರಲ್ಲಿ ಸದರಿ ಜಾಗವನ್ನು ವಿನಾಯಕ ದೇವಾಲಯಕ್ಕಾಗಿ ಗ್ರಾಮದ ವಿನಾಯಕ ಕನ್ನಡ ಯುವಕರ ಸಂಘಕ್ಕೆ ನೀಡಿದ್ದಾರೆ. ಈಗ ಸದರಿಜಾಗವನ್ನು ವ್ಯಕ್ತಿಯೊಬ್ಬರು ಅತಿಕ್ರಮಿಸಿ, ತಮ್ಮ ತಾತನ ಜಾಗವೆಂದು ಮೊಂಡುವಾದ ಮಾಡುತ್ತಾ ಅವರ ಪತ್ನಿಯ ಮೂಲಕ, ಸುಳ್ಳು ದೂರು ದಾಖಲಿಸುತ್ತಾ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ಕಂದಾಯ ಇಲಾಖಾಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸದೆ ಗೊಂದಲವಾಗಿದೆ. ಗ್ರಾಪಂ ಸಿಬ್ಬಂದಿ ಅಳತೆಮಾಡಲು ಹೋದರೆ, ಮಹಿಳೆ ವಿಷದಬಾಟಲು ಹಿಡಿದು ಸಿಬ್ಬಂದಿಯನ್ನು ಬೆದರಿಸುತ್ತಾರೆ. ಕೂಡಲೆ, ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಗ್ರಾಮಸ್ಥರ ಪರವಾಗಿ ಜಿಪಂ ಮಾಜಿ ಸದಸ್ಯ ಶಿವಣ್ಣ, ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ, ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಸಮಸ್ಯೆ ಅತಿರೇಕಕ್ಕೆ ಹೋಗುವ ಮುನ್ನ ಸೌಹಾರ್ದಯುತವಾಗಿ ಬಗೆಹರಿಸುವಂತೆ ಆಗ್ರಹಿಸಿದರು. ಈ ಮೇರೆಗೆ, ತಹಸೀಲ್ದಾರ್
ಪುಟ್ಟನರಸಯ್ಯ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದಾಗಿ, ಮಹಿಳೆ ಸುಳ್ಳುದೂರು ದಾಖಲಿಸಿದಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು. ಮಹಿಳಾ ಪ್ರಮುಖರಾದ ಹೊನ್ನಮ್ಮ, ರತ್ನಮ್ಮ, ಭಾಗ್ಯಮ್ಮ, ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

