ಗುಣಮಟ್ಟದ ಶಿಕ್ಷಣಕ್ಕೆ ಪೋಷಕರು ಮುಂದಾಗಲಿ
ಕ.ಪ್ರ. ವಾರ್ತೆ ಮಧುಗಿರ್ಣಿ ಫೆ.19
ಮಕ್ಕಳಲ್ಲಿ ಬುದ್ಧಿ ಶಕ್ತಿ ಹೆಚ್ಚಿರುವ ಕಾರಣ ಪೋಷಕರು ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.
ಇಲ್ಲಿನ ವಿಕಾಸ ಸೌಧದಲ್ಲಿ ಏರ್ಪಡಿಸಿದ್ದ ಸಾ.ಶಿ.ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಧುಗಿರಿ ಆಶ್ರಯದಲ್ಲಿ ಸಮುದಾಯ ಜಾಗೃತಿ ದಾಖಲೀಕರಣ ಕಾರ್ಯಕ್ರಮ ಆರ್.ಟಿ.ಇ.ಬಗ್ಗೆ ಜನಪ್ರತಿನಿಧಿಗಳಿಗೆ ಒಂದು ದಿನದ ತರಬೇತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
6 ರಿಂದ 14 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸುವುದು ಸರ್ಕಾರದ ಜವಾಬ್ದಾರಿ. ಆದಕಾರಣ ಪೋಷಕರು ಹಾಗೂ ಜನಪ್ರತಿನಿಧಿಗಳು ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ಕಲಿಸಬೇಕು. ಕೇರಳ ರಾಜ್ಯದಲ್ಲಿ ಶೇ.100 ರಷ್ಟು ಸಾಕ್ಷರತೆ ಸಾಧಿಸಿದ್ದಾರೆ. ನಮ್ಮಲ್ಲೂ ಕೂಡ ಹಿಂದೆ ಹೋಲಿಸಿದರೆ ಇಂದು ಹೆಚ್ಚು ಸಾಕ್ಷರತೆ ಪ್ರಮಾಣ ಹೆಚ್ಚಿದೆ. ವಿದ್ಯೆ ಸಮಾಜದ ಆಗು-ಹೋಗುಗಳನ್ನು ಅರಿತು ಕೊಳ್ಳಲು ಒಂದು ಸಾಧನ, ಹಾಗಾಗಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬಂದಾಗ ಅದಕ್ಕೆ ಪೂರಕವಾಗಿ ಪೋಷಕರು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ವಿದ್ಯೆ ಕೊಡಬೇಕು. ಪೋಷಕರು ಈ ಕಾರ್ಯಾಗಾರದ ಲಾಭ ಪಡೆದು ಗ್ರಾಮೀಣ ಜನರಿಗೆ ಮುಟ್ಟಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್.ರಾಮಕೃಷ್ಣಯ್ಯ ಮಾತನಾಡಿ, ಶೋಷಿತ ಕೆಳ ವರ್ಗದ ಜನರಿಗೆ ಎಲ್ಲ ಖಾಸಗಿ ಶಾಲೆಗಳು ಶೇ.25ರಷ್ಟು ಸೀಟು ಮೀಸಲಿಡಬೇಕು. 2014-15ನೇ ಸಾಲಿಗೆ ದಾಖಲಾತಿ ಅರ್ಜಿಗಳು ಬಂದಿದ್ದು ಈ ಕೋಟದಡಿ ಜನರಿಗೆ ಜಾಗೃತಿ ಮೂಡಿಸುವುದೇ ಈ ತರಬೇತಿ ಉದ್ದೇಶ ಎಂದರು.
ತಾ.ಪಂ.ಅಧ್ಯಕ್ಷೆ ಸುನಂದ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ತಾ.ಪಂ.ಸದಸ್ಯರಾದ ಯಶೋಧ ರಾಜಣ್ಣ, ಶಾಂತಮ್ಮ, ನಾಗಮ್ಮ, ನರಸಿಂಹಯ್ಯ, ಇಓ ಮಹಲಿಂಗಯ್ಯ, ವಿ.ಎಚ್. ವೆಂಕಟೇಶ್, ಮಹಾಲಿಂಗೇಶ್ ಉಪಸ್ಥಿತರಿದ್ದರು.
ದೂರದರ್ಶಿತ್ವದಿಂದ ಉತ್ತಮ ನಾಯಕ
ಕ.ಪ್ರ. ವಾರ್ತೆ ತುಮಕೂರು ಫೆ.19
ದೂರದರ್ಶಿತ್ವ, ಪ್ರಾಮಾಣಿಕ ಹೋರಾಟ ಹಾಗೂ ಬಡವರ ಬಗ್ಗೆ ಕಳಕಳಿ ಮುಂತಾದ ಗುಣಗಳಿಂದಲೇ ಉತ್ತಮ ನಾಯಕನಾಗಲು ಸಾಧ್ಯ. ಈ ದಿಸೆಯಲ್ಲಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆದ ಕ್ಯಾತ್ಸಂದ್ರ ರಾಜಣ್ಣನವರು ಒಂದು ಉತ್ತಮ ನಿದರ್ಶನವೆಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ಅವರು ಕ್ಯಾತ್ಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಚಂದ್ರಮೌಳೇಶ್ವರ ಸಹಕಾರ ಸಂಘ ಸನ್ ರೈಸ್ ಸೌಹಾರ್ದ ಸಹಕಾರಿ, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ, ಸೋಮೇಶ್ವರ ಗ್ರಾಮಾಂತರ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ದ್ವಿತೀಯ ಬಾರಿಗೆ ಆಯ್ಕೆಗೊಂಡಿರುವ ಆರ್. ರಾಜೇಂದ್ರ ಅವರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯುವ ನಾಯಕ ರಾಜೇಂದ್ರರವರು ತಮ್ಮ ತಂದೆಯವರ ಸಂಘಟನಾ ಶಕ್ತಿ ಮತ್ತು ಬಡವರ ಬಗೆಗೆ ಕಳಕಳಿ ಮುಂತಾದ ಗುಣಗಳನ್ನು ಬೆಳೆಸಿಕೊಂಡು ಉತ್ತಮ ನಾಯಕನಾಗಿ ಹೊರಹೊಮ್ಮುವಂತೆ ಶುಭ ಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕ್ಯಾತ್ಸಂದ್ರ ವಿ.ಎಸ್.ಎಸ್.ಎನ್.ನ ಅಧ್ಯಕ್ಷರೂ ಹಾಗೂ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ಪಿ. ಮೂರ್ತಿ ರಾಜೇಂದ್ರ ಅವರು ಉದಯೋನ್ಮುಖ ನಾಯಕರಾಗಿದ್ದು ಮುಂಬರುವ ದಿನಗಳಲ್ಲಿ ಅವರಿಗೆ ಉಜ್ವಲ ಭವಿಷ್ಯ ಇದೆ ಎಂದರು.
ವಿ.ಎಸ್.ಎಸ್.ಎನ್.ನಿಂದ ಈಗಾಗಲೇ 149 ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು 19 ಜಂಟಿ ಬಾಧ್ಯತಾ ಗುಂಪುಗಳನ್ನು ಸಹ ಡಿ.ಸಿ.ಸಿ. ಬ್ಯಾಂಕಿನ ನೆರವಿನಿಂದ ರಚಿಸಿ ಈ ಭಾಗದ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟಿ.ಎ.ಪಿ.ಸಿ.ಎಂ.ನ ಅಧ್ಯಕ್ಷ ಬಿ.ಸಿ. ಉಮೇಶ್, ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮುಷ್ತಾಕ್ ಅಹ್ಮದ್, ಯುವ ಸಹಕಾರಿ ವಿಜಯಕುಮಾರ್, ಸಂಘದ ಮಾಜಿ ಅಧ್ಯಕ್ಷ ಕಲ್ಲಳ್ಳಿ ದೇವರಾಜು, ಸಹಕಾರಿ ಸಲಹೆಗಾರ ಶಂಕರ್ ಹೆಗಡೆ ಮಾತನಾಡಿದರು.
ಕೃತಜ್ಞತೆ: ಅಭಿನಂದನೆಗೆ ಉತ್ತರ ನೀಡಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಆರ್. ರಾಜೇಂದ್ರರವರು ಕ್ಯಾತ್ಸಂದ್ರದ ಸಹಕಾರ ಸಂಘ ಸಂಸ್ಥೆಗಳು ನನ್ನ ಮೇಲೆ ಇಟ್ಟಿರುವ ಗೌರವ ಹಾಗೂ ಪ್ರೀತ್ಯಾದರಗಳಿಗೆ ಕೃತಜ್ಞತೆ ಅರ್ಪಿಸಿ ಮುಂಬರುವ ದಿನಗಳಲ್ಲಿ ತಮ್ಮೆಲ್ಲರ ಆಶೀರ್ವಾದದಿಂದ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ರವಿಕುಮಾರ್ ಹಾಗೂ ಸಂಘದ ನಿರ್ದೇಶಕರಾದ ಕೆ.ಎ. ದೇವರಾಜ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೈರೋಜ್ ಬೇಗ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

